ಪ್ರಾಂಶುಪಾಲರ ನಕಲು ಸಹಿ ಮಾಡಿ 68 ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ಗುಳಂ ಮಾಡಿದ ಗುಮಾಸ್ತ, ತಲೆ ಮರೆಸಿಕೊಂಡಿರುವ ಆರೋಪಿ
ಎಷ್ಟು ಕರೆದ್ರೂ ಕರ್ತವ್ಯಕ್ಕೆ ಬಂದಿಲ್ಲ ಇದ್ರಿಂದ ಅನುಮಾನಗೊಂಡು ಆತ ನಿರ್ವಹಿಸಿದ ಕಡತಗಳ ಪರಿಶೀಲನೆ ನಡೆಸಿದಾಗ 68 ಲಕ್ಷ 65 ಸಾವಿರ ರೂಪಾಯಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ: ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕೆ ಅಂತ ರಾಜ್ಯ ಸರ್ಕಾರ ಅದೊಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ವಿತರಿಸಲು 68 ಲಕ್ಷ 65 ಸಾವಿರ ರೂಪಾಯಿ ಹಣ ಮಂಜೂರು ಮಾಡಿದೆ. ಆದ್ರೆ ಆ ಕಾಲೇಜಿನ ಗುಮಾಸ್ತನೊರ್ವ ವಿದ್ಯಾರ್ಥಿಗಳು ಹಾಗೂ ಸರ್ಕಾರಕ್ಕೆ ಸೇರಿದ ಹಣವನ್ನು ತನ್ನ ಸ್ವಂತ ಬಳಕೆ ಮಾಡಿಕೊಂಡು ಸರ್ಕಾರ ಹಾಗೂ ವಿದ್ಯಾರ್ಥಿಗಳಿಗೆ ಪಂಗನಾಮ ಹಾಕಿದ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೊತ್ತರ ಕೇಂದ್ರದಲ್ಲಿ ವಿದ್ಯಾಭ್ಯಾಸ ಮಾಡ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕೆ ರಾಜ್ಯ ಸರ್ಕಾರ ವಿವಿಧ ಇಲಾಖೆಗಳ ಮೂಲಕ ಬರೋಬ್ಬರಿ 68 ಲಕ್ಷ 65 ಸಾವಿರ ರೂಪಾಯಿ ಹಣ ಮಂಜೂರು ಮಾಡಿತ್ತು. ಕಾಲೇಜಿನ ದ್ವೀತಿಯ ದರ್ಜೆ ಗುಮಾಸ್ತ್ ಎನ್. ಸಂತೋಷ್ ಕುಮಾರ್, ವಿದ್ಯಾರ್ಥಿ ವೇತನ ಕಡತಗಳ ನಿರ್ವಹಣೆ ಮಾಡ್ತಿದ್ದ, ಆದ್ರೆ ವಿದ್ಯಾರ್ಥಿಗಳು ಹಾಗೂ ಸರ್ಕಾರಕ್ಕೆ ನೀಡಬೇಕಿದ್ದ 68 ಲಕ್ಷ 65 ಸಾವಿರ ರೂಪಾಯಿ ಹಣವನ್ನು ತನ್ನ ಸ್ವಂತ ಖಾತೆಗೆ ವರ್ಗಾಯಿಸಿಕೊಂಡು ಪಂಗನಾಮ ಹಾಕಿದ್ದಾನೆ. ತಡವಾಗಿ ಎಚ್ಚೇತ್ತಿರುವ ಕಾಲೇಜಿನ ಪ್ರಾಂಶುಪಾಲರು ಚಿಂತಾಮಣಿ ನಗರ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಅಸಲಿಗೆ ಚಿಂತಾಮಣಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವೀತಿಯ ದರ್ಜೆ ಗುಮಾಸ್ತ್ ನಾಗಿ ಸಂತೋಷಕುಮಾರ್ 01/06/2012 ರಿಂದ ಕಳೆದ ಎಪ್ರೀಲ್ 21ರ ವರೆಗೂ ಕರ್ತವ್ಯ ನಿರ್ವಹಿಸಿದ್ದಾನೆ. ಆದ್ರೆ ಎಪ್ರೀಲ್ ನಿಂದ ಅನಧಿಕೃತ ಗೈರಾಗಿದ್ದಾನೆ. ಎಷ್ಟು ಕರೆದ್ರೂ ಕರ್ತವ್ಯಕ್ಕೆ ಬಂದಿಲ್ಲ ಇದ್ರಿಂದ ಅನುಮಾನಗೊಂಡು ಆತ ನಿರ್ವಹಿಸಿದ ಕಡತಗಳ ಪರಿಶೀಲನೆ ನಡೆಸಿದಾಗ 68 ಲಕ್ಷ 65 ಸಾವಿರ ರೂಪಾಯಿ ಹಣವನ್ನು ದುರುಪಯೋಗ ಮಾಡಿಕೊಂಡಿದ್ದು ಬೆಳಕಿಗೆ ಬಂದಿದೆ. ಸ್ವತಃ ಕಾಲೇಜಿನ ಪ್ರಾಂಶುಪಾಲೆ ಶಾರದರವರ ನಕಲಿ ಸಹಿಗಳನ್ನು ಮಾಡಿ ಬೆಂಗಳೂರು ಧಣಿಸಂದ್ರ ಕೆನರಾ ಬ್ಯಾಂಕ್ ಶಾಖೆಯಲ್ಲಿ ಸಂತೋಷಕುಮಾರ್ ತನ್ನ ವೈಯುಕ್ತಿಕ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿದ್ದು ಪತ್ತೆಯಾಗಿದೆ. ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಹಾಗೂ ಸರ್ಕಾರಕ್ಕೆ ಮರುಪಾವತಿ ಮಾಡಬೇಕಾದ ಹಣವನ್ನು ದುರುಪಯೋಗ ಮಾಡಿಕೊಂಡ ನೌಕರನ ಮೇಲೆ ಕ್ರಮ ಕೈಗೊಳ್ಳುವಂತೆ ಸ್ಥಳಿಯರು ಒತ್ತಾಯ ಮಾಡಿದ್ದಾರೆ. ಸದ್ಯ ಚಿಂತಾಮಣಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿರುವ ವಿದ್ಯಾರ್ಥಿವೇತನ ಗೋಲ್ ಮಾಲ್ ಗೆ ಸಂಬಂಧಿಸಿದಂತೆ ಚಿಂತಾಮಣಿ ನಗರ ಠಾಣೆ ಪೊಲೀಸರು ಐ.ಪಿ.ಸಿ ಸೇಕ್ಷನ್ 406,409,417,420,465,468,471 ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಆರೋಪಿ ತಲೆ ಮರೆಸಿಕೊಂಡಿದ್ದಾನೆ.
ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ
ಇದನ್ನೂ ಓದಿ: Viral Video; ಬ್ಯಾಡ್ಮಿಂಟನ್ ಆಡುವ ರೊಬೋಟ್; ಆಟಗಾರರನ್ನೇ ಮೀರಿಸುವ ಜಾಣ್ಮೆ ಈ ರೊಬೋಟ್ನದ್ದು
Published On - 1:02 pm, Sun, 30 January 22