ನವದೆಹಲಿ, ಆಗಸ್ಟ್ 30: ಚನ್ನಪಟ್ಟಣದಲ್ಲಿ ಹಿಡಿತ ಉಳಿಸಿಕೊಳ್ಳಲು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ರಣತಂತ್ರ ಹೂಡುತ್ತಿದ್ದಾರೆ. ತಮ್ಮ ಪುತ್ರ ಅಥವಾ ಜೆಡಿಎಸ್‌ಗೆ ಉಪಚುನಾವಣೆಯಲ್ಲಿ ಟಿಕೆಟ್ ಕೊಡಿಸುವ ಯತ್ನದಲ್ಲಿದ್ದಾರೆ. ಆದರೆ, ಟಿಕೆಟ್‌ಗಾಗಿ ಹೋರಾಟಕ್ಕಿಳಿದಿರುವ ಸಿಪಿ ಯೋಗೇಶ್ವರ್, ದೆಹಲಿಯಲ್ಲಿ ಲಾಬಿ ಮಾಡುತ್ತಿದ್ದಾರೆ. ಸೈನಿಕನ ಟಿಕೆಟ್ ಹೋರಾಟಕ್ಕೆ ಬಿಜೆಪಿ ಪಂಚ ನಾಯಕರು ಸಾಥ್ ನೀಡಿದ್ದಾರೆ. ಇದರಿಂದ ದೋಸ್ತಿಗಳ ಮಧ್ಯೆಯೇ ಟಿಕೆಟ್ ಕಗ್ಗಂಟು ಸೃಷ್ಟಿಯಾಗಿದೆ.
ಟಿಕೆಟ್ ಚೆಂಡು ಕುಮಾರಸ್ವಾಮಿ ಅಂಗಳಕ್ಕೆ ಹೋಗುತ್ತಿದ್ದಂತೆಯೇ ಬಿಜೆಪಿ ನಾಯಕರು ಎಚ್ಚೆತ್ತುಕೊಂಡಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಿವಾಸದಲ್ಲಿ ಗುರುವಾರ ಸಂಜೆ ಸಭೆ ನಡೆಸಿದರು. ಈ ಸಭೆಯಲ್ಲಿ ಹೆಚ್‌ಡಿ ಕುಮಾರಸ್ವಾಮಿ ಕೂಡ ಭಾಗಿಯಾಗಿದರು. ಈ ವೇಳೆ ಯೋಗೇಶ್ವರ್ ನಡೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಚನ್ನಪಟ್ಟಣ ಟಿಕೆಟ್ ವಿಚಾರವಾಗಿ ನಾನು ಮುಕ್ತವಾಗಿದ್ದೇನೆ. ಅಭ್ಯರ್ಥಿಯನ್ನು ಘೋಷಣೆ ಮಾಡುವುದಕ್ಕೆ ಸಮಯವಿದೆ. ಹೀಗಿರುವಾಗ ಈಗಲೇ ನಾನೇ ಅಭ್ಯರ್ಥಿ ಎನ್ನುತ್ತಿರುವುದೇಕೆ ಎಂದು ಕುಮಾರಸ್ವಾಮಿ ಬೇಸರ ಹೊರಹಾಕಿದ್ದಾರೆ. ನಮ್ಮ ಕಾರ್ಯಕರ್ತರಲ್ಲೂ ಯೋಗೇಶ್ವರ್ ಬಗ್ಗೆ ಭಿನ್ನ ಅಭಿಪ್ರಾಯವಿದೆ. ಅವರು ಕ್ಷೇತ್ರದಲ್ಲಿ ತಿರುಗಾಡಲಿ, ನಾವು ತಿರುಗಾಡುತ್ತೇವೆ. ಯೋಗೇಶ್ವರ್ ಅಭ್ಯರ್ಥಿ ಆಗೋದು ಬೇಡ ಎಂದು ಹೇಳಿಲ್ಲ. ಆದರೆ, ಯೋಗೇಶ್ವರ್ ತುಂಬಾ ಮುಂದೆ ಹೋಗಿ ಹೇಳಿಕೆ ನೀಡುತ್ತಿದ್ದಾರೆ. ಉಪಚುನಾವಣೆ ವೇಳೆ ಗೊಂದಲದ ಹೇಳಿಕೆ ನೀಡದಂತೆ ಸೂಚಿಸಿ ಎಂದು ಬಿಜೆಪಿಯ ನಾಯಕರ ಮುಂದೆ ಕುಮಾರಸ್ವಾಮಿ ಬೇಸರ ಹೊರ ಹಾಕಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಚನ್ನಪಟ್ಟಣ ಉಪ ಚುನಾವಣೆ ಟಿಕೆಟ್ ವಿಚಾರ: ಒಟ್ಟಿಗೆ ಹೋದ್ರೆ ಇಬ್ಬರಿಗೂ ಲಾಭವೆಂದ ಆರ್ ಅಶೋಕ್
ಸಭೆ ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ಹಾಗೂ ಜೆಡಿಎಸ್ ಒಟ್ಟಿಗೆ ಹೋದರೆ ಇಬ್ಬರಿಗೂ ಲಾಭ ಎಂದಿದ್ದಾರೆ.
ಸಿಪಿ ಯೋಗೇಶ್ವರ್ ಪರ ಬಿಜೆಪಿ ಕೇಂದ್ರ ಕಚೇರಿಗೆ ತೆರಳಿದ ನಾಯಕರು ಬ್ಯಾಟ್ ಬೀಸಿದ್ದಾರೆ. ಆದರೆ ಕುಮಾರಸ್ವಾಮಿ ನಿರ್ಧಾರದಂತೆ ಚನ್ನಪಟ್ಟಣ ಟಿಕೆಟ್ ಎಂದಿದ್ದಾರಂತೆ. ಇದರಿಂದ ಸಿಟ್ಟಾಗಿರುವ ಸಿಪಿ ಯೋಗೇಶ್ವರ್, ಟಿಕೆಟ್ ಕೊಟ್ಟರೂ ಕೊಡದಿದ್ದರೂ ಸ್ಪರ್ದೆ ಮಾಡುವುದಾಗಿ ಹೈಕಮಾಂಡ್ ನಾಯಕರಿಗೆ ಸಂದೇಶ ರವಾನಿಸಿದ್ದಾರೆ. ಇದು ಕುತೂಹಲ ಕೆರಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ