ಭಾರೀ ಮಳೆಯಿಂದ ಗುಡ್ಡ ಕುಸಿತವಾಗಿ ಕೊಚ್ಚಿ ಹೋಗಿದ್ದ ನಂದಿ ಬೆಟ್ಟದ ರಸ್ತೆ ಸಂಚಾರಕ್ಕೆ ಸಿದ್ಧ

| Updated By: ಸುಷ್ಮಾ ಚಕ್ರೆ

Updated on: Nov 11, 2021 | 6:27 PM

ಆಗಸ್ಟ್ 24ರ ರಾತ್ರಿ ನಂದಿ ಬೆಟ್ಟದ ಪಕ್ಕದ ಬ್ರಹ್ಮಗಿರಿ ಬೆಟ್ಟದಲ್ಲಿ ಗುಡ್ಡ ಕುಸಿತವಾಗಿ, ನಂದಿಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿತ್ತು. ಅಂದಿನಿಂದ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ಬಂದ್ ಆಗಿತ್ತು.

ಭಾರೀ ಮಳೆಯಿಂದ ಗುಡ್ಡ ಕುಸಿತವಾಗಿ ಕೊಚ್ಚಿ ಹೋಗಿದ್ದ ನಂದಿ ಬೆಟ್ಟದ ರಸ್ತೆ ಸಂಚಾರಕ್ಕೆ ಸಿದ್ಧ
ನಂದಿ ಬೆಟ್ಟ
Follow us on

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮ ಬೆಂಗಳೂರಿಗರ ಪಾಲಿಗೆ ವಿಕೇಂಡ್ ಹಾಟ್​ಸ್ಪಾಟ್​. ಆದರೆ, ನಂದಿ ಬೆಟ್ಟದ ರಸ್ತೆ ಮಾರ್ಗ ಬಂದ್ ಆಗಿ ಪ್ರವಾಸಿಗರ ಪಾಲಿಗೆ ನಂದಿ ಬೆಟ್ಟ ದೂರವಾಗಿತ್ತು. ಆದರೆ, ಈಗ ಕೊಚ್ಚಿ ಹೋಗಿದ್ದ ರಸ್ತೆ ಮರು ನಿರ್ಮಾಣ ಕಾರ್ಯ ಮುಕ್ತಾಯವಾಗಿದ್ದು, ಇನ್ನೇನು ಇನ್ನೊಂದು ವಾರದಲ್ಲಿ ಪ್ರವಾಸಿಗರ ಪ್ರವೇಶಕ್ಕೆ ಅವಕಾಶ ಸಿಗಲಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಆಗಸ್ಟ್ 24ರ ರಾತ್ರಿ ನಂದಿ ಬೆಟ್ಟದ ಪಕ್ಕದ ಬ್ರಹ್ಮಗಿರಿ ಬೆಟ್ಟದಲ್ಲಿ ಗುಡ್ಡ ಕುಸಿತವಾಗಿ, ನಂದಿಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೊಚ್ಚಿ ಹೋಗಿತ್ತು. ಅಂದಿನಿಂದ ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶ ಬಂದ್ ಆಗಿತ್ತು. ಇದರಿಂದ ರಾಜ್ಯ ಸರ್ಕಾರ 80 ಲಕ್ಷ ರೂ. ವೆಚ್ಚ ಮಾಡಿ, ಕೊಚ್ಚಿ ಹೋದ ರಸ್ತೆಯ ಮರು ನಿರ್ಮಾಣ ಕಾರ್ಯ ಮಾಡಿದೆ. ಇನ್ನೇನು ಬಹುತೇಕ ರಸ್ತೆ ಕಾಮಗಾರಿ ಮುಗಿದಿದ್ದು, ತಡೆಗೋಡೆಗಳ ನಿರ್ಮಾಣ ಕಾರ್ಯ ಮಾತ್ರ ಬಾಕಿ ಇದೆ. ಎಲ್ಲಾ ಅಂದುಕೊಂಡಂತೆ ಆದರೆ, ಇನ್ನೊಂದು ವಾರದಲ್ಲಿ ರಸ್ತೆ ಉದ್ಘಾಟನೆ ಆಗಲಿದೆ.

80 ಲಕ್ಷ ರೂ. ವೆಚ್ಚದಲ್ಲಿ, 40 ಮೀಟರ್ ಉದ್ದದ ರಸ್ತೆಗೆ, ಭದ್ರವಾದ ಸಿಮೆಂಟ್ ಕಾಂಕ್ರೀಟ್ ಸೇತುವೆ ನಿರ್ಮಾಣ ಮಾಡಲಾಗಿದ್ದು, ಬೆಟ್ಟದಿಂದ ಬರುವ ನೀರು ಸರಾಗವಾಗಿ ಹರಿದು ಹೋಗಲು ಬೃಹತ್ ಗಾತ್ರದ ಪೈಪ್​ಗಳನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಎಷ್ಟೇ ಮಳೆಯಾದರೂ ರಸ್ತೆಗೆ ತೊಂದರೆಯಾಗದ ಹಾಗೆ ಸೇತುವೆ ಮೇಲೆ ಸಿಮೆಂಟ್ ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಲಾಗಿದೆ.

ಇದೀಗ ಬಹುತೇಕ ರಸ್ತೆ ಕಾಮಗಾರಿ ಮುಕ್ತಾಯವಾಗಿದ್ದು, ಅಧಿಕೃತವಾಗಿ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದರೆ, ಶೀಘ್ರದಲ್ಲಿ ನಂದಿ ಗಿರಿಧಾಮ ಪ್ರವಾಸಿಗರ ಪ್ರವೇಶಕ್ಕೆ ಮುಕ್ತವಾಗಲಿದೆ.

ವರದಿ: ಭೀಮಪ್ಪ ಪಾಟೀಲ

ಇದನ್ನೂ ಓದಿ: ಮೈಸೂರಿನಲ್ಲಿ ಭಾರಿ ಮಳೆ, ಚಾಮುಂಡಿ ಬೆಟ್ಟದಿಂದ ನಂದಿಗೆ ಹೋಗುವ ಮಾರ್ಗದಲ್ಲಿ ಭೂಮಿ ಕುಸಿತ

Temple Tour: ನಂದಿ ಗಿರಿಧಾಮದ ಬಳಿ ಇದೆ ಐತಿಹಾಸಿಕ ಬಸವಣ್ಣ