ಚಾಮರಾಜನಗರ: ಟಿವಿ9 ವರದಿಯ ಬಿಗ್ ಇಂಪ್ಯಾಕ್ಟ್; ಪಚ್ಚೆದೊಡ್ಡಿ ಮಕ್ಕಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಜಿಲ್ಲಾಧಿಕಾರಿ
ಚಾಮರಾಜನಗರದ ಪಚ್ಚೆದೊಡ್ಡಿ ಗ್ರಾಮದ ವಿದ್ಯಾರ್ಥಿಗಳು ಪ್ರತಿದಿನ 14 ಕಿ.ಮೀ ಕಾಡಿನಲ್ಲಿ ನಡೆದು ಶಾಲೆಗೆ ಹೋಗುತ್ತಿದ್ದರು. ಕಾಡು ಪ್ರಾಣಿಗಳ ಹಾವಳಿಯಿಂದ ಭಯಭೀತರಾಗಿದ್ದ ವಿದ್ಯಾರ್ಥಿಗಳು ಸಿಎಂಗೆ ಪತ್ರ ಬರೆದಿದ್ದರು. ಟಿವಿ9 ವರದಿ ನಂತರ ಎಚ್ಚೆತ್ತ ಜಿಲ್ಲಾಧಿಕಾರಿ ಶಿಲ್ಪಾನಾಗ್, ಅರಣ್ಯ ಇಲಾಖೆ ಮೂಲಕ ವಿದ್ಯಾರ್ಥಿಗಳಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ.

ಚಾಮರಾಜನಗರ, ಡಿಸೆಂಬರ್ 06: ಜಿಲ್ಲೆಯ ಪಚ್ಚೆದೊಡ್ಡಿ ಗ್ರಾಮದ ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆಗೆ 14 ಕಿ.ಮೀ ನಡೆದೇ ಹೋಗಬೇಕಿತ್ತು. ರಸ್ತೆಯಲ್ಲಿ ಕಾಡು ಪ್ರಾಣಿಗಳ ಕಾಟದಿಂದ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಭಯಪಡುತ್ತಿದ್ದು, ಈ ಕುರಿತು ಸಿಎಂ ಸಿದ್ದರಾಮಯ್ಯ ( Siddaramaiah) ಮತ್ತು ಶಾಸಕರಿಗೆ ಪತ್ರ ಬರೆದಿದ್ದನ್ನು ಟಿವಿ9 ವರದಿ ಮಾಡಿತ್ತು. ಆ ಬಳಿಕ ಎಚ್ಚೆತ್ತ ಜಿಲ್ಲಾಧಿಕಾರಿ, ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ.
ವಿದ್ಯಾರ್ಥಿಗಳ ಕೂಗು ಕೇಳಿಸಿಕೊಂಡ ಜಿಲ್ಲಾಧಿಕಾರಿ
ದಟ್ಟ ಕಾಡಿನಲ್ಲಿ ಕಿಲೋಮೀಟರ್ಗಟ್ಟಲೆ ಸಂಚರಿಸಬೇಕಿದ್ದ ಆದಿವಾಸಿ ಸೋಲಿಗ ವಿದ್ಯಾರ್ಥಿಗಳ ಸಂಕಷ್ಟವನ್ನು ಶನಿವಾರ ಟಿವಿ9 ವರದಿ ಮಾಡಿತ್ತು. ಜಿಲ್ಲೆಯಲ್ಲಿ ಹೆಚ್ಚಿದ್ದ ಕಾಡುಪ್ರಾಣಿಗಳ ಹಾವಳಿಯಿಂದ ಶಾಲಾ-ಕಾಲೇಜುಗಳಿಗೆ ನಡೆದು ಹೋಗಲು ಹೆದರುತ್ತಿದ್ದ ವಿದ್ಯಾರ್ಥಿಗಳು ಸಿಎಂ ಮತ್ತು ಶಾಸಕರಿಗೆ ಪತ್ರ ಬರೆದು ಸುರಕ್ಷಿತ ಪ್ರಯಾಣಕ್ಕೆ ಸಾರಿಗೆ ವ್ಯವಸ್ಥೆ ಮಾಡುವಂತೆ ಕೇಳಿದ್ದರು. ಇದಕ್ಕೆ ಸ್ಪಂದಿಸಿರುವ ಜಿಲ್ಲಾಧಿಕಾರಿ ಶಿಲ್ಪಾನಾಗ್, ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಬಾಸ್ಕರ್ಗೆ ಕರೆ ಮಾಡಿ ಮಾಹಿತಿ ಪಡೆದಿದ್ದುರು. ಬಳಿಕ ಜನ ವನ ಯೋಜನೆಯಡಿ ಅರಣ್ಯ ಇಲಾಖೆ ವತಿಯಿಂದ ಪ್ರತಿನಿತ್ಯ ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳನ್ನು ಪಿಕಪ್ ಹಾಗೂ ಡ್ರಾಪ್ ಮಾಡುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ.
ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಮ್ಮ ದಯನೀಯ ಸ್ಥಿತಿ ಹೇಳಿಕೊಂಡಿದ್ದ ವಿದ್ಯಾರ್ಥಿಗಳು, ನಮ್ಮ ಗ್ರಾಮದಲ್ಲಿ ರಸ್ತೆಯ ಅವ್ಯವಸ್ಥೆ, ಕಾಡಾನೆ, ಚಿರತೆ ಮತ್ತು ಹುಲಿಯಂತಹ ಪ್ರಾಣಿಗಳು ರಸ್ತೆಯಲ್ಲಿಯೇ ಸಂಚರಿಸುವುದು ಸೇರಿ ಹಲವು ಸಮಸ್ಯೆಯ ಕುರಿತು ಉಲ್ಲೇಖಿಸಿದ್ದರು. ನಾವು ದಿನ ನಿತ್ಯ ಶಾಲಾ- ಕಾಲೇಜುಗಳಿಗೆ ಹೋಗಲು ಸುಮಾರು 14 ಕಿ.ಮೀ ನಡೆಯಬೇಕು. ನಮಗೆ ಶಾಲಾ ವಾಹನ ಅಥವಾ ಬಸ್ಸಿನ ವ್ಯವಸ್ಥೆಯೂ ಇಲ್ಲದ ಕಾರಣ ಕಾಲ್ನಡಿಗೆಯಲ್ಲಿಯೇ ಸಂಚರಿಸಬೇಕಾಗಿದೆ ಎಂದಿದ್ದರು. ಅವರ ಕಷ್ಟ ಪರಿಹರಿಸಲು ಬಸ್ ಅಥವಾ ವ್ಯಾನ್ನ ವ್ಯವಸ್ಥೆ ಮಾಡುವಂತೆ ಮುಖ್ಯಮಂತ್ರಿಗಳಲ್ಲಿ ಕೇಳಿಕೊಂಡಿದ್ದರು. ಈ ಸಮಸ್ಯೆಗೀಗ ಪರಿಹಾರ ಸಿಕ್ಕದ್ದು, ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:26 am, Wed, 10 December 25



