ಚಿಕ್ಕಬಳ್ಳಾಪುರದಲ್ಲಿ ಪ್ರತ್ಯೇಕ ದುರಂತ: ಕುಂಟೆಯಲ್ಲಿ ಮುಳುಗಿ ತಾಯಿ-ಮಗಳು, ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿ ಅನುಮಾನಾಸ್ಪದ ಸಾವು

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಎರಡು ಪ್ರತ್ಯೇಕ ದುರಂತ ಘಟನೆಗಳು ಸಂಭವಿಸಿವೆ. ನಿಮ್ಮಕಾಯಲಹಳ್ಳಿ ಗ್ರಾಮದ ಬಳಿ ಕುಂಟೆಯಲ್ಲಿ ಮುಳುಗಿ ಬೆಂಗಳೂರಿನ ಬನಶಂಕರಿ ನಿವಾಸಿಗಳಾದ ಸಲ್ಮಾ (37), ಸಾದಿಕಾ (14) ಮೃತಪಟ್ಟಿದ್ದಾರೆ. ಮತ್ತೊಂದೆಡೆ, ಗೂಬಳಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ಕಲಹದ ಆರೋಪದ ನಡುವೆ ನಾರಾಯಣಸ್ವಾಮಿ (32) ಮೃತಪಟ್ಟಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಚಿಕ್ಕಬಳ್ಳಾಪುರದಲ್ಲಿ ಪ್ರತ್ಯೇಕ ದುರಂತ: ಕುಂಟೆಯಲ್ಲಿ ಮುಳುಗಿ ತಾಯಿ-ಮಗಳು, ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿ ಅನುಮಾನಾಸ್ಪದ ಸಾವು
ಸಲ್ಮಾ, ಸಾದಿಕಾ ಹಾಗೂ ನಾರಾಯಣಸ್ವಾಮಿ
Edited By:

Updated on: Nov 24, 2026 | 12:41 PM

ಮುಖ್ಯಾಂಶಗಳು

  • ಕುಂಟೆಯಲ್ಲಿ ಮುಳುಗಿ ತಾಯಿ-ಮಗಳ ಸಾವು
  • ಮಗಳನ್ನು ರಕ್ಷಿಸಲು ಹೋಗಿ ನೀರಿಗೆ ಇಳಿದಿದ್ದ ತಾಯಿ
  • ಕೌಟುಂಬಿಕ ಕಲಹದ ಆರೋಪದ ನಡುವೆ ವ್ಯಕ್ತಿ ಅನುಮಾನಾಸ್ಪದ ಸಾವು

ಚಿಕ್ಕಬಳ್ಳಾಪುರ, ನವೆಂಬರ್ 24: ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ದುರಂತ ಘಟನೆಗಳು ಸಂಭವಿಸಿವೆ. ಚಿಂತಾಮಣಿ ತಾಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದ ಬಳಿ ಕುಂಟೆಯಲ್ಲಿ ಮುಳುಗಿ ತಾಯಿ-ಮಗಳು ಮೃತಪಟ್ಟಿದ್ದರೆ, ಗೂಬಳಹಳ್ಳಿ ಗ್ರಾಮದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ದೇಹ ನೇಣುಬಿಗಿದುಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆ ಶಂಕೆ ವ್ಯಕ್ತವಾಗಿದ್ದು, ಕುಟುಂಬದವರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕುಂಟೆಯಲ್ಲಿ ಮುಳುಗಿ ತಾಯಿ-ಮಗಳು ಸಾವು

ಚಿಂತಾಮಣಿ ತಾಲೂಕಿನ ನಿಮ್ಮಕಾಯಲಹಳ್ಳಿ ಗ್ರಾಮದ ಬಳಿ ಕುಂಟೆಯಲ್ಲಿ ಮುಳುಗಿ ತಾಯಿ-ಮಗಳು ಮೃತಪಟ್ಟಿದ್ದಾರೆ. ಬೆಂಗಳೂರಿನ ಬನಶಂಕರಿ ನಿವಾಸಿಗಳಾದ ಸಲ್ಮಾ (37) ಮತ್ತು ಅವರ ಮಗಳು ಸಾದಿಕಾ (14) ಮೃತ ದುರ್ದೈವಿಗಳು. ಮೂಲತಃ ನಿಮ್ಮಕಾಯಲಹಳ್ಳಿ ಗ್ರಾಮದವರಾದ ಸಲ್ಮಾ, ಮಗಳೊಂದಿಗೆ ತವರು ಗ್ರಾಮಕ್ಕೆ ಬಂದಿದ್ದರು.

Loading...

ಗ್ರಾಮದ ಹೊರವಲಯದಲ್ಲಿರುವ ಕುಂಟೆಯ ಬಳಿ ವಿಹಾರಕ್ಕೆ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ. ಕುಂಟೆಯ ಬಳಿ ಇದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಮಗಳು ನೀರಿಗೆ ಬಿದ್ದಿದ್ದಾಳೆ. ಮಗಳನ್ನು ರಕ್ಷಿಸಲು ತಾಯಿಯೂ ನೀರಿಗೆ ಇಳಿದಿದ್ದಾರೆ. ಆದರೆ, ನೀರಿನ ಆಳದ ಅರಿವಿಲ್ಲದೆ ಇಬ್ಬರೂ ಮುಳುಗಿ ಮೃತಪಟ್ಟಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಇಬ್ಬರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬಟ್ಲಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೌಟುಂಬಿಕ ಕಲಹದ ಹಿನ್ನೆಲೆ ವ್ಯಕ್ತಿ ಸಾವು

ಇನ್ನೊಂದು ಘಟನೆಯಲ್ಲಿ, ಚಿಂತಾಮಣಿ ತಾಲೂಕಿನ ಗೂಬಳಹಳ್ಳಿ ಗ್ರಾಮದಲ್ಲಿ ನಾರಾಯಣಸ್ವಾಮಿ (32) ನೇಣುಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಪತ್ನಿ ಹಾಗೂ ಪತ್ನಿಯ ತಂದೆ-ತಾಯಿ ಕಿರುಕುಳ ನೀಡುತ್ತಿದ್ದರು ಎಂದು ಮೃತರ ತಾಯಿ ಆರೋಪಿಸಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Loading...
Unable to load recommendations.
Follow Us