ಕೆಲಸ ಮಾಡಿದ್ದು ಯಾರೊ, ಹಣ ಪಡೆದಿದ್ದು ಮತ್ಯಾರೋ! ಚಾಮರಾಜನಗರದಲ್ಲಿ ಬೆಳಕಿಗೆ ಬಂತು ಮತ್ತೊಂದು ಕರ್ಮಕಾಂಡ
ನಿನ್ನೆಯಷ್ಟೇ ಚಾಮರಾಜನಗರ ಸರ್ಕಾರಿ ಕಾಲೇಜು ಕ್ರೀಡಾಕೂಟ ಪ್ರಶಸ್ತಿ ಪತ್ರದಲ್ಲಿ ಯೇಸುಕ್ರಿಸ್ತನ ಫೋಟೋ ಹಾಕಿದ್ದ ಕುರಿತು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಂದು ಕರ್ಮಕಾಂಡ ಬೆಳಕಿಗೆ ಬಂದಿದ್ದು, ಕಷ್ಟಪಟ್ಟು ಬಿಸಿಲಲ್ಲಿ ಬೆವರು ಸುರಿಸಿ ಗಿಡ ನೆಟ್ಟವರು ಯಾರೋ, ಆದ್ರೆ ಮತ್ಯಾರೋ ಆ ಗಿಡ ನಾವೇ ನೆಟ್ಟಿದ್ದು ಎಂದು ನರೇಗಾ ಯೋಜನೆ ಅಡಿ ಬಿಲ್ ಮಾಡಿಕೊಂಡು ಹಣ ಪಡೆದುಕೊಂಡಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ.
ಚಾಮರಾಜನಗರ, ಆ.29: ಗಡಿ ನಾಡು ಚಾಮರಾಜನಗರ(Chamarajanagar)ದಲ್ಲಿ ಮತ್ತೊಂದು ಕರ್ಮಕಾಂಡ ಬೆಳಕಿಗೆ ಬಂದಿದೆ. ಯಾರೊ ಕೆಲಸ ಮಾಡಿ, ಹಣವನ್ನು ಮತ್ಯಾರೋ ಪಡೆದಿದ್ದಾರೆ. ಹೌದು, ಪರಿಸರ ಪ್ರೇಮಿ ವೆಂಕಟೇಶ್ ಎಂಬುವವರು ಗಿಡಗಳನ್ನು ನೆಟ್ಟು ಮಗುವಿನಂತೆ ಪಾಲನೆ ಮಾಡಿ ಪೋಷಣೆ ಮಾಡಿದ್ದರು. ಆದ್ರೆ, ನಾವೇ ಗಿಡಗಳನ್ನ ನೆಟ್ಟಿದ್ದೇವೆ ಎಂದು ನರೇಗಾದಲ್ಲಿ ಬಿಲ್ ಮಾಡಿಸಿಕೊಂಡು ಅರಣ್ಯ ಇಲಾಖೆ ಹಣ ಪಡೆದುಕೊಂಡಿದೆ.
ಅರಣ್ಯ ಇಲಾಖೆ ವಿರುದ್ದ ಪರಿಸರ ಪ್ರೇಮಿ ವೆಂಕಟೇಶ್ ಕಿಡಿ
ಈಗಾಗಲೇ ಜಿಲ್ಲಾದ್ಯಂತ 10 ಸಾವಿರಕ್ಕೂ ಹೆಚ್ಚು ಗಿಡ ನೆಟ್ಟಿರುವ ಪರಿಸರ ಪ್ರೇಮಿ ವೆಂಕಟೇಶ್ ಈಗ ಬೇಸರದಲ್ಲಿದ್ದಾರೆ. ಎರಡು ವರ್ಷದ ಹಿಂದೆ ಚಾಮರಾಜನಗರ ಹೊರ ವಲಯದ ಬೇಡರಪುರ ಬಳಿಯ ಚಾಮರಾಜನಗರ ವಿಶ್ವವಿದ್ಯಾಲಯದ ಬಳಿಯ ರಸ್ತೆ ಬದಿ ಹಾಗೂ ಆವರಣದಲ್ಲಿ ಸುಮಾರು 400 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿ ಪೋಷಣೆ ಮಾಡಿದ್ದಾರೆ. ಆದ್ರೆ, ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳು 2024-25 ರ ಸಾಲಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಎಂದು ತೋರಿಸಿ 1.87 ಲಕ್ಷ ರೂ ಎಂದು ಬರೆಸಲಾಗಿದೆ. ಈ ಹಿನ್ನಲೆ ಪರಿಸರ ಪ್ರೇಮಿ ವೆಂಕಟೇಶ್ ‘ನಾನು ಗಿಡ ನೆಟ್ಟಿದ್ದೇನೆ. ಆದ್ರೆ, ಅರಣ್ಯ ಇಲಾಖೆ ಇದಕ್ಕೆ ಬಿಲ್ ಮಾಡಿಕೊಂಡಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ:ಸರ್ಕಾರಿ ಕಾಲೇಜು ಕ್ರೀಡಾಕೂಟ ಪ್ರಶಸ್ತಿ ಪತ್ರದಲ್ಲಿ ಯೇಸುಕ್ರಿಸ್ತನ ಫೋಟೋ: ಡಿಡಿಪಿಐ ಹೇಳಿದ್ದಿಷ್ಟು
ಇನ್ನು ಆ ಯೋಜನೆಯ ನಾಮಫಲಕದಲ್ಲಿ ಎಷ್ಟು ಗುಂಡಿ ತೆಗೆಯಲಾಗಿದೆ. ಎಷ್ಟು ಗಿಡಗಳನ್ನು ನೆಡಲಾಗಿದೆ. ಎಷ್ಟು ಕಾರ್ಮಿಕರನ್ನು ಬಳಸಲಾಗಿದೆ ಎನ್ನುವುದರ ವಿವರಗಳನ್ನು ಎಲ್ಲೋ ಬರೆದಿಲ್ಲ. 187 ಗಿಡಗಳನ್ನು ನೆಟ್ಟಿದ್ರೆ, 1.87 ಲಕ್ಷ ರೂ ಖರ್ಚಾಗುತ್ತಾ ಎನ್ನುವ ಪ್ರಶ್ನೆ ಕೂಡ ಉದ್ಬವಿಸುತ್ತದೆ. ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದ್ರೆ, ‘ಗಿಡ ನೆಡಲೂ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದ್ರೆ, ಅವರು ಎಷ್ಟು ಗಿಡ ನೆಟ್ಟಿದ್ದಾರೆ ಎಂಬ ಮಾಹಿತಿಯಿಲ್ಲ. ಈ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದೇವೆ. ನಂತರ ತಪ್ಪಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಪರಿಸರ ಪ್ರೇಮಿ ವೆಂಕಟೇಶ್ ಅವರು ಗಿಡ ನೆಟ್ಟಿರುವುದು ಬಿಟ್ಟರೆ, ಬೇರೆ ಯಾರೂ ಕೂಡ ಈ ಸ್ಥಳದಲ್ಲಿ ಗಿಡ ನೆಟ್ಟಿಲ್ಲ. ಇದ್ದರೂ ಕೂಡ ಬೆರಳೆಣಿಕಷ್ಟು ಗಿಡಗಳಿವೆ. ಅಧಿಕಾರಿಗಳ ಪ್ರಕಾರವೇ 187 ಗಿಡ ನೆಡಲೂ 1.87 ಲಕ್ಷ ರೂಪಾಯಿ ಬೇಕಾ ಎನ್ನುವುದು ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ತನಿಖೆಯಿಂದಷ್ಟೇ ಸತ್ಯಾಂಶ ಹೊರ ಬರಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:57 pm, Thu, 29 August 24