ಚಿಕ್ಕಬಳ್ಳಾಪುರದಲ್ಲಿ ಬಿಸಿಲಿಗೆ ಹೈರಾಣಾದ ಜನ: ವಾಂತಿ, ಬೇದಿ, ಜ್ವರ, ಜಾಂಡೀಸ್ ಉಲ್ಬಣ
ಚಿಕ್ಕಬಳ್ಳಾಪುರ ಮತ್ತು ಮಂಡ್ಯದಲ್ಲಿ ಮಾರ್ಚ್ ತಿಂಗಳಲ್ಲೇ ತೀವ್ರ ಬಿಸಿಲಿನ ತಾಪಮಾನ ಏರಿಕೆಯಾಗಿದೆ. ಬಿಸಿಲಿನಿಂದ ಚಿಕ್ಕಬಳ್ಳಾಪುರದ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಮತ್ತು ವೃದ್ಧರಲ್ಲಿ ಜ್ವರ, ವಾಂತಿ, ಮತ್ತು ಜಾಂಡೀಸ್‌ನಂತಹ ಕಾಯಿಲೆಗಳು ಹೆಚ್ಚಾಗುತ್ತಿವೆ. ಆಸ್ಪತ್ರೆಗಳಲ್ಲಿ ಜನಜಂಗುಳಿ ಉಂಟಾಗಿದೆ. ಹೆಚ್ಚಿನ ನೀರು ಸೇವಿಸುವುದು ಮತ್ತು ಬಿಸಿಲಿನಿಂದ ರಕ್ಷಿಸಿಕೊಳ್ಳುವುದು ಮುಖ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಚಿಕಬ್ಬಳ್ಳಾಪುರ, ಮಾರ್ಚ್ 14: ಬೇಸಿಗೆ (Summer) ಆರಂಭವಾಗಿದ್ದು, ಸೂರ್ಯನ ಶಾಖಕ್ಕೆ ಜನ ತತ್ತರಿಸಿದ್ದಾರೆ. ಇನ್ನು ಬಿಸಿಲಿನ ತಾಪಮಾನದಿಂದ ಚಿಕ್ಕಬಳ್ಳಾಪುರದ (Chikkaballapur) ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ವೃದ್ದರಲ್ಲಿ ವಾಂತಿ, ಬೇದಿ, ಜಾಂಡೀಸ್ ಉಲ್ಬಣಗೊಂಡಿದೆ. ಇದರಿಂದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನಜಂಗುಳಿ ಉಂಟಾಗಿದೆ. ಮದ್ಯಾಹ್ನವಾಗುತ್ತಿದ್ದಂತೆ 36 ರಿಂದ 38 ಡಿಗ್ರಿ ಸೆಲ್ಸಿಯಸ್‍ನಷ್ಟು ತಾಪಮಾನ ದಾಖಲಾಗುತ್ತಿದೆ. ಇದರಿಂದ ಮಕ್ಕಳು, ಬಾಣಂತಿರು, ವೃದ್ದರಲ್ಲಿ ಡಿ ಹೈಡ್ರೇಶನ್ ಉಂಟಾಗಿ ಜ್ವರ, ವಾಂತಿ, ಬೇದಿ, ಜಾಂಡೀಸ್‍ನಂತ ಕಾಯಿಲೆಗಳು ಬರುತ್ತಿವೆ. ಇದರಿಂದ ಚಿಕ್ಕಬಳ್ಳಾಪುರ ಜಿಲ್ಲೆಯ ಜನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯತ್ತ ಮುಖ ಮಾಡಿದ್ದಾರೆ. ಇದರಿಂದ ಆಸ್ಪತ್ರೆಗಳಲ್ಲಿ ಜನಜಂಗುಳಿ ಉಂಟಾಗಿದೆ.
ಮಕ್ಕಳು, ಬಾಣಂತಿರಯ, ಗರ್ಭಿಣಿಯರು ಹಾಗೂ ವೃದ್ದರು ಹೆಚ್ಚಾಗಿ ನೀರು ಕುಡಿಯಬೇಕು ಆದಷ್ಟು ಮನೆ ಊಟ ಮಾಡುವಂತೆ, ಬಿಸಿಲಿನಿಂದ ರಕ್ಷಣೆ ಪಡೆಯುವಂತೆ ಮಕ್ಕಳ ತಜ್ಞ ಡಾ. ರವಿಕುಮಾರ್ ಸಲಹೆ ನೀಡಿದ್ದಾರೆ.
ಮಂಡ್ಯದಲ್ಲಿ ಹೆಚ್ಚಾಯ್ತು ಬಿಸಿಲಿನ ತಾಪಮಾನ
ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಬಿಸಿಲಿನ ತಾಪಮಾನ ಜನರನ್ನ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಅದರಲ್ಲೂ ಜನರು ಮಧ್ಯಾಹ್ನದ ವೇಳೆ ಮನೆಯಿಂದ ಹೊರಬರಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಂಡ್ಯದಲ್ಲಿ ಮಧ್ಯಾಹ್ನದ ವೇಳೆ 38 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಹೀಗಾಗಿ, ದೇಹದ ಉಷ್ಣಾಂಶವನ್ನ ಕಡಿಮೆ ಮಾಡಿಕೊಳ್ಳಲು ಜನರು ಕೂಡ ಕಲ್ಲಂಗಡಿ ಹಣ್ಣು, ಜ್ಯೂಸ್, ಎಳನೀರು, ಐಸ್ ಕ್ರೀಂ ಮೊರೆ ಹೋಗುತ್ತಿದ್ದಾರೆ.
ಸಾಮನ್ಯವಾಗಿ ಮಂಡ್ಯದಲ್ಲಿ ಏಪ್ರಿಲ್ ತಿಂಗಳಲ್ಲಿ ಯುಗಾದಿ ಕಳೆದ ನಂತರ ಬಿಸಿಲಿನ ತಾಪಮಾನ ಹೆಚ್ಚಳವಾಗುತ್ತದೆ. ಆದರೆ ಮಾರ್ಚ್ನ ಎರಡನೇ ವಾರದಲ್ಲೇ ಈ ರೀತಿ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಹೇಗೆಪ್ಪ ಮನೆಯಿಂದ ಹೊರಗೆ ಬರುವುದು, ಕೆಲಸ ಕಾರ್ಯ ಮಾಡುವುದು ಅನ್ನೋ ಪರಿಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: Palm wine: ಬೇಸಿಗೆಯಲ್ಲಿ ಶೇಂದಿ ಸೇವನೆ ಮಾಡಿದರೆ ಈ ಆರೋಗ್ಯ ಸಮಸ್ಯೆ ಬರುವುದಿಲ್ಲ
ಒಟ್ಟಿನಲ್ಲಿ ಮಾರ್ಚ್ ನಲ್ಲಿಯೇ ಈ ಬಿಸಿಲು ಆದರೆ ಏಪ್ರಿಲ್ ಹಾಗೂ ಮೇ ನಲ್ಲಿ ನಮ್ಮ ಕಥೆ ಏನು ಜನರು ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ.