ಸುಳ್ವಾಡಿ ದುರಂತದಲ್ಲಿ ಬದುಕಿದವರಿಗೆ ನರಕಯಾತನೆ: 6 ವರ್ಷ ಕಳೆದರೂ ಕಾಡುತ್ತಿದೆ ಅನಾರೋಗ್ಯ
ಮಾರಮ್ಮನ ದೇಗುಲದ ಪ್ರಸಾದ ಜನರ ಪ್ರಾಣವನ್ನೇ ತೆಗೆದಿತ್ತು. ಟೊಮ್ಯಾಟೋ ಬಾತ್ ವಿಷವಾಗಿತ್ತು. ಮಕ್ಕಳು, ಮಹಿಳೆಯರು, ಪುರುಷರು. ವೃದ್ಧರು ನರಳಾಡಿ ನರಳಾಡಿ ಉಸಿರು ಚೆಲ್ಲಿದ್ದರು. ಕೀಚಕರ ಕೃತ್ಯ ಕುಟುಂಬಗಳನ್ನೇ ಸರ್ವನಾಶ ಮಾಡಿತ್ತು. ಇದೀಗ 6 ವರ್ಷ ಕಳೆದರೂ ಸುಳ್ವಾಡಿಯ ವಿಷ ಪ್ರಸಾದದ ನೋವು ಇನ್ನೂ ಕಡಿಮೆ ಆಗಿಲ್ಲ. ಅಂದು ಪ್ರಸಾದ ಸೇವಿಸಿದ್ದ ಭಕ್ತರು ಇಂದಿಗೂ ನರಕ ಅನುಭವಿಸುತ್ತಿದ್ದಾರೆ.
ಚಾಮರಾಜನಗರ, ಜನವರಿ 24: ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಮಾರಮ್ಮನ ದೇಗುಲದಲ್ಲಿ ಪ್ರಸಾದಕ್ಕೆ ವಿಷ ಹಾಕಿದ್ದರಿಂದಿಂದಾಗಿ 2018 ರ ಡಿಸೆಂಬರ್ 14 ರಂದು 17 ಮಂದಿ ಸಾವಿಗೀಡಾಗಿದ್ದರು. 120 ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದರು. ಸುಳ್ವಾಡಿ ಪ್ರಾಸಾದ ದುರಂತ ಸಂಭವಿಸಿ 6 ವರ್ಷದ ಕಳೆದರೂ ಸಂತ್ರಸ್ತರ ಗೋಳು ಮಾತ್ರ ಹೇಳತೀರದಾಗಿದೆ. ಅನಾರೋಗ್ಯ ಪೀಡೀತರ ಬಗ್ಗೆ ಆರೋಗ್ಯ ಇಲಾಖೆ ಕಾಳಜಿ ವಹಿಸಿದೆ. ಆದರೂ ಸಂತ್ರಸ್ತರು ಇಂದಿಗೂ ಮೈಕೈ ನೋವು, ತಲೆನೋವು, ವಾಂತಿ, ಬೇಧಿ, ದೃಷ್ಟಿಹೀನತೆ ಸೇರಿದಂತೆ ನಾನಾ ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದಾರೆ.
ಆರೋಗ್ಯ ಸಮಸ್ಯೆಗಳಿಂದಾಗಿ ಕೂಲಿ ಕೆಲಸ ಮಾಡುವುದಕ್ಕೆ ಆಗುತ್ತಿಲ್ಲ. ಆರೋಗ್ಯ ಸಮಸ್ಯೆಯಿಂದ ಬದುಕೇ ಸರ್ವನಾಶವಾಗಿದೆ ಎಂದು ಸಂತ್ರಸ್ತರು ಕಣ್ಣೀರು ಹಾಕುತ್ತಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ಹನೂರು ತಾಲೂಕಿನ ಎಂಜಿ ದೊಡ್ಡಿಯ 23 ಮಂದಿಯನ್ನು ಸಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಹಿಳೆಯರು, ಪುರುಷರು, ಮಕ್ಕಳು, ವೃದ್ಧೆಯರ ಮೇಲೆ ವೈದ್ಯರು ನಿಗಾ ಇಟ್ಟಿದ್ದಾರೆ. ಆದರೆ, ಪ್ರಾಣಕ್ಕೆ ಹಾನಿಯಾಗುವ ಯಾವುದೇ ಸಮಸ್ಯೆಗಳು ಇಲ್ಲ. ಮನೋರೋಗದ ಸಮಸ್ಯೆಯಿಂದಾಗಿ ಅವರಿಗೆ ಈ ರೀತಿ ಆಗುತ್ತಿದೆ ಎಂದು ವೈದ್ಯ ಮಹೇಶ್ ಹೇಳಿದ್ದಾರೆ.
ಏನೇ ಆದರೂ ಕಿಚ್ಚಗುತ್ತಿ ಮಾರಮ್ಮನ ದೇಗುದಲ್ಲಿ ವಿಷ ಪ್ರಸಾದವನ್ನು ತಿಂದು ಪ್ರಾಣ ಉಳಿಸಿಕೊಂಡವರ ಕಥೆ ಕರುಣಾಜನಕವಾಗಿದೆ. ನಿತ್ಯ ನರಕ ಅನುಭವಿಸ್ತಾ ಕಣ್ಣೀರು ಹಾಕುವಂತಾಗಿದೆ.
ಆಡಳಿತ ಗೊಂದಲ, ಸಂಘರ್ಷಕ್ಕೆ 17 ಅಮಾಯಕ ಜೀವಗಳು ಬಲಿ
ಚಾಮರಾಜನಗರದ ಸುಳ್ವಾಡಿ ಗ್ರಾಮದ ಕಿಚ್ಚಗುತ್ತಿ ಮಾರಮ್ಮ ದೇವಲಯಕ್ಕೆ ಉತ್ತಮ ಆದಾಯ ಬರುತ್ತಿದ್ದು, ಆಡಳಿತ ಮಂಡಳಿಯಲ್ಲಿ ಹಿಡಿತಕ್ಕೆ ಎರಡು ಬಣಗಳ ನಡುವೆ ಸಂಘರ್ಷ ಇತ್ತು. ಮಂಡಳಿ ಇಬ್ಭಾಗವಾಗಿತ್ತು. ಇಂಥ ಸಂದರ್ಭದಲ್ಲೇ ನೂತನ ಗೋಪುರ ನಿರ್ಮಾಣಕ್ಕೆ ಶಂಕುಸ್ಥಾಪನೆ, ಪೂಜೆ ಹಮ್ಮಿಕೊಳ್ಳಲಾಗಿತ್ತು. ಆ ಸದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಹೆಸರು ಕೆಡಿಸಬೇಕು ಹಾಗೂ ಗೋಪುರ ನಿರ್ಮಾಣ ತಡೆ ಹಿಡಿಯಬೇಕೆಂಬ ಉದ್ದೇಶದಿಂದ ಕೆಲವರು ಪ್ರಸಾದಕ್ಕೆ ಕ್ರಿಮಿನಾಶಕ ಬೆರೆಸಿದ್ದರು.
ಇದನ್ನೂ ಓದಿ: ಚಾಮರಾಜನಗರ: ಚಿರತೆ ಸೆರೆಗಾಗಿ ಇಟ್ಟಿದ್ದ ಬೋನಿಗೆ ಬಿದ್ದ ವ್ಯಕ್ತಿ! ಆಮೇಲೇನಾಯ್ತು…
ಪ್ರಸಾದಕ್ಕೆ ವಿಷ ಬೆರೆಸಿದ ಪರಿಣಾಮ ಅದನ್ನು ಸೇವಿಸಿದ 17 ಮಂದಿ ಮೃತಪಟ್ಟು, 120ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದರು. ಅಸ್ವಸ್ಥರ ಪೈಕಿ ಅನೇಕರು ಇಂದಿಗೂ ಅನಾರೋಗ್ಯ ಎದುರಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ