ಚಿಕ್ಕಬಳ್ಳಾಪುರದಲ್ಲೊಂದು ಅಚ್ಚರಿಯ ಘಟನೆ: ಕಳುವಾಗಿದ್ದ ಮಹಿಳೆಯ ಬಂಗಾರದ ಸರ 2 ದಿನಗಳ ಬಳಿಕ ಮನೆ ಬಳಿಯೇ ಪ್ರತ್ಯಕ್ಷ!

ಚಿಕ್ಕಬಳ್ಳಾಪುರದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರ ಮಾಂಗಲ್ಯ ಸರ ಕಳುವಾದ 2 ದಿನಗಳ ಬಳಿಕ ಮತ್ತೆ ಅವರ ಮನೆ ಬಳಿಯೇ ಪ್ರತ್ಯಕ್ಷವಾಗಿದೆ. ಮೇ 3ರಂದು ಗೃಹಿಣಿಯ ಕುತ್ತಿಗೆಗೆ ಕೈ ಹಾಕಿ ಚಿನ್ನದ ಸರ ಕಿತ್ತುಕೊಂಡು ಕಳ್ಳರು ಪರಾರಿಯಾಗಿದ್ದರು. ಆದರೆ ಮೇ 5ರಂದು ಅದನ್ನು ಮತ್ತೆ ಮನೆ ಬಳಿ ಇಟ್ಟು ಹೋಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದ ನಡುವೆ ನಡೆದಿರುವ ಈ ವಿಚಿತ್ರ ವಿದ್ಯಮಾನ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

ಚಿಕ್ಕಬಳ್ಳಾಪುರದಲ್ಲೊಂದು ಅಚ್ಚರಿಯ ಘಟನೆ: ಕಳುವಾಗಿದ್ದ ಮಹಿಳೆಯ ಬಂಗಾರದ ಸರ 2 ದಿನಗಳ ಬಳಿಕ ಮನೆ ಬಳಿಯೇ ಪ್ರತ್ಯಕ್ಷ!
ಕಳವಾಗಿದ್ದ ಚಿನ್ನದ ಸರ
Image Credit source: Tv9 Kannada
Edited By:

Updated on: May 06, 2026 | 1:06 PM

ಚಿಕ್ಕಬಳ್ಳಾಪುರ, ಮೇ 06: ಇತ್ತೀಚೆಗೆ ಸರಗಳ್ಳರ ಹಾವಳಿ ಹೆಚ್ಚಾಗಿದ್ದು ಒಂಟಿ ಮಹಿಳೆಯನ್ನೇ ಟಾರ್ಗೆಟ್​ ಮಾಡಿ ಕಳ್ಳತನ ನಡೆಸುತ್ತಿರುವ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ. ಇಂತಹುದ್ದೇ ಘಟನೆ ಮೊನ್ನೆ ಮೇ 3ರಂದು ಚಿಕ್ಕಬಳ್ಳಾಪುರ ನಗರದ ವಾರ್ಡ ನಂಬರ್​​ 23ರ ಚಾಮರಾಜಪೇಟೆಯಲ್ಲಿಯೂ ನಡೆದಿತ್ತು. ಮನೆಯ ಮುಂದಿನ ನೀರಿನ ಸಂಪ್ ನೋಡುತ್ತಿದ್ದ ಗೃಹಿಣಿ ಪ್ರಿಯಾ ಎಂಬವರ ಮಾಂಗಲ್ಯ ಸರವನ್ನು ಕಿತ್ತುಕೊಂಡು ಖದೀಮರು ಎಸ್ಕೇಪ್​​ ಆಗಿದ್ದರು. ಆದರೆ ವಿಚಿತ್ರ ಎಂಬಂತೆ ಘಟನೆ ನಡೆದು ಎರಡು ದಿನಗಳ ಬಳಿಕ ಅದೇ ಚಿನ್ನದ ಸರ ಮನೆ ಮುಂದಿನ ಬಾಗಿಲಲ್ಲಿ ಪ್ರತ್ಯಕ್ಷವಾಗಿದೆ.

  • ಚಿಕ್ಕಬಳ್ಳಾಪುರದ ಚಾಮರಾಜಪೇಟೆಯಲ್ಲಿ ಅಚ್ಚರಿಯ ಘಟನೆ
  • ಕದ್ದ ಸರವನ್ನು ಪುನಃ ಮನೆ ಬಳಿಯೇ ಇಟ್ಟುಹೋಗಿರುವ ಕಳ್ಳರು
  • ಕಳ್ಳತನ ನಡೆದ 2 ದಿನಗಳ ಬಳಿಕ ಮನೆ ಬಳಿಯೇ ಸರ ಪ್ರತ್ಯಕ್ಷ!

ಇದನ್ನೂ ಓದಿ: 20ರ ಯುವತಿ-46ರ ಅಂಕಲ್ ಲವ್; ಪ್ರೇಯಸಿ ಬೇಕು ಹೆಂಡ್ತಿನೂ ಬೇಕೆಂದ ಟೇಲರ್

ನೀರು ಬಿಟ್ಟಿದ್ದಾರಾ ಎಂದು ನೋಡಲು ಬಂದಿದ್ದ ಗೃಹಿಣಿ ಪ್ರಿಯಾ, ಸಂಪ್​​ ತೆರೆದು ನೋಡಿ ಹಿಂದೆ ತಿರುಗುವಷ್ಟರಲ್ಲಿ ಬೈಕ್​​ನಲ್ಲಿ ಬಂದಿದ್ದ ಇಬ್ಬರು ಆರೋಪಿಗಳು ಅವರ ಮಾಂಗಲ್ಯ ಸರ ಕಿತ್ತುಕೊಂಡು ಎಸ್ಕೇಪ್​​ ಆಗಿದ್ದರು. ಖದೀಮರು ಪಲ್ಸರ್​​ 220 ಬೈಕ್​​ನಲ್ಲಿ ಬಂದಿದ್ದು, ಇಬ್ಬರ ಪೈಕಿ ಓರ್ವ ಮಾತ್ರ ಬೈಕ್​​ನಿಂದ ಇಳಿದಿದ್ದ. ಮತ್ತೋರ್ವ ಬೈಕ್​​ ಆನ್​​ನಲ್ಲಿಯೇ ಇಟ್ಟುಕೊಂಡು ನಿಂತಿದ್ದ. ಆರೋಪಿಗಳ ಬಳಿ ಚಾಕುವಿನಂತಹ ಮಾರಕ ಆಯುಧಗಳೂ ಇತ್ತು ಎನ್ನಲಾಗಿತ್ತು. ಕುತ್ತಿಗೆಯನ್ನು ಆರೋಪಿಗಳು ಲಾಕ್​​ ಮಾಡಿದ್ದ ಕಾರಣ ಆ ವೇಳೆ ಕಿರುಚಿಕೊಳ್ಳಲೂ ತನೆ ಸಾಧ್ಯವಾಗಲಿಲ್ಲ.  ಮಾಂಗಲ್ಯವನ್ನು ತಾನು ಗಟ್ಟಿಯಾಗಿ ಹಿಡಿದುಕೊಂಡಿದ್ದ ಕಾರಣ ಆರೋಪಿಗಳು ಚೈನ್​​ ಮಾತ್ರ ಕದ್ದಿರೋದಾಗಿ ಪ್ರಿಯಾ ತಿಳಿಸಿದ್ದರು.

ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು, ತಂಡ ರಚಿಸಿಕೊಂಡು ತನಿಖೆ ಕೂಡ ಕೈಗೊಂಡಿದ್ದರು. ಬೈಕ್​​ನಲ್ಲಿ ಬಂದವರಿಂದ ಕೃತ್ಯ ಎಂದು ಗೃಹಿಣಿ ತಿಳಿಸಿದ್ದ ಕಾರಣ ಚಿಕ್ಕಬಳ್ಳಾಪುರದಿಂದ ದೇವನಹಳ್ಳಿವರೆಗೂ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಸಿದ್ದರು. ಈ ನಡುವೆ ಮಂಗಳವಾರ ಅಂದರೆ ಮೇ 5ರ ಬೆಳಿಗ್ಗೆ ಗೃಹಿಣಿ ಪ್ರಿಯಾರ ಪತಿ ವಾಶ್​​ ರೂಂಗೆಂದು ತೆರಳಿದ್ದ ವೇಳೆ ಬಾತ್​​ ರೂಂನ ಮೆಟ್ಟಿಲಿನ ಸಮೀಪ ಚೈನ್​​ ಬಿದ್ದಿರೋದು ಕಂಡಿದೆ. ಕೂಡಲೇ ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ಸಂಬಂಧ ಪೊಲೀಸರೂ ಮನೆಗೆ ಬಂದು ಪರಿಶೀಲಿಸಿ ಹೋಗಿದ್ದು, ಘಟನೆ ಭಾರಿ ಆಶ್ಚರ್ಯಕ್ಕೆ ಕಾರಣವಾಗಿದೆ. ಮಾಂಗಲ್ಯ ಸರ ಕದ್ದವರು ಯಾರು? ಈಗ ಅವರೇ ಅದನ್ನು ಮನೆಬಳಿ ಇಟ್ಟು ಹೋಗಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:03 pm, Wed, 6 May 26

Follow Us