ಮೈತ್ರಿಕೂಟದ ಹೆಸರು ಬದಲಿಸಿಕೊಂಡ ಕಾಂಗ್ರೆಸ್‌ನ ಬುದ್ಧಿ ಮಾತ್ರ ಬದಲಾಗಿಲ್ಲ: ಟ್ವೀಟ್​ ಮೂಲಕ ಬಿಜೆಪಿ ಕಿಡಿ

|

Updated on: Feb 25, 2024 | 9:45 PM

ಕಾಂಗ್ರೆಸ್‌ನ ಇತಿಹಾಸವನ್ನೊಮ್ಮೆ ಗಮನಿಸಿದರೆ ಸಾಕು ಅದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ ನೀಡುವ ಬದಲು ಧಕ್ಕೆ ತಂದಿದ್ದೆ ಜಾಸ್ತಿ ಎಂಬುದು ಸ್ಪಷ್ಟವಾಗುತ್ತದೆ. ಪ್ರಸ್ತುತ ಅಸ್ತಿತ್ವದ ಹುಡುಕಾಟದಲ್ಲಿ ಕಾಂಗ್ರೆಸ್‌, ಯು.ಪಿ.ಎ ಎಂಬ ತನ್ನ ಮೈತ್ರಿಕೂಟದ ಹೆಸರನ್ನು I-N-D-I-Alliance ಎಂದು ಬದಲಿಸಿಕೊಂಡಿದೆ. ಆದರೆ ಕಾಂಗ್ರೆಸ್‌ನ ಬುದ್ಧಿ ಮಾತ್ರ ಬದಲಾಗಿಲ್ಲ ಎಂದು ಕಾಂಗ್ರೆಸ್​ ವಿರುದ್ಧ ಬಿಜೆಪಿ ವಾಗ್ದಾಳಿ ಮಾಡಿದೆ.

ಮೈತ್ರಿಕೂಟದ ಹೆಸರು ಬದಲಿಸಿಕೊಂಡ ಕಾಂಗ್ರೆಸ್‌ನ ಬುದ್ಧಿ ಮಾತ್ರ ಬದಲಾಗಿಲ್ಲ: ಟ್ವೀಟ್​ ಮೂಲಕ ಬಿಜೆಪಿ ಕಿಡಿ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಫೆಬ್ರವರಿ 25: ಪ್ರಸ್ತುತ ಅಸ್ತಿತ್ವದ ಹುಡುಕಾಟದಲ್ಲಿ ಕಾಂಗ್ರೆಸ್‌ (Congress), ಯು.ಪಿ.ಎ ಎಂಬ ತನ್ನ ಮೈತ್ರಿಕೂಟದ ಹೆಸರನ್ನು I-N-D-I-Alliance ಎಂದು ಬದಲಿಸಿಕೊಂಡಿದೆ. ಆದರೆ ಕಾಂಗ್ರೆಸ್‌ನ ಬುದ್ಧಿ ಮಾತ್ರ ಬದಲಾಗಿಲ್ಲ ಎಂಬುದಕ್ಕೆ ಕರ್ನಾಟಕದಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಸಾಕ್ಷಿ ಎಂದು ಕಾಂಗ್ರೆಸ್​ ವಿರುದ್ಧ ಬಿಜೆಪಿ ವಾಗ್ದಾಳಿ ಮಾಡಿದೆ. ಈ ಕುರಿತಾಗಿ ಸಾಲು ಸಾಲು ಟ್ವೀಟ್​ ಮಾಡಿರುವ ರಾಜ್ಯ ಬಿಜೆಪಿ ಘಟಕ, ಸರ್ಕಾರದ ಜನವಿರೋಧಿ ನೀತಿಗಳನ್ನು ಪ್ರಶ್ನಿಸಿದರೆ, ಎಫ್​ಐಆರ್​ ಹಾಕಿಸಲೆಂದೇ ಒಬ್ಬ ಸಚಿವರನ್ನು ನೇಮಿಸಿದೆ. ಸ್ವತಃ ತಾನೇ ಸುಳ್ಳು ಸುದ್ದಿಯ ಜನಕನಾದರೂ, ಫ್ಯಾಕ್ಟ್‌ ಚೆಕ್‌ ಮಾಡಲು ತನ್ನ ವಂಧಿಮಾಗದರಿಗೆ ಅವಕಾಶ ನೀಡಿದೆ ಎಂದು ಕಿಡಿಕಾರಿದೆ.

ತನಗೆ ಸೊಪ್ಪು ಹಾಕದ, ತನ್ನ ತಾಳಕ್ಕೆ ಕುಣಿಯದ ಪತ್ರಕರ್ತರ ಮೇಲೆ ಏಕಪಕ್ಷೀಯವಾಗಿ ನಿಷೇಧ ಹೇರಿ, ತನಗೆ ತಾನೇ ಸಾಚಾತನದ ಸರ್ಟಿಫಿಕೇಟ್‌ ಕೊಟ್ಟುಕೊಳ್ಳುತ್ತಿರುವುದು ಈ ಶತಮಾನದ ಜೋಕ್. ಇದೆಲ್ಲದರ ನಡುವೆ ತಾನು ಅಭಿವ್ಯಕ್ತಿ ಸ್ವಾತಂತ್ರ್ಯದ ಪರ ಇದ್ದೇನೆ ಎಂದು ಕಾಂಗ್ರೆಸ್‌ ಹೇಳುವುದು ಒಂದು ರೀತಿ “ಭೂತದ ಬಾಯಲ್ಲಿ ಭಗವದ್ಗೀತೆಯಂತೆ” ಎಂದು ಹೇಳಲಾಗಿದೆ.

ಕಾಂಗ್ರೆಸ್​ ವಿರುದ್ಧ ಬಿಜೆಪಿ ಟ್ವೀಟ್​ 

ಕಾಂಗ್ರೆಸ್‌ನ ಇತಿಹಾಸವನ್ನೊಮ್ಮೆ ಗಮನಿಸಿದರೆ ಸಾಕು ಅದು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ ನೀಡುವ ಬದಲು ಧಕ್ಕೆ ತಂದಿದ್ದೆ ಜಾಸ್ತಿ ಎಂಬುದು ಸ್ಪಷ್ಟವಾಗುತ್ತದೆ. ಜನತಾ ನ್ಯಾಯಾಲಯದಲ್ಲಿ ಕಾಂಗ್ರೆಸ್‌ಗೆ ತೀವ್ರ ಮುಖಭಂಗವಾದಾಗ ಹಾಗೂ ತನ್ನ ಅಸ್ತಿತ್ವ ನಶಿಸಿ ಹೋಗುತ್ತಿರುವ ಸಂದರ್ಭ ಬಂದಾಗಲೆಲ್ಲಾ ಸಂವಿಧಾನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಅಪಾಯದಲ್ಲಿದೆ ಎಂದು ಬೊಬ್ಬೆ ಹೊಡೆಯುತ್ತದೆ. ಅದರ ಹೊರತಾಗಿ ಜವಾಹರಲಾಲ್‌ ನೆಹರುರವರಿಂದ ಆರಂಭವಾಗಿ ಇಂದಿನ ರಾಹುಲ್‌ ಗಾಂಧಿಯವರೆಗೂ ಕಾಂಗ್ರೆಸ್‌ಗೆ ಅಧಿಕಾರ ದೊರೆತಾಗಲೆಲ್ಲಾ ಅದು ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣಕ್ಕೇ ಆದ್ಯತೆ ನೀಡಿದೆ.

ಇದನ್ನೂ ಓದಿ: ರಾಜ್ಯಸಭಾ ಚುನಾವಣೆ: ಮೊದಲೇ ಆತಂಕದಲ್ಲಿರುವ ಕಾಂಗ್ರೆಸ್​​ಗೆ ಮತ್ತೊಂದು ಆಘಾತ!

1951ರಲ್ಲಿಯೆ, ಜವಾಹರಲಾಲ್‌ ನೆಹರುರವರು ಸಂವಿಧಾನದ 19 ನೇ ವಿಧಿಗೆ ತಿದ್ದುಪಡಿ ತಂದು ಪತ್ರಿಕಾ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದ್ದರು. ಅದಲ್ಲದೆ ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವ ತಮ್ಮ ಕ್ರಮವನ್ನು ಬಹಿರಂಗವಾಗಿಯೇ ಸಮರ್ಥಿಸಿಕೊಂಡಿದ್ದರು.

ಕಾಂಗ್ರೆಸ್​ ವಿರುದ್ಧ ಬಿಜೆಪಿ ಟ್ವೀಟ್​ 


ಚಂದ್ರಮೋಹಿನಿ, ರಾಮಾಯಣ ಸೇರಿದಂತೆ ನೂರಾರು ಪುಸ್ತಕಗಳನ್ನು ನಿಷೇಧಿಸುವ ಜೊತೆ, ಸಿನಿಮಾ ಹಾಡುಗಳು ಹಾಗೂ ಪರಾಶಕ್ತಿ, ನಾಸ್ತಿಕ್‌ ನಂತಹ ಸಿನಿಮಾಗಳನ್ನು ನಿಷೇಧಿಸಿದ್ದರು. ಇದು ನೆಹರುವರು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ನೀಡಿದ ಗೌರವ.

ದೇಶದ ಇತಿಹಾಸದಲ್ಲಿಯೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅತಿ ಹೆಚ್ಚು ಅಗೌರವ ನೀಡಿದ್ದು ಇಂದಿರಾಗಾಂಧಿಯವರು. 1975ರಲ್ಲಿ ಭಾರತದ ಇತಿಹಾಸದಲ್ಲಿಯೇ ಕರಾಳ ದಿನ ಎಂಬಂತೆ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿ ಪ್ರಜೆಗಳ ಹಾಗೂ ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವರುಷಗಳ ಕಾಲ ಕಿತ್ತುಕೊಂಡಿದ್ದರು. ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಧೋರಣೆಯಿಂದ ಅಂದಿನ ವಿರೋಧ ಪಕ್ಷದವರು, ಪತ್ರಕರ್ತರು, ನಾಗರಿಕರು ಸೇರಿದಂತೆ ಸಾವಿರಾರು ಜನ ವರುಷಗಟ್ಟಲೆ ಜೈಲುವಾಸ ಅನುಭವಿಸಬೇಕಾಯಿತು.

ಇದನ್ನೂ ಓದಿ: ಬೆಂಬಲಿಗರ ಸಭೆ ಅಂತ್ಯ: ಮಂಡ್ಯದಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸುಮಲತಾ ಅಂಬರೀಶ್ ಹೇಳಿದ್ದಿಷ್ಟು

ರಾಜೀವ್‌ ಗಾಂಧಿಯವರೂ ಇಂದಿರಾ ಗಾಂಧಿಯವರ ಹಾದಿಯಲ್ಲೇ ಹೆಜ್ಜೆ ಹಾಕಿದ್ದರು. ಪತ್ರಿಕೆಗಳನ್ನು ಸಹ ಸರ್ಕಾರವು ಸೆನ್ಸಾರ್‌ ಮಾಡಿದ ನಂತರವೇ, ಮುದ್ರಿಸಬೇಕೆಂಬ ʻಮಾನನಷ್ಟ ಮಸೂದೆʻ ಹಾಗೂ ಜನ ಪರಸ್ಪರರಿಗೆ ಬರೆಯುವ ಪತ್ರಗಳನ್ನೂ ಪೋಸ್ಟ್‌ ಆಫೀಸ್‌ನಲ್ಲಿ ಓದಲು ಹೊಸ ಕಾಯ್ದೆ ಜಾರಿ ಮಾಡಲು ರಾಜೀವ್‌ ಗಾಂಧಿ ಸರ್ಕಾರ ಮುಂದಾಗಿತ್ತು. ಆದರೆ ತೀವ್ರ ವಿರೋಧ ವ್ಯಕ್ತವಾದ ಬಳಿಕ ಆ ಮಸೂದೆಯನ್ನು ಹಿಂಪಡೆದುಕೊಂಡಿತ್ತು. ಸಮಾಜದ ಮುಖವಾಣಿಯಾದ ಪತ್ರಿಕೆಗಳನ್ನು ಸೆನ್ಸಾರ್‌ ಮಾಡಲು ಹೊರಟಿದ್ದ ಕಾಂಗ್ರೆಸ್‌, ಇಂದು ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದ ಎಂದು ವಾಗ್ದಾಳಿ ಮಾಡಲಾಗಿದೆ.

ಸೋನಿಯಾ ಗಾಂಧಿಯವರು ಹಾಗೂ ರಾಹುಲ್‌ ಗಾಂಧಿಯವರ 2004-2014ರ ಅವಧಿಯಲ್ಲಿ ಕಾಂಗ್ರೆಸ್‌ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೇಗೆ ಬುಡಮೇಲು ಮಾಡಲು ಹೊರಟಿತ್ತು ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. 2008ರಲ್ಲಿ ಐಟಿ ಕಾಯಿದೆಗೆ ತಿದ್ದುಪಡಿಯ ಅಂಗವಾಗಿ ಪರಿಚಯಿಸಿದ ಸೆಕ್ಷನ್‌ 66ಎ ವಾಸ್ತವದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧದ ಟೂಲ್‌ ಕಿಟ್‌ನ ಪ್ರಮುಖ ಭಾಗ.

ತಮ್ಮ ಯು.ಪಿ.ಎ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ವಿರುದ್ದ ದನಿ ಎತ್ತಿದ ಹೋರಾಟಗಾರರನ್ನು, ಸಾಮಾಜಿಕ ಕಾರ್ಯಕರ್ತರನ್ನು ಇದೇ ಕಾಯ್ದೆ ಬಳಸಿ ಹಣಿಯಲು ಮುಂದಾಗಿದ್ದು ಜಗಜ್ಜಾಹೀರಾಗಿತ್ತು. ಆದರೆ ಕೊನೆಗೆ ಸುಪ್ರೀಂ ಕೋರ್ಟ್ ತಪರಾಕಿ ನೀಡಿದ ಮೇಲೆ ಪೆಚ್ಚು ಮೋರೆ ಹಾಕಿಕೊಳ್ಳಬೇಕಾದ ಪ್ರಸಂಗ ಕಾಂಗ್ರೆಸ್‌ನದ್ದಾಯಿತು ಎಂದು ಆಕ್ರೋಶ ಹೊರಹಾಕಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.