ತಾಳಿ ಕಿತ್ತೆಸೆದು ಹೋಗಿದ್ದವಳೇ ಮತ್ತೆ ಕಟ್ಟಿಸಿಕೊಂಡಳು! ಇದು ಪೇಂಟರ್ ಹುಡುಗ, ಶ್ರೀಮಂತ ಹುಡುಗಿಯ ಸಿನಿಮೀಯ ಲವ್ ಸ್ಟೋರಿ

ಚಿಕ್ಕಬಳ್ಳಾಪುರದಲ್ಲಿ ಪೋಷಕರ ಒತ್ತಾಯಕ್ಕೆ ಮಣಿದು ಪೊಲೀಸ್ ಠಾಣೆಯಲ್ಲೇ ಪತಿಯ ತಾಳಿ ಕಿತ್ತೆಸೆದು ಹೋಗಿದ್ದ ಶ್ರೀಮಂತ ಯುವತಿಯೊಬ್ಬಳು, 6 ತಿಂಗಳ ಬಳಿಕ ಬಡ ಪೇಂಟರ್ ಪ್ರಿಯಕರನ ಬಳಿಗೆ ಮರಳಿ ಬಂದು ದೇವಾಲಯದಲ್ಲಿ ಮರುಮದುವೆಯಾಗಿದ್ದಾಳೆ. ಅಂತಸ್ತು ಮತ್ತು ಜಾತಿಯ ಗೋಡೆಗಳನ್ನು ಮೀರಿ ಒಂದಾದ ಈ ಜೋಡಿಯ ಸಿನಿಮೀಯ ಪ್ರೇಮಕಥೆ ಈಗ ಭಾರೀ ಸದ್ದುಮಾಡಿದೆ.

ತಾಳಿ ಕಿತ್ತೆಸೆದು ಹೋಗಿದ್ದವಳೇ ಮತ್ತೆ ಕಟ್ಟಿಸಿಕೊಂಡಳು! ಇದು ಪೇಂಟರ್ ಹುಡುಗ, ಶ್ರೀಮಂತ ಹುಡುಗಿಯ ಸಿನಿಮೀಯ ಲವ್ ಸ್ಟೋರಿ
ಸಾಯಿ ಸಂದೀಪ್ ಹಾಗೂ ಕೀರ್ತನಾ
Image Credit source: tv9
Edited By:

Updated on: Jun 19, 2026 | 7:44 AM

ಚಿಕ್ಕಬಳ್ಳಾಪುರ, ಜೂನ್ 19: ಪ್ರೇಮಕ್ಕೆ ಜಾತಿ, ಧರ್ಮ, ಅಂತಸ್ತು ಹಾಗೂ ಬಡತನ-ಶ್ರೀಮಂತಿಕೆಯ ಭೇದವಿಲ್ಲ ಎಂಬ ಮಾತಿಗೆ ಸಾಕ್ಷಿಯಾಗುವಂತಹ ವಿಚಿತ್ರ ಹಾಗೂ ಸಿನಿಮೀಯ ಶೈಲಿಯ ಪ್ರೇಮಕಥೆಯೊಂದು ಚಿಕ್ಕಬಳ್ಳಾಪುರದಲ್ಲಿ (Chikkaballapur) ನಡೆದಿದೆ. ಆರು ತಿಂಗಳ ಹಿಂದೆ ಹೆತ್ತವರ ಒತ್ತಡಕ್ಕೆ ಸಿಲುಕಿ, ಪೊಲೀಸ್ ಠಾಣೆಯಲ್ಲೇ ಪ್ರಿಯಕರ ಕಟ್ಟಿದ್ದ ತಾಳಿಯನ್ನು ಕಿತ್ತೆಸೆದು ಹೋಗಿದ್ದ ಯುವತಿಯೊಬ್ಬಳು, ಇದೀಗ ತನ್ನ ಅಸಲಿ ಪ್ರೀತಿಯನ್ನು ಹುಡುಕಿಕೊಂಡು ಬಂದು ಅದೇ ಯುವಕನೊಂದಿಗೆ ದೇಗುಲದಲ್ಲಿ ಮರುಮದುವೆಯಾಗಿದ್ದಾಳೆ. ಮನೆಯವರ ತೀವ್ರ ವಿರೋಧ ಹಾಗೂ ಜೀವ ಬೆದರಿಕೆಯ ನಡುವೆಯೂ ಈ ಪ್ರೇಮಿಗಳು ಮತ್ತೆ ಒಂದಾಗಿದ್ದಾರೆ.

ಮುಖ್ಯಾಂಶಗಳು

  • ಶ್ರೀಮಂತ ಯುವತಿ ಹಾಗೂ ಬಡ ಪೇಂಟರ್ ಲವ್ ಸ್ಟೋರಿ
  • ಪೊಲೀಸ್ ಠಾಣೆಯಲ್ಲೇ ನಡೆದಿತ್ತು ತಾಳಿ ವಾಪಸ್ ಪ್ರಕ್ರಿಯೆ
  • ಜೀವಭಯದಿಂದ ಚಿಕ್ಕಬಳ್ಳಾಪುರ ತೊರೆದ ನವಜೋಡಿ

ಆರು ತಿಂಗಳ ಹಿಂದೆ ಮುರಿದುಬಿದ್ದಿದ್ದ ಮದುವೆ

ಚಿಕ್ಕಬಳ್ಳಾಪುರದ ಕಂದವಾರ ಬಡಾವಣೆಯ ನಿವಾಸಿಯಾದ ಕೀರ್ತನಾ ಬಲಜಿಗ ಸಮುದಾಯದ ಶ್ರೀಮಂತ ಕುಟುಂಬಕ್ಕೆ ಸೇರಿದ ಯುವತಿ. ಅದೇ ನಗರದ ಎಸ್‌ಟಿ (ST) ಸಮುದಾಯಕ್ಕೆ ಸೇರಿದ ಸಾಯಿ ಸಂದೀಪ್ ಎಂಬ ಬಡ ಯುವಕ ಪೇಂಟಿಂಗ್ ಕೆಲಸ ಮಾಡಿಕೊಂಡಿರುವವ. ಪರಸ್ಪರ ಪ್ರೀತಿಸುತ್ತಿದ್ದ ಇವರು ಆರು ತಿಂಗಳ ಹಿಂದೆ ಮನೆಯವರಿಗೆ ತಿಳಿಸದೆ ಪ್ರೇಮ ವಿವಾಹವಾಗಿದ್ದರು. ಆದರೆ, ಅಂತಸ್ತಿನ ಭೇದದ ಹಿನ್ನೆಲೆಯಲ್ಲಿ ಯುವತಿಯ ಪೋಷಕರು ಈ ಮದುವೆಯನ್ನು ತೀವ್ರವಾಗಿ ವಿರೋಧಿಸಿ ಗಲಾಟೆ ಮಾಡಿದ್ದರು. ಪೋಷಕರ ತೀವ್ರ ಒತ್ತಡ ಹಾಗೂ ಭಾವನಾತ್ಮಕ ಬ್ಲ್ಯಾಕ್‌ಮೇಲ್‌ಗೆ ಮಣಿದಿದ್ದ ಕೀರ್ತನಾ, ಜನವರಿ 6 ರಂದು ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲೇ ಸಂದೀಪ್ ಕಟ್ಟಿದ್ದ ತಾಳಿಯನ್ನು ಕಿತ್ತೆಸೆದು ಹೆತ್ತವರ ಜೊತೆ ಮನೆಗೆ ಮರಳಿದ್ದಳು. ಆ ಮೂಲಕ ಇವರ ಪ್ರೇಮಕಥೆ ಅಲ್ಲಿಗೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು.

ಮರಳಿ ಬಂದು ದೇಗುಲದ ಮುಂಭಾಗ ರಸ್ತೆಯಲ್ಲೇ ತಾಳಿ ಕಟ್ಟಿಸಿಕೊಂಡ ಕೀರ್ತನಾ!

ಹೆತ್ತವರ ಒತ್ತಾಯಕ್ಕೆ ಮಣಿದು ಅಂದು ತಾಳಿ ಕಿತ್ತುಹಾಕಿದ್ದರೂ ಕೀರ್ತನಾಳಿಗೆ ಸಂದೀಪ್ ಮೇಲಿದ್ದ ಪ್ರೀತಿ ಮಾತ್ರ ಕೊಂಚವೂ ಕಡಿಮೆಯಾಗಿರಲಿಲ್ಲ. ಕಳೆದ ಆರು ತಿಂಗಳಿಂದ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ ಆಕೆ, ಇತ್ತೀಚೆಗೆ ‘‘ನಿನ್ನನ್ನು ಬಿಟ್ಟು ನನಗಿರಲು ಸಾಧ್ಯವಿಲ್ಲ’’ ಎಂದು ಸಂದೀಪ್‌ಗೆ ಸ್ವತಃ ಫೋನ್ ಮಾಡಿ ಕರೆಸಿಕೊಂಡಿದ್ದಾಳೆ. ತಕ್ಷಣವೇ ಮನೆ ಬಿಟ್ಟು ಹೊರಟುಬಂದ ಕೀರ್ತನಾ, ದೇವಸ್ಥಾನದ ಮುಂಭಾಗದ ರಸ್ತೆಯಲ್ಲೇ ನಿಂತು ಸಂದೀಪ್ ಕೈಯಿಂದ ಮತ್ತೊಮ್ಮೆ ತಾಳಿ ಕಟ್ಟಿಸಿಕೊಂಡಿದ್ದಾಳೆ. ಇಷ್ಟೇ ಅಲ್ಲದೆ, ಈ ಜೋಡಿ ಸದ್ಯ ಮರುಮದುವೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದೆ. ಜೋಡಿಯು ಸದ್ಯ ಯುವತಿಯ ಕಡೆಯವರಿಂದ ಜೀವ ಬೆದರಿಕೆ ಇರುವ ಕಾರಣ ಚಿಕ್ಕಬಳ್ಳಾಪುರ ತೊರೆದು ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us