ಚಿಕ್ಕಬಳ್ಳಾಪುರ ಜನಿವಾರ ಜಟಾಪಟಿ: ಪೊಲೀಸರು ಮನವಿ ಮಾಡಿದ್ರೂ ದೂರು ನೀಡಲು ಪರೀಕ್ಷಾರ್ಥಿ ಹಿಂದೇಟು

ಚಿಕ್ಕಬಳ್ಳಾಪುರದಲ್ಲಿ ಸಿಇಟಿ ಪರೀಕ್ಷೆ ವೇಳೆ ಪರೀಕ್ಷಾರ್ಥಿಯ ಜನಿವಾರ ತೆಗೆಸಿದ ವಿಚಾರ ವಿವಾದಕ್ಕೀಡಾಗಿದೆ. ಆದರೆ ಪೊಲೀಸರೇ ದೂರು ನೀಡುವಂತೆ ಮನವಿ ಮಾಡಿದ್ದರೂ ದೂರು ನೀಡಲು ಪರೀಕ್ಷಾರ್ಥಿ ಹಾಗೂ ಪೋಷಕರು ಹಿಂದೇಟು ಹಾಕಿದ್ದಾರೆ. ಈ ಮಧ್ಯೆ ನಾಗಾರ್ಜುನ ಕಾಲೇಜು ಆಡಳಿತ ಮಂಡಳಿಯ ಪ್ರಭಾವದ ಆರೋಪ ಕೇಳಿಬಂದಿದೆ.

ಚಿಕ್ಕಬಳ್ಳಾಪುರ ಜನಿವಾರ ಜಟಾಪಟಿ: ಪೊಲೀಸರು ಮನವಿ ಮಾಡಿದ್ರೂ ದೂರು ನೀಡಲು ಪರೀಕ್ಷಾರ್ಥಿ ಹಿಂದೇಟು
ಪರೀಕ್ಷಾರ್ಥಿ ಕೆ.ಆರ್.ಸುಪ್ರೀತ್
Image Credit source: tv9 kannada
Edited By:

Updated on: Apr 26, 2026 | 5:16 PM

ಚಿಕ್ಕಬಳ್ಳಾಪುರ, ಏಪ್ರಿಲ್​ 26: ಸಿಇಟಿ ಪರೀಕ್ಷೆ ವೇಳೆ ಪರೀಕ್ಷಾರ್ಥಿಯ ಜನಿವಾರ (janivara) ಕತ್ತರಿಸಿದ ವಿಚಾರ ಜಿಲ್ಲೆಯಲ್ಲಿ ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಆದರೆ, ಈ ಸಂಬಂಧ ದೂರು ನೀಡಲು ಪರೀಕ್ಷಾರ್ಥಿ ಕೆ.ಆರ್.ಸುಪ್ರೀತ್ ಮತ್ತು ಆತನ ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸುವಂತೆ ಪೊಲೀಸರು ಮನವಿ ಮಾಡಿದರೂ, ಸುಪ್ರೀತ್ ಮತ್ತು ಆತನ ಪೋಷಕರು ದೂರು ನೀಡಲು ಮುಂದೆ ಬರುತ್ತಿಲ್ಲ. ಪರೀಕ್ಷೆ ನಡೆದ ನಾಗಾರ್ಜುನ ಪಿ.ಯು ಕಾಲೇಜಿನ ಆಡಳಿತ ಮಂಡಳಿಯು ಸುಪ್ರೀತ್ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಇದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಸದ್ಯ ನಂದಿಗಿರಿಧಾಮ ಪೊಲೀಸರಿಗೆ ಪ್ರಕರಣ ಗೊಂದಲ ಸೃಷ್ಟಿಸಿದೆ.

ವೈಯಕ್ತಿಕವಾಗಿ ದೂರು ನೀಡಿದರೆ ದಾಖಲು ಮಾಡಬಹುದು. ಆದರೆ ಬ್ರಾಹ್ಮಣ ಮಹಾಸಭಾದಿಂದ ಮನವಿ ನೀಡಿದ್ದಾರೆ ಮನವಿಯನ್ನು ದೂರು ಎಂದು ಪರಿಗಣಿಸಲು ಆಗಲ್ಲ. ಮನವಿ ಪತ್ರದಲ್ಲಿ ಹತ್ತಾರು ಜನ ಸಹಿ ಮಾಡಿದ್ದಾರೆ, ಯಾರನ್ನು ದೂರುದಾರರೆಂದು ಪರಿಗಣಿಸುವುದು ಎಂದು ಟಿವಿ9ಗೆ ಪೊಲೀಸ್ ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ನೀಡಲಾಗಿದೆ.

ಜನಿವಾರ ತಾನೇ ಮರಕ್ಕೆ ನೇತು ಹಾಕಿದ ಪರೀಕ್ಷಾರ್ಥಿ: ಸಿಸಿಟಿವಿಯಲ್ಲಿ ಸತ್ಯ ಬಯಲು

ಆರಂಭದಲ್ಲಿ ಸುಪ್ರೀತ್, “ತನ್ನ ಜನಿವಾರವನ್ನು ಕತ್ತರಿಸಿ ಕಸದ ಬುಟ್ಟಿಗೆ ಎಸೆಯಲಾಗಿತ್ತು, ಅದನ್ನು ತಾನು ಹುಡುಕಿ ತಂದೆ” ಎಂದು ಹೇಳಿಕೆ ನೀಡಿದ್ದ. ಆದರೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಸತ್ಯಾಂಶ ಬೇರೆಯೇ ಇದೆ. ಜನಿವಾರವನ್ನು ಕತ್ತರಿಸಿದ ನಂತರ ಸುಪ್ರೀತ್ ಅದನ್ನು ತಾನೇ ಮರಕ್ಕೆ ನೇತು ಹಾಕುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಹಾಕಿದ್ರು: ಅಳಲು ತೋಡಿಕೊಂಡ ವಿದ್ಯಾರ್ಥಿ

ಈ ಹಿನ್ನೆಲೆಯಲ್ಲಿ ಪೊಲೀಸರು ಸುಪ್ರೀತ್ ಕಡೆಯಿಂದ ವಿಡಿಯೋ ಮತ್ತು ಲಿಖಿತ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ಯಾರಾದರೂ ಪ್ರಶ್ನಿಸಿದರೆ ಉತ್ತರಿಸಲು ಈ ದಾಖಲೆಯನ್ನು ಸಂಗ್ರಹಿಸಲಾಗಿದೆ.

ಇಡೀ ಘಟನೆ ಮರುಸೃಷ್ಟಿ

ಇನ್ನು ನಂದಿಗಿರಿಧಾಮ ಪೊಲೀಸರು ಪರೀಕ್ಷಾರ್ಥಿ ಸುಪ್ರೀತ್​​ನನ್ನು ನಾಗಾರ್ಜುನ ಪಿ.ಯು. ಕಾಲೇಜ್​​ಗೆ ಕರೆಸಿ ಇಡೀ ಘಟನೆಯನ್ನು ಮರುಸೃಷ್ಟಿ ಮಾಡಿದ್ದಾರೆ. ಹೇಗೆ ಬಂದೆ, ಎಲ್ಲಿಗೆ ಬಂದೆ, ಯಾರು ಇದ್ದರು, ಹೇಗೆ ಜನಿವಾರ ತೆಗೆದೆ, ಯಾರು ಕತ್ತರಿಸಿದರು, ಹೇಗೆ ಮರದ ಮೇಲೆ ಹಾಕಿದೆ ಎಂದು ಮರು ಸೃಷ್ಟಿ ಮಾಡಿದ್ದಾರೆ.

ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ: ಸಚಿವ ಡಾ.ಎಂ.ಸಿ.ಸುಧಾಕರ್

ಇನ್ನು ಈ ವಿಚಾರವಾಗಿ ಸಚಿವ ಡಾ.ಎಂ.ಸಿ.ಸುಧಾಕರ್ ಬೇಸರ ವ್ಯಕ್ತಪಡಿಸಿದ್ದಾರೆ. ಜನಿವಾರದಲ್ಲಿ ಏನು ಇರುತ್ತೆ, ಸಿಬ್ಬಂದಿ ಯಾಕೆ ಅದನ್ನು ತೆಗೆಸಬೇಕಿತ್ತು. ಇದೇ ಕಾರಣಕ್ಕೆ ಸಮವಸ್ತ್ರ ಸಂಹಿತಾಧಿಕಾರಿ ನೇಮಕ ಮಾಡಲಾಗಿತ್ತು. ಮನಸ್ಥಿತಿ ಸರಿಯಿಲ್ಲದಿರುವವರು ಈ ರೀತಿ ಮಾಡಿರುವ ಸಾಧ್ಯತೆಯಿದೆ. ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಆದರೆ ಪರೀಕ್ಷಾರ್ಥಿ ಪೊಲೀಸರಿಗೆ ದೂರು ನೀಡಿಲ್ಲವೆನ್ನುವ ಮಾಹಿತಿಯಿದೆ ಎಂದು ಹೇಳಿದ್ದಾರೆ.

ಘಟನೆ ಹಿನ್ನೆಲೆ

ಚಿಕ್ಕಬಳ್ಳಾಪುರ ಚಿಂತಾಮಣಿ ನಿವಾಸಿ ಸುಪ್ರೀತ್​ ಮೊನ್ನೆ ಪ್ರತಿಷ್ಠಿತ ನಾಗಾರ್ಜುನ ಪಿ.ಯು ಕಾಲೇಜಿನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಪರೀಕ್ಷಾ ಕೇಂದ್ರ ಹೋಗಿದ್ದ. ಆ ವೇಳೆ ಕಾಲೇಜಿನ ಸಿಬ್ಬಂದಿ, ಪರಿಶೀಲನೆ ವೇಳೆ ವಿದ್ಯಾರ್ಥಿ ಧರಿಸಿದ್ದ ಜನಿವಾರ ಕತ್ತರಿಸಿ ಕಸದ ಬುಟ್ಟಿಗೆ ಎಸೆದಿದ್ದಾರಂತೆ. ಹೀಗಂತ ವಿದ್ಯಾರ್ಥಿಯೇ ಆರೋಪ ಮಾಡಿದ್ದ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ  ಕ್ಲಿಕ್ ಮಾಡಿ.

Follow Us