ಆಂಜನೇಯನ ದರ್ಶನಕ್ಕೆಂದು ಹೋದ ತಾತ, ಮೊಮ್ಮಕ್ಕಳು ದುರಂತ ಸಾವು

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಭೀಕರ ದುರಂತ ಸಂಭವಿಸಿದೆ. ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮೊಮ್ಮಕ್ಕಳು ಸೇರಿದಂತೆ ತಾತ ಕೂಡ ನೀರುಪಾಲಾಗಿದ್ದಾರೆ. ಮತ್ತೊಂದೆಡೆ, ಕೋಲಾರ ಜಿಲ್ಲೆಯ ಬಂಗಾರಪೇಟೆ ಬಳಿ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ.

ಆಂಜನೇಯನ ದರ್ಶನಕ್ಕೆಂದು ಹೋದ ತಾತ, ಮೊಮ್ಮಕ್ಕಳು ದುರಂತ ಸಾವು
ಮೃತ ತಾತ
Image Credit source: tv9 kannada
Edited By:

Updated on: Oct 03, 2026 | 10:38 PM

ಮುಖ್ಯಾಂಶಗಳು

  • ಕೃಷಿ ಹೊಂಡದಲ್ಲಿ‌ ಮುಳುಗಿ ತಾತ, ಇಬ್ಬರು ಮೊಮ್ಮಕ್ಕಳು ಸಾವು
  • ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಕಾರು ಪಲ್ಟಿ, ಇಬ್ಬರು ಸಾವು
  • ಲಾರಿ ಚಕ್ರಕ್ಕೆ ಸಿಲುಕಿ ಪತ್ನಿ ಸಾವು: ಪತಿ ಗಂಭೀರ ಗಾಯ

ಚಿಕ್ಕಬಳ್ಳಾಪುರ, ಅಕ್ಟೋಬರ್​​ 03: ಕೃಷಿ ಹೊಂಡದಲ್ಲಿ‌ ಮುಳುಗಿ ತಾತ ಸೇರಿದಂತೆ ಇಬ್ಬರು ಮೊಮ್ಮಕ್ಕಳು ಸಾವನ್ನಪ್ಪಿರುವಂತಹ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಹುಸೇನಪುರದಲ್ಲಿ ನಡೆದಿದೆ. ಮುನಿನಾರಾಯಣಪ್ಪ(60), ಪ್ರಜ್ವಲ್(8) ಮತ್ತು ಯಶ್ವಿನ್(9) ಮೃತರು. ಸದ್ಯ ಸ್ಥಳಕ್ಕೆ ಚಿಂತಾಮಣಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಶನಿವಾರ ಹಿನ್ನೆಲೆ ಆಂಜನೇಯ ದರ್ಶನಕ್ಕೆ ತಾತ ಸೇರಿದಂತೆ ಮೊಮ್ಮಕ್ಕಳು ಹೋಗಿದ್ದಾರೆ. ದೇವಸ್ಥಾನಕ್ಕೆ ಹೋಗುವ ಮೊದಲು ಕೈ, ಕಾಲು ತೊಳೆಯಲು ನೀರಿಗೆ ಇಳಿದಿದ್ದಾರೆ. ಈ ವೇಳೆ ಕಾಲು ಜಾರಿ ಒಬ್ಬರ ನಂತರ ಮತ್ತೊಬ್ಬರು ಬಿದಿದ್ದು ಮೂವರು ನೀರುಪಾಲಾಗಿದ್ದಾರೆ. ಚಿಂತಾಮಣಿ ತಾಲೂಕಿನ ಹುಸೇನಪುರ ಗ್ರಾಮದಲ್ಲಿ ಆಕ್ರಂದನ ಮಡುಗಟ್ಟಿದೆ.

ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತ; ಕಾರು ಪಲ್ಟಿ; ಇಬ್ಬರು ಸಾವು

ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಅಪಘಾತವೊಂದು ಸಂಭವಿಸಿದ್ದು, ಕಾರು ಪಲ್ಟಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವಂತಹ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕುಪ್ಪನಹಳ್ಳಿ ಬಳಿ ನಡೆದಿದೆ. ಬೆಂಗಳೂರಿನ ರಾಮಪುರದ ಮೇಘನಾ ಮತ್ತು ಕಾರು ಚಾಲಕ ಜಯಂತ್ ಮೃತರು.

ನಡೆದಿದ್ದೇನು?

ಕಾಳಹಸ್ತಿ ದೇವಾಲಯದಿಂದ ಕುಟುಂಬ ಬೆಂಗಳೂರಿಗೆ ವಾಪಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿದೆ. ಆ ಮೂಲಕ ಚೆನ್ನೈ-ಬೆಂಗಳೂರು ಎಕ್ಸ್‌ಪ್ರೆಸ್‌ವೇನಲ್ಲಿ ಸರಣಿ ಅಪಘಾತಗಳು ಮುಂದುವರೆದಿವೆ. ದುರಂತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ಕಾರಿನಲ್ಲಿದ್ದ ಷಣ್ಮುಗ, ಪೂಜಾ, ರಾಜೇಶ್‌, ಬಾಬು ಮತ್ತು ವಿಜಯಲಕ್ಷ್ಮೀಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಕುಡಿದ ಅಮಲಲ್ಲಿ ಹೊಡೆದಾಡಿಕೊಂಡ ಕಾರ್ಮಿಕರು, 8 ಆರೋಪಿಗಳ ಬಂಧನ: ಉತ್ತರಹಳ್ಳಿಯಲ್ಲಿ ಪುಂಡಾಟ ಮೆರೆದಿದ್ದ 11 ಆರೋಪಿಗಳ ಸೆರೆ

ಇನ್ನು ಘಟನಾ ಸ್ಥಳಕ್ಕೆ ಕೆಜಿಎಫ್ ಎಸ್‌ಪಿ ಶಿವಾಂಶು ರಜಪೂತ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸದ್ಯ ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಚಕ್ರಕ್ಕೆ ಸಿಲುಕಿ ಪತ್ನಿ ಸಾವು: ಪತಿ ಗಂಭೀರ ಗಾಯ

ಲಾರಿ ಚಕ್ರಕ್ಕೆ ಸಿಲುಕಿ ಪತ್ನಿ ಸಾವನ್ನಪ್ಪಿದ್ದು, ಪತಿ ಗಂಭೀರವಾಗಿ ಗಾಯಗೊಂಡಿರುವಂತಹ ಘಟನೆ ನೆಲಂಮಗಲ ತಾಲೂಕಿನ ಟಿ ಬೇಗೂರಿನಲ್ಲಿ ನಡೆದಿದೆ. ನಮಿತ (19) ಮೃತ ದುರ್ದೈವಿ. ಕಳೆದ ಒಂದು ವರ್ಷದ ಹಿಂದಷ್ಟೇ ನಮಿತ ಮತ್ತು ಲೋಕೇಶ್​ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರೂ ತುಮಕೂರಿನಲ್ಲಿ ವಾಸವಾಗಿದ್ದರು. ಆದರೆ ಕೆಲಸದ ನಿಮಿತ್ತ ಬೈಕ್​​ನಲ್ಲಿ ಬೆಂಗಳೂರಿಗೆ ಬರುತ್ತಿದ್ದ ದಂಪತಿ, ಈ ವೇಳೆ ಲಾರಿ ಡಿಕ್ಕಿ ಹೊಡೆದು ನೆಲಕ್ಕೆ ಬಿದಿದ್ದಾರೆ. ಲಾರಿಯ ಹಿಂಬದಿ ಚಕ್ರ ನಮಿತ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಲೋಕೇಶ್ ಕೈ ಮೂಳೆ ಮುರಿದಿದ್ದು, ಗಂಭೀರ ಗಾಯಗೊಂಡಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಭೀಮಪ್ಪ ಪಾಟೀಲ್​, ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Loading...
Unable to load recommendations.
Follow Us