Chikkaballapur News: ಜು.3 ರಂದು ಚಿಕ್ಕಬಳ್ಳಾಪುರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ
ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಬಳಿಯ ಸತ್ಯಸಾಯಿ ಗ್ರಾಮದಲ್ಲಿನ ಖಾಸಗಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗಿಯಾಗಲು ನಾಳೆ (ಜು.03) ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.
ಚಿಕ್ಕಬಳ್ಳಾಫುರ: ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಮುದ್ದೇನಹಳ್ಳಿ ಬಳಿಯ ಸತ್ಯಸಾಯಿ ಯೂನಿವರ್ಸಿಟಿ ಫಾರ್ ಹ್ಯೂಮನ್ ಎಕ್ಸಲೆನ್ಸ್ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ (University Convocation Program) ಭಾಗಿಯಾಗಲು ನಾಳೆ (ಜು.03) ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಸೋಮವಾರ ದೆಹಲಿಯಿಂದ (Delhi) ಐಎಎಫ್ಎಂಐ-17 ವಿಶೇಷ ವಿಮಾನದ ಮೂಲಕ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಮಿಸಲಿದ್ದಾರೆ. ಇಲ್ಲಿಂದ ಮಧ್ಯಾಹ್ನ 3.55ಕ್ಕೆ ಹೆಲಿಕಾಪ್ಟರ್ ಮೂಲಕ ಮುದ್ದೇನಹಳ್ಳಿಗೆ ತೆರಳುತ್ತಾರೆ.
ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗಣ್ಯರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದಲ್ಲಿ ಪ್ರೊ. ಅಜಯ್ ಕೆ ಸೂದ್, ಸಂಗೀತ ಮತ್ತು ಕಲೆ ವಿಭಾಗದಲ್ಲಿ ಡಾ. ಆರ್ ಕೆ ಪದ್ಮನಾಭ, ಕ್ರೀಡೆ ಮತ್ತು ದೇಹದಾರ್ಡ್ಯತೆ ವಿಭಾಗದಲ್ಲಿ ಶ್ರೀಪುಲ್ಲೆಲ ಗೋಪಿಚಂದ್, ಆರೋಗ್ಯ ವಿಭಾಗದಲ್ಲಿ ಡಾ.ಪ್ರತಿಮಾ ಮೂರ್ತಿ, ಶಿಕ್ಷಣ ವಿಭಾಗದಲ್ಲಿ ಪ್ರೊ. ವಿಜಯ್ ಶಂಕರ್ ಶುಕ್ಲಾ, ಸಮಾಜ ಸೇವೆ ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ತುಳಸಿ ಗೌಡರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಿದ್ದಾರೆ.
ಇದನ್ನೂ ಓದಿ: ನಿರ್ಬಂಧದ ನಡುವೆಯೋ ನಂದಿಬೆಟ್ಟ, ಸ್ಕಂದಗಿರಿಗೆ ಹರಿದು ಬಂದ ಜನ ಸಾಗರ
ಮುದ್ದೇನಹಳ್ಳಿ ಗ್ರಾಮಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನಪ್ರಿಯ ಪ್ರವಾಸಿ ಸ್ಥಳಗಳಾದ ನಂದಿಗಿರಿಧಾಮ ಮತ್ತು ಸ್ಕಂದಗಿರಿ ಬೆಟ್ಟಗಳಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ. ಜುಲೈ 2 ರಂದು ಬೆಳಿಗ್ಗೆ 6 ರಿಂದ ಜುಲೈ 3 ರ ಸಂಜೆ 6 ರವರೆಗೆ ನಿರ್ಬಂಧವು ಜಾರಿಯಲ್ಲಿರುತ್ತದೆ.
ಭದ್ರತೆಯ ಕಾರಣಕ್ಕೆ ನಂದಿಗಿರಿಧಾಮ ಮತ್ತು ಸ್ಕಂದಗಿರಿ ಬೆಟ್ಟಗಳಿಗೆ ಸಾರ್ವಜನಿಕರ ಪ್ರವೇಶವನ್ನು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ಕಲಂ 144(3)ರ ಅಡಿಯಲ್ಲಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ರವೀಂದ್ರ ಪಿಎನ್ ಆದೇಶ ಹೊರಡಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:56 pm, Sun, 2 July 23