ಚಾಮರಾಜನಗರ, ಮೇ 22: ಗಡಿನಾಡು ಚಾಮರಾಜನಗರದಲ್ಲಿ (Chamarajanagar) ಮಂಗಳವಾರ ಭಾರಿ ಮಳೆಯಾಗಿದೆ. ನಿರಂತರವಾಗಿ ಸುರಿದ ಭಾರಿ ಮಳೆಗೆ (Rain) ಗುಂಡ್ಲುಪೇಟೆ ತಾಲೂಕಿನ ಮಂಚಹಳ್ಳಿ ಗ್ರಾಮದಲ್ಲಿ ಸಿದ್ದಶೆಟ್ಟಿ ಎಂಬವರಿಗೆ ಸೇರಿದ ಮನೆಗೋಡೆ ಕುಸಿತವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಮತ್ತೊಂದೆಡೆ, ರಾತ್ರಿ ಸುರಿದ ಭಾರಿ ಮಳೆಗೆ ಜಮೀನೆಲ್ಲಾ ಕೆರೆಯಂತಾಗಿದ್ದು, ರೈತರು ಕಂಗಾಲಾಗಿದ್ದಾರೆ.
ಈ ವರ್ಷ ಪೂರ್ವ ಮುಂಗಾರು ಮಳೆ ಬೀಳುತ್ತಿದ್ದು ಆರಂಭದಲ್ಲಿ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿತ್ತು. ಆದರೆ ಆ ಸಂತಸ ಹೆಚ್ಚಿನ ದಿನ ಇರಲೇ ಇಲ್ಲ. ವರುಣನ ರುದ್ರ ನರ್ತನಕ್ಕೆ ಗಡಿ ನಾಡ ಜನರು ಹೈರಾಣಾಗಿ ಹೋಗಿದ್ದಾರೆ. ತಡ ರಾತ್ರಿ ಸುರಿದ ಭಾರಿ ಮಳೆಗೆ ಜಮೀನೆಲ್ಲಾ ಕೆರೆಯಂತಾಗಿದೆ. ಬೆಳೆಗಳು ಮಳೆಯ ನೀರಿನಲ್ಲಿ ಮುಳುಗಿ ಹೋಗಿದ್ದು ರೈತರು ಕಣ್ಣೀರಲ್ಲಿ ಕೈ ತೊಳೆಯುವ ಪರಿಸ್ಥಿತಿ ಈಗ ಎದುರಾಗಿದೆ.
ಚಾಮರಾಜನಗರ ಹಾಗೂ ಸುತ್ತಮುತ್ತ ಭಾರಿ ಮಳೆಯಾಗಿದೆ. 2 ಗಂಟೆಗೂ ಹೆಚ್ಚು ಜಾಲ ನಿರಂತರ ಸುರಿದ ಮಳೆಗೆ ಕೂಡ್ಲೂರು ಪಂಚಾಯ್ತಿಯ ವಿದ್ಯಾನಗರದ ತಗ್ಗು ಪ್ರದೇಶದಲ್ಲಿ ನೀರು ನಿಂತು ಹಾವು ಚೇಳುಗಳು ಮನೆ ಒಳಕ್ಕೆ ನುಗ್ಗಿದ ಪರಿಣಾಮ ಸ್ಥಳೀಯ ನಿವಾಸಿಗಳು ಭಯ ಭೀತರಾಗಿದ್ದಾರೆ. ಪ್ರತಿ ಬಾರಿ ಮಳೆ ಬಂದಾಗಲು ಇದೇ ರೀತಿ ಸಮಸ್ಯೆ ಆಗುತ್ತಿದ್ದು ಈ ಸಮಸ್ಯೆಗೆ ಅಧಿಕಾರಿಗಳೇ ಕಾರಣವೆಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಳೆಯಿಂದ ಇಷ್ಟೆಲ್ಲ ಅವಾಂತರಗಳು ಸಂಭವಿಸಿದರೂ ಯಾವೊಬ್ಬ ಜನ ಪ್ರತಿನಿಧಿಗಳು ಬಾರದೆ ಇರುವುದು ನಿರ್ಲ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.
ಇದನ್ನೂ ಓದಿ: ಕೊಡಗು, ಬೆಂಗಳೂರು, ಕರಾವಳಿ ಜಿಲ್ಲೆಗಳಲ್ಲಿ ಮೇ 28ರವರೆಗೂ ಮಳೆ
ಪೂರ್ವ ಮುಂಗಾರಿಗೆ ಗಡಿ ನಾಡ ಜನತೆ ತತ್ತರಿಸಿ ಹೋಗಿದ್ದು ಮುಂಬರುವ ಮಹಾ ಮಳೆ ಮತ್ತೆ ಏನೆಲ್ಲ ಅವಾಂತರಗಳನ್ನು ಸೃಷ್ಟಿ ಮಾಡುತ್ತದೆಂಬ ಭಯ ಜನತೆಯಲ್ಲಿ ಕಾಡುತ್ತಿದೆ. ಆದಷ್ಟು ಬೇಗ ಜಿಲ್ಲಾಡಳಿತ ಮಳೆಗಾಲವನ್ನು ಎದುರಿಸಲು ಸಜ್ಜಾಗಬೇಕಿದೆ.
ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ