ಚಿಕ್ಕಬಳ್ಳಾಪುರ: ಸರಣಿ ಅಪಘಾತದಲ್ಲಿ ಆರು ಜನ ಸಾವು; 10ಕ್ಕೂ ಹೆಚ್ಚು ಜನರಿಗೆ ಗಾಯ

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸುಂಕಲಮ್ಮ ದೇವಸ್ಥಾನದ ಬಳಿ ಭೀಕರ ಸರಣಿ ಅಪಘಾತ ಸಂಭವಿಸಿದೆ. ಥಾರ್, ಆಟೋ ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಈ ದುರ್ಘಟನೆಯಲ್ಲಿ ಆರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹತ್ತಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿಕ್ಕಬಳ್ಳಾಪುರ: ಸರಣಿ ಅಪಘಾತದಲ್ಲಿ ಆರು ಜನ ಸಾವು; 10ಕ್ಕೂ ಹೆಚ್ಚು ಜನರಿಗೆ ಗಾಯ
ಸರಣಿ ಅಪಘಾತ
Image Credit source: tv9 kannada
Edited By:

Updated on: May 31, 2026 | 10:02 PM

ಚಿಕ್ಕಬಳ್ಳಾಪುರ, ಮೇ 31: ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಸುಂಕಲಮ್ಮ ದೇವಸ್ಥಾನದ ಬಳಿ ಇಂದು ಭೀಕರ ಸರಣಿ ಅಪಘಾತ (Accident) ಸಂಭವಿಸಿದ್ದು, ಆಟೋದಲ್ಲಿದ್ದ ಐವರು ಮಹಿಳೆಯರು ಸೇರಿ ಆಟೊ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ನಡೆದಿದೆ. ದುರಂತದಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯಗಳಾಗಿದ್ದು, ವಿವಿಧ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್​​ಪಿ ಕುಶಲ್ ಚೌಕ್ಸೆ ಭೇಟಿ‌ ನೀಡಿ ಪರಿಶೀಲಿಸಿದರು.

ನಡೆದಿದ್ದೇನು?

ಥಾರ್ ಕಾರು, ಆಟೋ ಮತ್ತು ಕ್ಯಾಂಟರ್ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿ ವೇಗವಾಗಿ ಬಂದ ಥಾರ್ ಕಾರು ತನ್ನ ಮುಂದೆ ಚಲಿಸುತ್ತಿದ್ದ ಆಟೋಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆಟೋ ನಿಯಂತ್ರಣ ತಪ್ಪಿ ಮುಂಭಾಗದಲ್ಲಿದ್ದ ಕ್ಯಾಂಟರ್ ವಾಹನಕ್ಕೆ ಅಪ್ಪಳಿಸಿದೆ. ಪರಿಣಾಮವಾಗಿ ಆಟೋ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಆರು ಜನ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಉಮಾದೇವಿ (55), ವಿಜಯಾ (40), ಲಕ್ಷ್ಮಮ್ಮ (50), ಚಾಲಕ ಆಂಜಿನಪ್ಪ (35), ಸರೋಜಮ್ಮ, ಅರುಣಮ್ಮ(45) ಮೃತರು. ಎಲ್ಲರೂ ಬಾಗೇಪಲ್ಲಿ ಟೌನ್ ನಿವಾಸಿಗಳು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಸಮುದ್ರದ ಮಧ್ಯೆ ಮುಳುಗಿದ ಬೋಟ್: ಮೃತ್ಯುವಿನ ದವಡೆಯಿಂದ ಪಾರಾದ 7 ಮೀನುಗಾರರು!

ಇನ್ನು ಅಪಘಾತದಲ್ಲಿ ಗಾಯಗೊಂಡ ಹತ್ತಕ್ಕೂ ಹೆಚ್ಚು ಜನರನ್ನು ತಕ್ಷಣ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಬಾಗೇಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಟಾಟಾ ಏಸ್​ ಡಿಕ್ಕಿಯಾಗಿ ವ್ಯಕ್ತಿ ಸಾವು

ರಸ್ತೆ ದಾಟುವಾಗ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಕುಣಿಗಲ್ ಬೈಪಾಸ್ ಲ್ಯಾಂಕೋಟೋಲ್ ಬಳಿ ನಡೆದಿದೆ.  ಮಾಗಡಿ ತಾಲೂಕಿನ ಮಾಯನಾಯಕನಹಳ್ಳಿ ಮೂಲದ ನಿವಾಸಿ ತೋಪೇಗೌಡ (42) ಮೃತ ವ್ಯಕ್ತಿ. ಘಟನೆ ಸಂಬಂಧ ಟಾಟ ಏಸ್ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಮಂತ್ರಾಲಯದ ಬಳಿ ಘೋರ ದುರಂತ: ತುಂಗಭದ್ರಾ ನದಿಗೆ ಈಜಲು ಹೋದ ಐವರು ನೀರುಪಾಲು

ಪತ್ನಿ ಲಕ್ಷ್ಮಿ, ಮಕ್ಕಳು ವಿಮಲಾ, ಗಂಗರಂಗೇಗೌಡ ಜೊತೆಗೆ ಮಾಗಡಿ ತಾಲೂಕಿನ ಮಾಯನಾಯಕನಹಳ್ಳಿಯಲ್ಲಿ ವಾಸವಾಗಿದ್ದ ತೋಪೆಗೌಡ ಮನೆಗೆ ಆಧಾರ ಸ್ತಂಭವಾಗಿದ್ದರು. ನಿನ್ನೆ ಸಂಜೆ ತೋಪೇಗೌಡ ಅವರು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿ ಬಂದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿದೆ. ಸ್ಥಳೀಯರು ಕೂಡಲೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲೇ ಮೃತಪಟ್ಟಿದ್ದಾರೆ.  ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಸರ್ಕಾರಿ ಶವಾಗಾರಕ್ಕೆ ರವಾನಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:05 pm, Sun, 31 May 26

Follow Us