ತೀವ್ರ ಸ್ವರೂಪ ಪಡೆದ ಚಪ್ಪಲಿ ಎಸೆತ ಪ್ರಕರಣ: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪರ ನಿಂತ ಅಹಿಂದ

ಚಿಕ್ಕಬಳ್ಳಾಪುರದಲ್ಲಿ ಮೊನ್ನೆ ಕೆಂಪೇಗೌಡ ಜಯಂತಿ ಆಚರಣೆ ವೇಳೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಮೀಸೆ ತಿರುವಿ ತೊಡೆ ತಟ್ಟಿ ಪ್ರಚೋದನೆ ನೀಡಿದ್ದಾರೆಂದು ಆರೋಪಿ ಜೆಡಿಎಸ್, ಪ್ರದೀಪ್ ಈಶ್ವರ್ ವಿರುದ್ಧ ಚಿಕ್ಕಬಳ್ಳಾಪುರ ಎಸ್ಪಿಗೆ ದೂರು ನೀಡಿದೆ. ಇದರ ಬೆನ್ನಲ್ಲೇ ಇದೀಗ ಪ್ರದೀಪ್ ಈಶ್ವರ್ ಬೆನ್ನಿಗೆ ಸ್ವಜಾತಿ ಬಲಿಜ ಸಂಘ ಹಾಗೂ ಅಹಿಂದ ನಿಂತಿದೆ.

ತೀವ್ರ ಸ್ವರೂಪ ಪಡೆದ ಚಪ್ಪಲಿ ಎಸೆತ ಪ್ರಕರಣ: ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪರ ನಿಂತ ಅಹಿಂದ
Pradeep Eshwar
Edited By:

Updated on: Jul 01, 2026 | 7:01 PM

ಮುಖ್ಯಾಂಶಗಳು

  • ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಕಿ ಎಸೆತ ಕೇಸ್
  • ಪಕ್ಷಾತೀತವಾಗಿ ಶಾಸಕ ಪ್ರದೀಪ್ ಈಶ್ವರ್ ಬೆಂಬಲಕ್ಕೆ ನಿಂತ ಬಲಿಜ ಮುಖಂಡರು
  • ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ದೂರು

ಚಿಕ್ಕಬಳ್ಳಾಪುರ, (ಜುಲೈ 01): ಮೊನ್ನೆ ಚಿಕ್ಕಬಳ್ಳಾಪುರದಲ್ಲಿ (Chikkaballapur) ಕೆಂಪೇಗೌಡ ಜಯಂತಿ ಆಚರಣೆ ವೇಳೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಮೇಲೆ ಚಪ್ಪಲಿ ಎಸೆತ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು,  ಬಲಿಜ ಸಂಘ ಹಾಗೂ ಅಹಿಂದ ಪ್ರದೀಪ್ ಈಶ್ವರ್ ಬೆಂಬಲಕ್ಕೆ ನಿಂತಿವೆ. ಹೌದು…ಶಾಸಕ ಪ್ರದೀಪ್ ಈಶ್ವರ್ ಪರವಾಗಿ ಚಿಕ್ಕಬಳ್ಳಾಪುರ ತಾಲೂಕು ಬಲಿಜ ಸಂಘ ಬಹಿರಂಗವಾಗಿ ಬೆಂಬಲ ಸೂಚಿಸಿದ್ದು, ಪ್ರಕರಣವನ್ನು ಎಸ್‌ಐಟಿ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಎಸ್ಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದೆ. ಇನ್ನು ಇಂದು (ಜುಲೈ 01) ಚಿಕ್ಕಬಳ್ಳಾಪುರ ತಾಲೂಕು ಬಲಿಜ ಸಂಘವು ಹಾರೋಬಂಡೆ ಶಿರಡಿ ಸಾಯಿಬಾಬಾ ಆಶ್ರಮದಲ್ಲಿ ಸಭೆ ನಡೆಸಿದ್ದು, ಪಕ್ಷಾತೀತವಾಗಿ ಶಾಸಕ ಪ್ರದೀಪ್ ಈಶ್ವರ್ ಬೆಂಬಲಕ್ಕೆ ನಿಲ್ಲುವ ತೀರ್ಮಾನ ಕೈಗೊಂಡಿದೆ.

ಇದೆ ವೇಳೆ ಮಾತನಾಡಿದ ಚಿಕ್ಕಬಳ್ಳಾಪುರ ತಾಲೂಕು ಬಲಿಜ ಸಂಘದ ತಾಲೂಕು ಅದ್ಯಕ್ಷ ಮಂಜುನಾಥ್, ಕೆಂಪೇಗೌಡ ಜಯಂತಿ ಯಾವುದೇ ಒಂದು ಜಾತಿಗೆ ಸೀಮಿತವಾದ ಕಾರ್ಯಕ್ರಮವಲ್ಲ. ಶಾಸಕರು ಕೆಂಪೇಗೌಡರಿಗೆ ಹಾಗೂ ವೇದಿಕೆಯಲ್ಲಿದ್ದ ಗಣ್ಯರಿಗೆ ಗೌರವ ಸಲ್ಲಿಸಿದ್ದು, ಅವರಿಂದ ಯಾವುದೇ ಪ್ರಚೋದನೆ ನಡೆದಿಲ್ಲ. ಬದಲಾಗಿ ಕಾರ್ಯಕ್ರಮದಿಂದ ಹೊರಹೋಗುವಂತೆ ಕೂಗಾಡಿ ಪರಿಸ್ಥಿತಿಯನ್ನು ಹದಗೆಡಿಸಲಾಗಿದೆ ಎಂದು ಆರೋಪಿಸಿದರು.

ಇದನ್ನೂ ನೋಡಿ: ತೋಳು ತಟ್ಟಿ ಮೀಸೆ ತಿರುವಿದ ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ

ಇನ್ನೂ ಸಭೆ ನಂತರ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ತೆರಳಿದ ಬಲಿಜ ಸಂಘದ ಮುಖಂಡರು, ಸಂಸದ ಡಾ. ಕೆ. ಸುಧಾಕರ್, ಬಿಜೆಪಿ ಮುಖಂಡ ಸಂದೀಪ್ ರೆಡ್ಡಿ ಹಾಗೂ ಪಿ.ಎನ್. ಕೇಶವರೆಡ್ಡಿ ವಿರುದ್ಧ ದೂರು ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಸಕರ ವಿರುದ್ಧ ಪ್ರತಿಭಟನೆ ಮತ್ತು ಗಲಾಟೆಗೆ ಪ್ರಚೋದನೆ ನೀಡಲಾಗಿದೆ ಎಂದು ದೂರು ನೀಡಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗೆ ಅವಮಾನವಾಗಿರುವುದು ಖಂಡನೀಯ, ಗಲಾಟೆಗೆ ಪ್ರಚೋದನೆ ನೀಡಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಗಲಾಟೆ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ಕೆಂಪೇಗೌಡ ಜಯಂತಿಯಲ್ಲಿ ನಡೆದ ಗಲಾಟೆ ಕೇವಲ ರಾಜಕೀಯ ವಿವಾದವಾಗಿ ಉಳಿಯದೆ, ವಿವಿಧ ಸಮುದಾಯಗಳ ಬೆಂಬಲ ಮತ್ತು ಪ್ರತಿಭಟನೆಗಳ ಮೂಲಕ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಒಂದು ಕಡೆ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ದೂರು ದಾಖಲಿಸುವಂತೆ ಮತ್ತೊಂದೆಡೆ ಸಂಸದ ಡಾ. ಕೆ. ಸುಧಾಕರ್ ವಿರುದ್ದ ದುರು ದಾಖಲು ಮಾಡುವಂತೆ ಒತ್ತಾಯಗಳು ಕೇಳಿ ಬಂದಿದೆ.

ಇದನ್ನೂ ಓದಿ: ಚಪ್ಪಲಿ ಎಸೆತ ಪ್ರಕರಣ: ಮಾಜಿ ಸಿಎಂ ಸಿದ್ದರಾಮಯ್ಯ ಎದುರು ಶಾಸಕ ಪ್ರದೀಪ್​​ ಈಶ್ವರ್​​ ಕಣ್ಣೀರು

ಇನ್ನು ಈ ಬಗ್ಗೆ ಅಹಿಂದ‌ ಚಳವಳಿ ನಾಯಕ ವೆಂಕಟೇಶ್ ಗೌಡ‌ ಪ್ರತಿಕ್ರಿಯಿಸಿ, ಚಿಕ್ಕಬಳ್ಳಾಪುರದಲ್ಲಿ‌ ಪ್ರದೀಪ್ ಈಶ್ವರ್ ಮೇಲೆ ಹಲ್ಲೆ ಆಗಿದೆ. ಅಹಿಂದ ವರ್ಗಗಳ‌ ಸರ್ಕಾರ ಇದ್ದಾಗ ಹಲ್ಲೆ‌ ನಡೆದಿದೆ. ಎಂಎಲ್ ಎ ಮೇಲೆ ಚಪ್ಪಲಿ ಎಸೆದಿದ್ದಾರೆ. ನಿನ್ನೆ ನಡೆದ ಘಟನೆ ಅಕ್ಷಮ್ಯ ಅಪರಾಧ . ಇದು 224 ಶಾಸಕರಿಗೆ ಮಾಡಿದ ಅವಮಾನ. ಎಲ್ಲಾ 31 ಜಿಲ್ಲೆಗಳಲ್ಲೂ ಪ್ರದೀಪ್ ಈಶ್ವರ್ ಪರ ಪ್ರತಿಭಟನೆ ನಡೆಯಲಿದೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us