
ಚಾಮರಾಜನಗರ, ಏಪ್ರಿಲ್ 7: ಬಂಡೀಪುರ ಅಭಯಾರಣ್ಯದ (Bandipur National Park) ಮೂಲಕ ತಮಿಳುನಾಡು (Tamil Nadu) ಹಾಗೂ ಕೇರಳ ರಾಜ್ಯಗಳಿಗೆ ಎರಡು ರಾಷ್ಟ್ರೀಯ ಹೆದ್ದಾರಿಗಳು (National Highway) ಹಾದು ಹೋಗಿವೆ. ಇಲ್ಲಿ ವಾಹನಗಳಿಗೆ ಸಿಲುಕಿ ವನ್ಯಜೀವಿಗಳು ಸಾವನ್ನಪ್ಪುತ್ತಿದ್ದ ಕಾರಣ 2009 ರಲ್ಲಿ ರಾತ್ರಿ ವಾಹನ ಸಂಚಾರ ನಿಷೇಧಿಸಿ ಆದೇಶಿಸಲಾಗಿತ್ತು. ಕೆಲವು ಮಾಫಿಯಾಗಳಿಗೆ ಇದರಿಂದ ಭಾರಿ ಹೊಡೆತ ಬಿದ್ದಿದೆ. ಕೇರಳ ಸರ್ಕಾರವಂತೂ ಇಲ್ಲಿ ವಾಹನ ಸಂಚಾರ ನಿಷೇಧ ತೆರವುಗೊಳಿಸಲು ರಾಜ್ಯ ಸರ್ಕಾರದ ಮೇಲೆ ನಿರಂತರ ಒತ್ತಡ ಹೇರುತ್ತಲೇ ಬಂದಿದೆ. ಇದೀಗ ವಯನಾಡು ಸಂಸದೆ ಪ್ರಿಯಾಂಕಾ ವಾದ್ರಾ ರಾತ್ರಿ ವಾಹನ ಸಂಚಾರ ನಿಷೇಧ ತೆರವಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ. ಇದರ ಜೊತೆಗೆ ವಯನಾಡ್‌ನಲ್ಲಿ ನಡೆದ ಕಾಂಗ್ರೆಸ್ ಕೃತಜ್ಞತಾ ಸಮಾವೇಶವೊಂದರಲ್ಲಿ ಪಾಲ್ಗೊಂಡಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಹ ಸಹ ರಾತ್ರಯ ಸಂಚಾರ ನಿಷೇಧ ತೆರವು ಮಾಡುವ ಬಗ್ಗೆ ಭರವಸೆ ನೀಡಿದ್ದರು. ಇತ್ತೀಚಿಗೆ ಅರಣ್ಯ ಸಚಿವ ಈಶ್ವರಖಂಡ್ರೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರೊಗಳೊಡನೆ ಸಭೆಯನ್ನೂ ನಡೆಸಿದ್ದರು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ರಾಜಕೀಯ ಹಿತಾಸಕ್ತಿಗೋಸ್ಕರ ನಿಷೇಧ ತೆರವುಗೊಳಿಸುವ ಆತಂಕ ಎದುರಾಗಿರುವುದರಿಂದ ಜನ, ಪರಿಸರ ಪ್ರೇಮಿಗಳು ಬೀದಿಗಿಳಿದಿದ್ದಾರೆ. ಬಂಡೀಪುರ ಉಳಿಸಿ ಅಭಿಯಾನ ನಡೆಸುತ್ತಿದ್ದಾರೆ.
‘ನಮ್ಮ ನಡಿಗೆ ಬಂಡೀಪುರ ಕಡೆಗೆ’ ಎಂಬ ಘೋಷಣೆಯೊಂದಿಗೆ ಭಾನುವಾರ ಪಾದಯಾತ್ರೆ ನಡೆಯಿತು. ಗುಂಡ್ಲುಪೇಟೆ ತಾಲೂಕು ಕಗ್ಗಳದ ಹುಂಡಿಯಿಂದ ಮದ್ದೂರು ಚೆಕ್ ಪೋಸ್ಟ್ ವರೆಗೆ ನಡೆದ ಪಾದಯಾತ್ರೆಯಲ್ಲಿ ಪರಿಸರವಾದಿಗಳು, ವನ್ಯಜೀವಿ ಪ್ರೇಮಿಗಳು, ರೈತರು, ಐಟಿ ಬಿಟಿ ನೌಕರರು, ನಿವೃತ್ತ ಅರಣ್ಯಾಧಿಕಾರಿಗಳು ಹೀಗೆ ಎಲ್ಲ ವರ್ಗದ ನೂರಾರು ಮಂದಿ ಭಾಗವಹಿಸಿದ್ದರು. ಕೇರಳದ ಪರಿಸರವಾದಿಗಳು ಸಹ ಈ ಅಭಿಯಾನದಲ್ಲಿ ಪಾಲ್ಗೊಂಡು ತಮ್ಮ ಬೆಂಬಲ ವ್ಯಕ್ತಪಡಿಸಿದರು.
ಪಾದಯಾತ್ರೆ ಬಳಿಕ ಮದ್ದೂರು ಚೆಕ್‌ಪೋಸ್ಟ್ ಬಳಿ ನಡೆದ ಸಮಾವೇಶದ ಸ್ಥಳಕ್ಕೆ ಗುಂಡ್ಲುಪೇಟೆ ಕಾಂಗ್ರೆಸ್ ಶಾಸಕ ಗಣೇಶ್ ಪ್ರಸಾದ್ ಭೇಟಿ ನೀಡಿದ್ದರು. ರಾತ್ರಿ ವಾಹನ ಸಂಚಾರ ನಿಷೇಧ ತೆರವು ಮಾಡುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ, ಯಾರೂ ಸಹ ಆತಂಕಪಡುವ ಅಗತ್ಯ ಇಲ್ಲ ಎಂಬ ಭರವಸೆಯ ಮಾತುಗಳನ್ನಾಡಿದರು. ಕೇರಳದವರು ರಾತ್ರಿ ವೇಳೆ ಹೆಚ್ಚುವರಿ ಬಸ್ ಗಳ ಸಂಚಾರಕ್ಕೆ ಅವಕಾಶ ಕೇಳಿದ್ದಾರೆ ಅಷ್ಟೇ. ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಅವರಿಂದ ಯಾವುದೇ ಒತ್ತಡ ಇಲ್ಲ. ಅವರು ಯಾವುದೇ ಪತ್ರವನ್ನು ಬರೆದಿಲ್ಲ ಎಂದ ಅವರು, ಯಥಾಸ್ಥಿತಿ ಮುಂದುವರಿಯಲಿ ಎಂಬುದೇ ನನ್ನ ಅಭಿಪ್ರಾಯ ಎನ್ನುವ ಮೂಲಕ ರಾತ್ರಿ ವಾಹನ ಸಂಚಾರ ನಿಷೇಧ ಮುಂದುವರಿಕೆಗೆ ಸಹಮತ ವ್ಯಕ್ತಪಡಿಸಿದರು.
ವಿಡಿಯೋ ನೋಡಿ: ಚಾಮರಾಜನಗರ: ಹಳ್ಳದ ನೀರಿನಲ್ಲಿ ಗಜಪಡೆ ಜಲಕ್ರೀಡೆ, ವಿಡಿಯೋ ವೈರಲ್
ಸ್ವಯಂಪ್ರೇರಿತರಾಗಿ ನೂರಾರು ಜನರು ಪಾಲ್ಗೊಳ್ಳುವ ಮೂಲಕ ಬಂಡೀಪುರ ಉಳಿಸಿ ಅಭಿಯಾನ ಸಾರ್ವಜನಿಕ ಚಳವಳಿಯಾಗಿ ರೂಪುಗೊಂಡಿದೆ. ರಾತ್ರಿ ವಾಹನ ಸಂಚಾರ ನಿಷೇಧದ ತೆರವೊಗೊಳಿಸುವುದಿಲ್ಲ ಎಂಬ ಸ್ಪಷ್ಟ ಭರವಸೆ ನೀಡುವವರೆಗೂ ಹಂತ ಹಂತವಾಗಿ ಹೋರಾಟ ತೀವ್ರಗೊಳಿಸಲು ಪರಿಸರವಾದಿಗಳು ನಿರ್ಧರಿಸಿದ್ದಾರೆ.
Published On - 11:17 am, Mon, 7 April 25