ಚಿಕ್ಕಬಳ್ಳಾಪುರಕ್ಕೆ ವರದಾನವಾದ KEA; 8 ಕೋಟಿ ರೂ. ವೆಚ್ಚದಲ್ಲಿ ರೇಡಿಯಾಲಜಿ ವಿಭಾಗ ನಿರ್ಮಾಣಕ್ಕೆ ಶಂಕುಸ್ಥಾಪನೆ
ಇಂಜಿನಿಯರಿಂಗ್, ವೈದ್ಯಕೀಯ ಸೀಟು ಹಂಚಿಕೆ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‍ಗಳಿಗೆ ಸೀಟು ಹಂಚಿಕೆ ಮಾಡುವುದರಲ್ಲಿ ಖ್ಯಾತಿಯಾಗಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA), ಚಿಕ್ಕಬಳ್ಳಾಪುರಕ್ಕೆ ವರದಾನವಾಗಿದೆ. ಪ್ರಾಧಿಕಾರದ 8 ಕೋಟಿ 20 ಲಕ್ಷ ರೂಪಾಯಿ ಅನುದಾನವನ್ನು ಬಳಸಿಕೊಂಡು ರೇಡಿಯಾಲಜಿ ವಿಭಾಗ ನಿರ್ಮಾಣ ಮಾಡಲಾಗುತ್ತಿದೆ. ಈ ಕುರಿತು ಒಂದು ವರದಿ ಇಲ್ಲಿದೆ.
ದಾವಣೆಗೆರೆ, ಅ.02: ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA), ಇಂಜಿನಿಯರಿಂಗ್, ವೈದ್ಯಕೀಯ ಸೀಟು ಹಂಚಿಕೆ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‍ಗಳಿಗೆ ಸೀಟು ಹಂಚಿಕೆ ಮಾಡುವುದರಲ್ಲಿ ಖ್ಯಾತಿಯಾಗಿದೆ. ಇದೀಗ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಲಾಭಾಂಶದ ಅನುದಾನದಲ್ಲಿ 8 ಕೋಟಿ 20 ಲಕ್ಷ ರೂಪಾಯಿ ಹಣವನ್ನು ಬಳಸಿಕೊಂಡು ಚಿಕ್ಕಬಳ್ಳಾಪುರದಲ್ಲಿ ರೇಡಿಯಾಲಜಿ(Radiology) ವಿಭಾಗ ನಿರ್ಮಾಣ ಮಾಡಲಾಗುತ್ತಿದೆ.
ಉನ್ನತ ಶಿಕ್ಷಣ ಇಲಾಖೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ.ಸುಧಾಕರ್ ಇಂದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಆವರಣದಲ್ಲಿ ರೇಡಿಯಾಲಜಿ ವಿಭಾಗಕ್ಕೆ ಶಂಕುಸ್ಥಾಪನೆ ನೆರೆವೇರಿಸಿ ಮಾತನಾಡಿದ ಅವರು, ‘ ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವಾಗಿ 16 ವರ್ಷಗಳೇ ಕಳೆದರೂ ಜಿಲ್ಲೆಯಾದ್ಯಂತ ಎಂಆರ್ಐ ಸ್ಕ್ಯಾನಿಂಗ್ ಇಲ್ಲ. ಇದರಿಂದ ರೋಗಿಗಳು ಕೋಲಾರ ಇಲ್ಲವೇ ಬೆಂಗಳೂರಿಗೆ ಹೋಗಬರಬೇಕಾದ ದುಸ್ಥಿತಿಯಿದೆ.
ಇದನ್ನೂ ಓದಿ:ಚಿಕ್ಕಬಳ್ಳಾಪುರ: ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ಫೋಟೋ ಹಾಕಿಲ್ಲ ಎಂದು ಗಲಾಟೆ
ಇನ್ನು ಕಳೆದ ಬಿಜೆಪಿ ಸರ್ಕಾರದಲ್ಲಿ ಆರೋಗ್ಯ ಖಾತೆ, ವೈದ್ಯಕೀಯ ಶಿಕ್ಷಣ ಖಾತೆ ಪ್ರಭಾವಿ ಸಚಿವರಾಗಿದ್ದ ಕೆ.ಸುಧಾಕರ್, ಎಂಆರ್ಐ ಸ್ಕ್ಯಾನಿಂಗ್ ವ್ಯವಸ್ಥೆ ಮಾಡಿಸಿರಲಿಲ್ಲ. ಆದರೆ, ಈಗ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಹಣವಿಲ್ಲದಿದ್ದರೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಹಣ ಬಳಸಿಕೊಂಡು ಚಿಕ್ಕಬಳ್ಳಾಪುರದ ಸರ್ಕಾರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ರೇಡಿಯಾಲಜಿ ವಿಭಾಗ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳ ಅನುಷ್ಟಾನದಲ್ಲಿ ವಿವಿಧ ಇಲಾಖೆಗಳಿಗೆ ನಿರೀಕ್ಷೆಯಂತೆ ಹಣ ಒದಗಿಸುತ್ತಿಲ್ಲವಂತೆ. ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಅನುದಾನದ ಕೊರತೆ ಮನಗಂಡು ಡಾ. ಎಂ.ಸಿ.ಸುಧಾಕರ್ ತಮ್ಮ ಇಲಾಖೆಯ ಅನುದಾನವನ್ನೇ ಬಳಸಿಕೊಂಡು ರೋಗಿಗಳ ಅನುಕೂಲಕ್ಕೆ ನೆರವಾಗಲು ಯತ್ನಿಸಿರುವುದು ಸಂತೋಷಕರ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:24 pm, Wed, 2 October 24