Chikkaballapura Gelatin Blast | ಶಿವಮೊಗ್ಗ ಸ್ಫೋಟ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ, ಐವರ ಸಾವು

Chikkaballapura Gelatin Blast | ಶಿವಮೊಗ್ಗ ಸ್ಫೋಟ ಮಾಸುವ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಜಿಲೆಟಿನ್ ಸ್ಫೋಟ, ಐವರ ಸಾವು
ಜಿಲೆಟಿನ್ ಸ್ಫೋಟವಾದ ಸ್ಥಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು ಮತ್ತು ಸ್ಥಳದಲ್ಲಿ ಕೆಲ ಸ್ಥಳೀಯರಿದ್ದಾರೆ.

Chikkaballapur Gelatin Explode: ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್‌ ಹೋಬಳಿಯ ಹಿರೇನಾಗವೇಲಿ ಗ್ರಾಮದ ಬಳಿ ಅಕ್ರಮ ಬ್ಲಾಸ್ಟಿಂಗ್ ನಡೆದಿದ್ದು ದುರಂತದಲ್ಲಿ ಐದು ಜನ ಮೃತಪಟ್ಟಿದ್ದಾರೆ. ಹಾಗೂ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

Ayesha Banu

|

Feb 23, 2021 | 12:09 PM


ಚಿಕ್ಕಬಳ್ಳಾಪುರ: ಶಿವಮೊಗ್ಗದಲ್ಲಿ ನಡೆದ ಜಿಲೆಟಿನ್ ಸ್ಫೋಟ ದುರಂತ ಪ್ರಕರಣ ಮಾಸುವ ಮುನ್ನವೇ ಮತ್ತೆ ರಾಜ್ಯದಲ್ಲಿ ಮತ್ತೊಂದು ಜಿಲೆಟಿನ್ ಸ್ಫೋಟ ಪ್ರಕರಣ ನಡೆದಿದೆ. ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್‌ ಹೋಬಳಿಯ ಹಿರೇನಾಗವೇಲಿ ಗ್ರಾಮದ ಬಳಿ ಅಕ್ರಮ ಬ್ಲಾಸ್ಟಿಂಗ್ ನಡೆದಿದ್ದು ದುರಂತದಲ್ಲಿ ಐದು ಜನ ಮೃತಪಟ್ಟಿದ್ದಾರೆ. ಹಾಗೂ ಟಾಟಾ ಏಸ್ ವಾಹನ ಚಾಲಕ ರಿಯಾಜ್​ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಗ್ಯ ಸಚಿವ ಸುಧಾಕರ್ ತವರು ಕ್ಷೇತ್ರದಲ್ಲಿ ಇಂತಹದೊಂದು ದುರಂತ ಸಂಭವಿಸಿದೆ. ಹಾಗೂ ಸ್ಫೋಟದ ತೀವ್ರತೆಗೆ ಹತ್ತಾರು ಕಿ.ಮೀ ವರೆಗೂ ಭೂಮಿ ಕಂಪಿಸಿದೆ.

ರಾತ್ರಿ 12 ಗಂಟೆಗೆ ಟಾಟಾ ಏಸ್​ ಹತ್ತಲು ಹೇಳಿದ್ರು
ಇನ್ನು ಈ ಘಟನೆಯಲ್ಲಿ ಗಾಯಗೊಂಡು ಬದುಕುಳಿದಿರುವ ರಿಯಾಜ್ ಟಿವಿ9ಗೆ ಘಟನೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಾತ್ರಿ 12.45ರ ಸಮಯದಲ್ಲಿ ಸ್ಫೋಟ ಸಂಭವಿಸಿದೆ. ಭ್ರಮರವರ್ಷಿಣಿ ಕ್ವಾರಿ ಬ್ಲಾಸ್ಟಿಂಗ್​ಗೆ ಅಕ್ರಮವಾಗಿ ಸ್ಫೋಟಕ ಸಂಗ್ರಹ ಮಾಡಲಾಗಿತ್ತು. ಪೊಲೀಸರು ದಾಳಿ ನಡೆಸಿದ್ದ ಹಿನ್ನೆಲೆ ಸ್ಫೋಟಕವನ್ನು ಅರಣ್ಯದಲ್ಲಿ ಬಚ್ಚಿಡಲಾಗಿತ್ತು. ಬಚ್ಚಿಟ್ಟಿದ್ದ ಸ್ಫೋಟಕ ಸಾಗಿಸಲು ತೆರಳಿದ್ದಾಗ ಘಟನೆ ನಡೆದಿದೆ. ರಾತ್ರಿ 12 ಗಂಟೆಗೆ ಟಾಟಾ ಏಸ್​ ಹತ್ತಲು ಹೇಳಿದ್ರು. ಆದ್ರೆ ಟಾಟಾ ಏಸ್​ನಲ್ಲಿ ಏನಿತ್ತು ಎಂದು ನನಗೆ ಗೊತ್ತಿಲ್ಲ. ಬಾಕ್ಸ್, ಬ್ಯಾಗ್​ಗಳನ್ನ ತೆಗೆದುಕೊಂಡು ಐವರು ಅರಣ್ಯದೊಳಗೆ ಹೋದ್ರು. ನಾನು ಗಾಡಿಯಲ್ಲಿ ಕುಳಿತಿದ್ದಾಗ ಸ್ಫೋಟ ಸಂಭವಿಸಿತು. ಅರಣ್ಯದೊಳಗೆ ಹೋದ 5 ಜನ ಏನಾದರೋ ಗೊತ್ತಿಲ್ಲ. ನನಗೆ ಸಂಪೂರ್ಣ ಸುಟ್ಟ ಹಾಗೂ ರಕ್ತದ ಗಾಯಗಳಾಗಿವೆ. ಆ ಮೇಲೆ 108 ಆಂಬುಲೆನ್ಸ್ ಸಿಬ್ಬಂದಿ ಬಂದು ನನಗೆ ಪ್ರಥಮ ಚಿಕಿತ್ಸೆ ಕೊಟ್ರು ಎಂದು ರಿಯಾಜ್ ಹೇಳಿದ್ದಾರೆ. ಸ್ಫೋಟದಲ್ಲಿ ಮೃತಪಟ್ಟ ಐವರ ಪೈಕಿ ನಾಲ್ವರ ಮಾಹಿತಿ ಲಭ್ಯವಾಗಿದ್ದು ಕಂಪ್ಯೂಟರ್ ಆಪರೇಟರ್​ಗಳಾದ ರಾಮು, ಗಂಗಾಧರ್, ಇಂಜಿನಿಯರ್ ಉಮಾಕಾಂತ್, ಸ್ಥಳೀಯ ರಾಮು ಎಂದು ಗುರುತು ಪತ್ತೆಯಾಗಿದೆ.

Chikkaballapura Gelatin Blast

ಜಿಲೆಟಿನ್ ಸ್ಫೋಟವಾದ ಸ್ಥಳ

ಈ ಹಿಂದೆ ಕ್ವಾರಿ ಮೇಲೆ ದಾಳಿ ನಡೆಸಿ ಅಕ್ರಮ ಸ್ಫೋಟಕ ಜಪ್ತಿ ಮಾಡಿದ್ದೆವು
ರಾತ್ರಿ 12.30ರಿಂದ 12.45ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಆದರೆ ಯಾವ ಬಗೆಯ ಸ್ಫೋಟಕಗಳು ಎಂಬುದು ಪತ್ತೆಯಾಗಿಲ್ಲ. ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸ್ಥಳದಲ್ಲೇ ಕ್ವಾರಿ ಸಮೀಪವಿರುವ ಅರಣ್ಯ ಪ್ರದೇಶದಲ್ಲಿ ಸ್ಫೋಟ ನಡೆದಿದೆ. ಬಿಜೆಪಿ ಮುಖಂಡ ಗುಡಿಬಂಡೆ ನಾಗರಾಜ್, ರಾಘವೇಂದ್ರ ರೆಡ್ಡಿ, ಗಂಗೋಜಿರಾವ್, ಶಿವಾರೆಡ್ಡಿ ಸೇರಿದಂತೆ ನಾಲ್ವರ ಒಡೆತನದ ಕ್ವಾರಿ ಇದು. ನಾಲ್ವರೂ ಭ್ರಮರ ವರ್ಷಿಣಿ ಹೆಸರಿನ ಕ್ವಾರಿ ಮಾಲೀಕರು. ಫೆಬ್ರವರಿ 7ರಂದು ಕ್ವಾರಿ ಮೇಲೆ ದಾಳಿ ನಡೆಸಿ ಅಕ್ರಮ ಸ್ಫೋಟಕ ಜಪ್ತಿ ಮಾಡಿ ಗುಡಿಬಂಡೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು ಎಂದು ಟಿವಿ9ಗೆ ಚಿಕ್ಕಬಳ್ಳಾಪುರ ಎಸ್​ಪಿ ಮಿಥುನ್‌ಕುಮಾರ್‌ ಮಾಹಿತಿ ನೀಡಿದ್ದಾರೆ. ಇನ್ನು ಸ್ಥಳಕ್ಕೆ ಜಿಲ್ಲಾಧಿಕಾರಿ ಲತಾ.ಆರ್, ಎಸ್​ಪಿ ಮಿಥುನ್ ಕುಮಾರ್, ಎಸಿ ರಘುನಂದನ್, DySP ರವಿಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎಸ್​ಪಿ ಮಿಥುನ್ ಕುಮಾರ್ ನೇತೃತ್ವದಲ್ಲಿ ಸ್ಥಳಕ್ಕೆ ಎಫ್​ಎಸ್​ಎಲ್, ಬಿಡಿಡಿಎಸ್​​ ತಂಡ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. ಸ್ಥಳದಲ್ಲಿ ಇನ್ನೂ ಸ್ಫೋಟಕಗಳು ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಬಿಡಿಡಿಎಸ್, ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳ ಸಹ ಸ್ಥಳಕ್ಕೆ ಆಗಮಿಸಿದೆ. ಜೊತೆಗೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಆಗಮಿಸಿದ್ದು ಡಿ.ಸಿ ಹಾಗೂ ಎಸ್ಪಿಯಿಂದ ಮಾಹಿತಿ ಪಡೆಯುತ್ತಿದ್ದಾರೆ.

Chikkaballapura Gelatin Blast

ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಸ್ಥಳೀಯರೊಂದಿಗೆ ಮಾತನಾಡುತ್ತಿರುವುದು

ಜಿಲೆಟಿನ್ ಸ್ಫೋಟದಿಂದ ಭೂಮಿ ಕಂಪಿಸಿದ ಅನುಭವ
ಜಿಲೆಟಿನ್ ಸ್ಫೋಟದಿಂದ ಭೂಮಿ ಕಂಪಿಸಿದ ಅನುಭವ ಉಂಟಾಗಿ ಭೂಕಂಪ ಎಂದು ಭಾವಿಸಿ ಜನ ಮನೆಯಿಂದ ಹೊರ ಬಂದಿದ್ದಾರೆ. ನಂತರ ಜಿಲೆಟಿನ್ ಸ್ಫೋಟ ಎಂಬ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಹಿರೇನಾಗವೇಲಿ ಗ್ರಾಮಸ್ಥರು ಕ್ವಾರಿ ಸ್ಥಳಕ್ಕೆ ದೌಡಾಯಿಸಿದ್ದಾರೆ. 2008ರಿಂದಲೂ ಜಿಲೆಟಿನ್ ಸ್ಫೋಟದಿಂದ ತೊಂದರೆಯಾಗುತ್ತಿದೆ ಎಂದು ಸಮಸ್ಯೆ ಬಗ್ಗೆ ಗ್ರಾಮಸ್ಥರು ಆತಂಕದಿಂದಲೇ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸ್ಫೋಟದ ಸದ್ದಿಗೆ ಗ್ರಾಮಸ್ಥರು ರಾತ್ರಿಯಿಡೀ ನಿದ್ದೆ ಮಾಡದೆ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

ಪೊಲೀಸ್ ಇಲಾಖೆ ಎಚ್ಚೆತ್ತು ಸಭೆ ಮಾಡಿತ್ತು
ಘಟನೆ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್​.ಲತಾ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಶಿವಮೊಗ್ಗ ತಾಲೂಕಿನ ಹುಣಸೋಡು ಸ್ಫೋಟ ಕೇಸ್ ಆದ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತು ಸಭೆ ಮಾಡಿತ್ತು. ಸ್ಫೋಟಕ ಸಾಗಣೆ, ಬಳಕೆ ಬಗ್ಗೆ ಮುನ್ನೆಚ್ಚರಿಕೆಗೆ ಸೂಚಿಸಿದ್ದೆವು. ಈ ಕ್ವಾರಿ ವಿರುದ್ಧ ಮೊದಲೂ ಕ್ರಮ ಕೈಗೊಳ್ಳಲಾಗಿತ್ತು. ಫೆ.7ರಂದು ದಾಳಿ ನಡೆಸಿ ಜಿಲೆಟಿನ್ ಕಡ್ಡಿ ಜಪ್ತಿ ಮಾಡಿದ್ದೆವು. ಬಳಿಕ ಕ್ವಾರಿ ಸ್ಥಗಿತಗೊಳಿಸಲು ಆದೇಶ ನೀಡಲಾಗಿತ್ತು ಎಂದು ಹೇಳಿದರು.

ಇದನ್ನೂ ಓದಿ: Shivamogga Blast ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟ, ಸಾವಿನ ಸಂಖ್ಯೆ 8ಕ್ಕೆ ಏರಿಕೆ


Follow us on

Related Stories

Most Read Stories

Click on your DTH Provider to Add TV9 Kannada