ಚಾಮರಾಜನಗರ, ನ.14: ದಕ್ಷಿಣ ಭಾರತದ ಪ್ರಸಿದ್ದ ಯಾತ್ರಾ ಸ್ಥಳ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿರುವ ಮಲೆ ಮಹದೇಶ್ವರ ಬೆಟ್ಟ(Male Mahadeshwara Betta). ಈ ಬೆಟ್ಟದಲ್ಲಿ ನೆಲಸಿರುವ ಮಲೆ ಮಾದಪ್ಪ ಲಕ್ಷಾಂತರ ಭಕ್ತರ ಆರಾಧ್ಯ ದೈವ. ಇಲ್ಲಿ ವರ್ಷಕ್ಕೆ ಒಂದಲ್ಲ, ಎರಡಲ್ಲ ಮೂರು ಬಾರಿ ಅಂದರೆ, ಶಿವರಾತ್ರಿ , ಯುಗಾದಿ ಹಾಗೂ ದೀಪಾವಾಳಿಯಂದು ರಥೋತ್ಸವ ನಡೆಯುತ್ತದೆ. ಇದೇ ರೀತಿ ಇಂದು(ನ.14) ಬೆಟ್ಟದಲ್ಲಿ ಮಾದಪ್ಪನ ದೀಪಾವಳಿ ರಥೋತ್ಸವ, ಲಕ್ಷಾಂತರ ಭಕ್ತರ ಜಯಘೋಷಗಳ ನಡುವೆ ಸಂಭ್ರಮ ಸಡಗರಗಳೊಂದಿಗೆ ನಡೆಯಿತು. ಲಕ್ಷಾಂತರ ಮಂದಿ ಭಕ್ತರು ಮಾದಪ್ಪನ ರಥೋತ್ಸವವನ್ನು ಕಣ್ತುಂಬಿಕೊಂಡಿದ್ದಾರೆ.
ಇನ್ನು ಉಘೇ ಉಘೇ ಮಾದಪ್ಪ ಎನ್ನುತ್ತಾ ಅಸಂಖ್ಯಾತ ಮಂದಿ ಭಕ್ತರು ಮಾದಪ್ಪನ ತೇರು ಎಳೆದು, ತಮ್ಮ ಭಕ್ತಿ ಸಮರ್ಪಿಸಿದರು. ಮಹಿಳೆಯರಂತು ಕುಣಿದು ಕುಪ್ಪಳಿಸಿ ಭಕ್ತಿಯ ಪರಾಕಾಷ್ಠೆ ಮೆರೆದರು. ಹುಲಿವಾಹನ, ಬಸವವಾಹನ, ರುದ್ರಾಕ್ಷಿ ಮಂಟಪಗಳು, ಮಾದಪ್ಪನ ರಥದೊಂದಿಗೆ ಸಾಗಿ ರಥೋತ್ಸವಕ್ಕೆ ಮೆರಗು ತಂದವು. ಮಾದಪ್ಪನ ಭಕ್ತರು ಉರುಳುಸೇವೆ, ಪಂಜಿನ ಸೇವೆ, ಮುಡಿಸೇವೆ ಮೂಲಕ ಹರಕೆ ತೀರಿಸುತ್ತಿದ್ದರು.
ಇದನ್ನೂ ಓದಿ:ಮಲೆ ಮಹದೇಶ್ವರ ಬೆಟ್ಟದಲ್ಲಿ ಇಂದು ಹಾಲರವಿ ಸೇವೆ, ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ಭಕ್ತ ಸಮೂಹ
ರಾಜ್ಯದ ಮೂಲೆ ಮೂಲೆಗಳಿಂದ ಭಕ್ತ ಸಾಗರ ಹರಿದು ಬಂದಿತ್ತು. ಕಳೆದ ಮೂರು ದಿನಗಳಿಂದ ಸಾಗರೋಪಾದಿಯಲ್ಲಿ ಹರಿದು ಬಂದ ಭಕ್ತರಿಗೆ ವಿಶೇಷ ಅನ್ನದಾಸೋಹ ಕೂಡ ಮಾಡಲಾಗಿತ್ತು. ಮೂರು ದಿನಗಳಿಂದ ಮೂರು ಲಕ್ಷಕ್ಕೂ ಅಧಿಕ ಲಾಡು ಪ್ರಸಾದ ಮಾರಾಟವಾಗಿದೆ. ಮಾದಪ್ಪನ ಸನ್ನಿಧಿಯಲ್ಲಿ ದೀಪಾವಳಿಯ ಮೊದಲನೆ ದಿನ ಎಣ್ಣೆಮಜ್ಜನ ಸೇವೆ ನಡೆದರೆ, ಎರಡನೇ ದಿನ ಹಾಲರುವೆ ಉತ್ಸವ ನಡೆದಿತ್ತು. ಮೂರನೇ ದಿನವಾದ ಇಂದು ರಥೋತ್ಸವ ನಡೆಯುವುದರೊಂದಿಗೆ ಮೂರು ದಿನಗಳ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ತೆರೆಬಿದ್ದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ