Chamarajanagar: ಅಬಕಾರಿ ಇಲಾಖೆಗೆ ಲಾಸ್, ಹೊಸ ವರ್ಷಕ್ಕೆ ಮದ್ಯ ಪ್ರಿಯರಲ್ಲಿಲ್ಲ ಕ್ರೇಜ್
ಚಾಮರಾಜನಗರದಲ್ಲಿ ಮದ್ಯ ಮಾರಾಟ ಭಾರೀ ಕುಂಠಿತಗೊಂಡಿದ್ದು, ರಾಜ್ಯ ಸರ್ಕಾರದ ಮದ್ಯ ದರ ಏರಿಕೆ ಅಬಕಾರಿ ಇಲಾಖೆಗೆ ನಷ್ಟ ತಂದಿದೆ. ಕಡಿಮೆ ಬೆಲೆಗೆ ಹೆಚ್ಚು ಬಿಯರ್ ಮಾರಾಟವಾಗುತ್ತಿದ್ದ ಜಿಲ್ಲೆಯಲ್ಲೀಗ ಜನರು ಮದ್ಯಪಾನವನ್ನೇ ತ್ಯಜಿಸುತ್ತಿದ್ದಾರೆ. ಕಳೆದ 6 ತಿಂಗಳಲ್ಲಿ ವಿಸ್ಕಿ, ಬಿಯರ್ ಮಾರಾಟದಲ್ಲಿ ಗಣನೀಯ ಕುಸಿತ ಕಂಡಿದೆ ಎಂದು ಅಬಕಾರಿ ಇನ್ಸ್ಪೆಕ್ಟರ್ ಹೇಳಿದ್ದಾರೆ.

ಚಾಮರಾಜನಗರ, ಡಿಸೆಂಬರ್ 15: ಹೊಸ ವರ್ಷವನ್ನು (New Year 2026) ಜೋಶ್ನಿಂದ ಸ್ವಾಗತಿಸಲು ಲಕ್ಷಾಂತರ ಮಂದಿ ಈಗಾಗಲೇ ತಯಾರಿ ಮಾಡಿಕೊಂಡಿರುತ್ತಾರೆ. ಗುಂಡು, ತುಂಡು , ಡಿಜೆ , ಪಬ್ಬು ಎಂದೆಲ್ಲಾ ಭರ್ಜರಿ ಪ್ಲಾನಿಂಗ್ ಮಾಡಿಕೊಂಡಿರುತ್ತಾರೆ. ಆದರೆ ಸರ್ಕಾರ ಮದ್ಯದ ದರ ಹೆಚ್ಚಿಸಿರುವುದರಿಂದ ಈ ಬಾರಿ ಚಾಮರಾಜನಗರದಲ್ಲಿ ಮದ್ಯ ಮಾರಾಟ ಭಾರೀ ಕುಂಠಿತ ಕಂಡಿದೆ. ಜಿಲ್ಲೆಯಲ್ಲಿ ಮೊದಲು ನೀರಿನಂತೆ ಮಾರಾಟವಾಗುತ್ತಿದ್ದ ಬಿಯರ್ ಅನ್ನು ಈಗ ಜನ ತಿರುಗಿಯೂ ನೋಡುತ್ತಿಲ್ಲ.
ಬಿಯರ್ ಕಡೆ ಜನ ಮುಖಾನೂ ಹಾಕ್ತಿಲ್ಲ
ರಾಜ್ಯದಲ್ಲಿ ಕಡಿಮೆ ಬೆಲೆಗೆ ಅತಿ ಹೆಚ್ಚು ಬಿಯರ್ ಮಾರಾಟವಾಗುವ ಜಿಲ್ಲೆಗಳಲ್ಲಿ ಚಾಮರಾಜನಗರ 2ನೇ ಸ್ಥಾನ ಪಡೆದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಚಾಮರಾಜನಗರ ಚೀಪರ್ ಬಿಯರ್ ಮಾರಾಟದಲ್ಲಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆಯಲಿದೆ ಎಂದು ಅಂದಾಜಿಸಲಾಗಿತ್ತು. ಇದೀಗ ಈ ಅಂದಾಜಿಗೆ ತೆರೆ ಬಿದ್ದಿದೆ. ರಾಜ್ಯಸರ್ಕಾರ ಮದ್ಯದ ದರ ಹೆಚ್ಚಿಸಿದ್ದು, ಅಬಕಾರಿ ಇಲಾಖೆ ಭಾರೀ ನಷ್ಟಕ್ಕೆ ಗುರಿಯಾಗಿದೆ. ಮೊದಲೆಲ್ಲಾ ಜಿಲ್ಲೆಯಲ್ಲಿ ನೀರಿನ ಬಾಟೆಲ್ಗಳ ರೀತಿಯಲ್ಲಿ ಬಿಯರ್ ಸೇಲ್ ಆಗುತ್ತಿದ್ದರೆ, ದರ ಏರಿಕೆಯ ಬಳಿಕ ಮದ್ಯದಂಗಡಿ ಕಡೆ ಜನ ಮುಖವನ್ನೂ ಹಾಕುತ್ತಿಲ್ಲ. ರಾಜ್ಯ ಸರ್ಕಾಯ ಅಬಕಾರಿ ಇಲಾಖೆಯ ಮೇಲೆ ಅತಿ ಹೆಚ್ಚು ಸುಂಕ ವಿಧಿಸಲು ಶುರು ಮಾಡಿದಾಗ, ದರ ಹೆಚ್ಚಳದಿಂದ ಜನ ಮದ್ಯಪಾನ ಮಾಡುವುದನ್ನೇ ಕೈ ಬಿಟ್ಟಿದ್ದಾರೆ ಎಂದು ಅಬಕಾರಿ ಇನ್ಸ್ಪೆಕ್ಟರ್ ತನ್ವೀರ್ ಹೇಳಿದ್ದಾರೆ.
ಇದನ್ನೂ ಓದಿ New Year: ಬೆಂಗಳೂರಿನಲ್ಲಿ ನ್ಯೂ ಇಯರ್ ಸೆಲೆಬ್ರೆಷನ್ ತಯಾರಿ ಜೋರು, ನಗರದಾದ್ಯಂತ ಪೊಲೀಸರು ಹೈ ಅಲರ್ಟ್
ಅಬಕಾರಿ ಇಲಾಖೆಗೆ ಬಿಗ್ ಲಾಸ್
ಕಳೆದ 6 ತಿಂಗಳಲ್ಲಿ ಸ್ಲ್ಯಾಬ್ 1 ಚೀಪರ್ ವಿಸ್ಕಿಗಳಲ್ಲಿ ಶೇಕಡ 14.38 ರಷ್ಟು ಮಾರಾಟವಾಗದೆ ನಷ್ಟವಾಗಿದ್ದರೆ, 28798 ಕೇಸ್ನಷ್ಟು ವಿಸ್ಕಿ ಮಾರಾಟವಾಗದೆ ಹಾಗೇ ಉಳಿದಿದೆ. ಕಳೆದ ವರ್ಷ ಇನ್ನಿಲ್ಲದೆ ಬಿಕರಿಯಾಗುತ್ತಿದ್ದ ಬಿಯರ್ಗಳ ಪೈಕಿ ಕಳೆದ 6 ತಿಂಗಳಲ್ಲಿ 70642 ಕೇಸ್ನಷ್ಟು ಬಿಯರ್ ಮಾರಾಟ ವಾಗದೆ ಭಾರೀ ನಷ್ಟಕ್ಕೆ ಗುರಿಯಾಗಿದೆ. ಮದ್ಯದ ದರ ದಿನ ಕಳೆದಂತೆ ರಾಕೆಟ್ ವೇಗದಲ್ಲಿ ಏರುತ್ತಿರುವ ಕಾರಣ ಗಡಿ ನಾಡ ಮದ್ಯ ಪ್ರಿಯರು ಮದ್ಯವನ್ನೆ ತ್ಯಜಿಸಿದ್ದು, ವ್ಯಾಪಾರ ಕುಂಠಿತಗೊಂಡು ಅಬಕಾರಿ ಇಲಾಖೆ ನಷ್ಟ ಅನುಭವಿಸುತ್ತಿದೆ ಎಂದು ತನ್ವೀರ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



