ಅರಬ್ ರಾಷ್ಟ್ರಗಳಲ್ಲಿ ಬೆಳೆಯುವ ಖರ್ಜೂರವನ್ನು ಗುಡಿಬಂಡೆಯಲ್ಲಿ ಬೆಳೆದು, ಭರಪೂರ ಲಾಭ ಎಣಿಸುತ್ತಿರುವ ರೈತ ಇಲ್ಲಿದ್ದಾರೆ ನೋಡಿ

| Updated By: ಸಾಧು ಶ್ರೀನಾಥ್​

Updated on: Jul 07, 2022 | 8:05 PM

ಉಷ್ಣವಲಯದಲ್ಲಿ ಹೇರಳವಾಗಿ ಬೆಳೆಯಾಗುವ ಖರ್ಜೂರವನ್ನು... ಚಿಕ್ಕಬಳ್ಳಾಪುರ ಜಿಲ್ಲೆಯ ರೈತರೂ ಬೆಳೆಯಲು ಆರಂಭಿಸಿದ್ದಾರೆ. ಇದ್ರಿಂದ ರೈತರಿಗೆ ಕೈತುಂಬ ಕಾಸು ಆಗುತ್ತಿದ್ದು, ಗ್ರಾಹಕರಿಗೆ ಸ್ಥಳೀಯವಾಗಿ ಸಿಗುವ ಖರ್ಜೂರ ಹಣ್ಣಿನ ಸವಿರುಚಿ ಸವಿಯುವ ಭಾಗ್ಯವೂ ದೊರೆತಿದೆ.

ಅರಬ್ ರಾಷ್ಟ್ರಗಳಲ್ಲಿ ಬೆಳೆಯುವ ಖರ್ಜೂರವನ್ನು ಗುಡಿಬಂಡೆಯಲ್ಲಿ ಬೆಳೆದು, ಭರಪೂರ ಲಾಭ  ಎಣಿಸುತ್ತಿರುವ ರೈತ ಇಲ್ಲಿದ್ದಾರೆ ನೋಡಿ
ಅರಬ್ ರಾಷ್ಟ್ರಗಳಲ್ಲಿ ಬೆಳೆಯುವ ಖರ್ಜೂರಗಳನ್ನು ಗುಡಿಬಂಡೆಯಲ್ಲಿ ಬೆಳೆದು, ಭರಪೂರ ಲಾಭ ಎಣಿಸುತ್ತಿರುವ ರೈತ ಇಲ್ಲಿದ್ದಾನೆ ನೋಡಿ
Follow us on

ಆ ಜಿಲ್ಲೆಯ ರೈತರು ಹೂ ಹಣ್ಣು ತರಕಾರಿ ಬೆಳೆಗೆ ಖ್ಯಾತಿ. ಆದ್ರೆ ಇತ್ತೀಚಿಗೆ ಸಂಪ್ರದಾಯ ಬದ್ದ ಬೆಳೆಗಳಿಂದ ಆದ ನಷ್ಟದ ಮೇಲೆ ನಷ್ಟವನ್ನು ತಡೆದುಕೊಳ್ಳಲಾಗದ ರೈತರೊಬ್ಬರು ಎಲ್ಲರೂ ಬೆಳೆಯುವ ಬೆಳೆಯನ್ನು ಹೊರತುಪಡಿಸಿ, ಉಷ್ಣ ವಲಯದಲ್ಲಿ ಮಾತ್ರ ಬೆಳೆ ಆಗುವ ಖರ್ಜೂರ ಬೆಳೆಯನ್ನು (dry fruit dates) ಬೆಳೆದು ಭರಪೂರ ಆದಾಯ ಗಳಿಸುತ್ತಿದ್ದಾರೆ. ಇದನ್ನರಿತ ಖರ್ಜೂರ ಪ್ರಿಯ ಗ್ರಾಹಕರು, ತೋಟಕ್ಕೆ ಆಗಮಿಸಿ ತೋಟದಲ್ಲಿ ಹಸಿ ಹಸಿ ಖರ್ಜೂರ ಹಣ್ಣುಗಳನ್ನು ಕೊಂಡುಕೊಳ್ತಿದ್ದಾರೆ. ಈ ವರದಿ ನೋಡಿ!!

ಗೊಂಚಲು ಗೊಂಚಲು ಹಳದಿ ಕಲರ್ ಖರ್ಜೂರ ಒಂದೆಡೆಯಾದ್ರೆ… ಮತ್ತೊಂದೆಡೆ ಬೂದು ಬಣ್ಣದ, ಪಿಂಕ್ ಕಲರ್ ಗಳ ತರೇವಾರಿ ಖರ್ಜೂರದ ಗೊನೆಗಳು. ಇದೆಲ್ಲಾ ಕಂಡುಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ (Gudibande ) ತಾಲೂಕಿನ ಹಂಪಸಂದ್ರ ಗ್ರಾಮದ ಪ್ರಗತಿಪರ ರೈತ ಲಕ್ಷ್ಮಿನಾರಾಯಣರ (Farmer Lakshminarayan) ಖರ್ಜೂರ ತೋಟದಲ್ಲಿ. ಹೌದು!! ರೈತ ಲಕ್ಷ್ಮಿನಾರಾಯಣ ಗೆ 10 ಎಕರೆ ಜಮೀನು ಇದ್ದು, ಅದರಲ್ಲಿ ಟೊಮ್ಯಾಟೊ, ಬದನೆ ಸೇರಿದಂತೆ ವಿವಿಧ ತರಕಾರಿ ಬೆಳೆ ಬೆಳೆಯುತ್ತಿದ್ದರು. ಜೊತೆಗೆ ಮಾವು, ಸಪೋಟ ಹಣ್ಣಿನ ಬೆಳೆ ಬೆಳೆಯುತ್ತಿದ್ರು. ಆದ್ರೆ ಹವಾಮಾನ, ಮಾರುಕಟ್ಟೆಯ ಏರುಪೇರು, ಕೂಲಿಯಾಳುಗಳ ಕೊರತೆಯಿಂದ ನಿರೀಕ್ಷೆಯಂತೆ ಲಾಭ ಬಾರದೆ ನಷ್ಟದ ಮೇಲೆ ನಷ್ಟವಾಗಿತ್ತು. ಇದ್ರಿಂದ ಬೇಸತ್ತ ರೈತ… ಸ್ನೇಹಿತರ ಮೂಲಕ ಮಾಹಿತಿ ಪಡೆದು, ಉಷ್ಣವಲಯದಲ್ಲಿ ಬೆಳೆಯುವ ವಿನೂತ ತಳಿಯಾದ ಖರ್ಜೂರವನ್ನು ಬೆಳೆದು ಈಗ ಆದಾಯದ ಮೇಲೆ ಆದಾಯ ಗಳಿಸುತ್ತಿದ್ದಾರೆ ಲಕ್ಷ್ಮಿನಾರಾಯಣ.

ಇದನ್ನು ನೋಡಿ (ಫೋಟೋ ಗ್ಯಾಲರಿ):

Date Palm: ದೂರದ ಮರಳುಗಾಡಿನಲ್ಲಿ ಅಲ್ಲ; ಇಲ್ಲೇ ಚಿಕ್ಕಬಳ್ಳಾಪುರದಲ್ಲಿ ಖರ್ಜೂರ ಬೆಳೆಯುತ್ತಾರೆ ನೋಡಿ

ಇನ್ನು ರೈತ ಲಕ್ಷ್ಮಿನಾರಾಯಣ ಸದ್ಯಕ್ಕೆ ನಾಲ್ಕು ಎಕರೆ ಪ್ರದೇಶದಲ್ಲಿ ಬರಿ ಅನ್ನೊ ಖರ್ಜೂರ ತಳಿಯನ್ನು (Date palm) ಬೆಳೆದಿದ್ದು, ಮೂರು ವರ್ಷದ ಬೆಳೆ ಆಗಿದೆ. ನಾಲ್ಕು ಎಕರೆಯಲ್ಲಿ 260 ಖರ್ಜೂರ ಗಿಡಗಳಿದ್ದು, ಅದರಲ್ಲಿ ಕೆಲವು ಗಿಡಗಳು ಸದ್ಯಕ್ಕೆ ಖರ್ಜೂರ ಹಣ್ಣು ಬಿಟ್ಟಿವೆ. ರೈತ ತಾನು ಬೆಳೆದ ಖರ್ಜೂರವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಟೊ ತೆಗೆದು ಹರಿಬಿಟ್ಟಿದ್ದು, ಫೊಟೊ ನೋಡಿ ಮಾರು ಹೋಗಿರುವ ಸ್ಥಳಿಯ ಗ್ರಾಹಕರು, ತೋಟಕ್ಕೆ ಆಗಮಿಸಿ… ತೋಟದಲ್ಲಿ 1 ಕೆ.ಜಿ ಖರ್ಜೂರಕ್ಕೆ 200 ರೂಪಾಯಿ ನೀಡಿ ಖರೀದಿ ಮಾಡ್ತಿದ್ದಾರೆ. ಇದ್ರಿಂದ ರೈತನ ಮೊಗದಲ್ಲಿ ಸಂತಸದ ಹೊನಲು ಮೂಡಿದೆ.

ಕೆಲವು ಸ್ಥಳೀಯ ಹಣ್ಣುಗಳ ಮಾರಾಟಗಾರರು, ಸಂಪ್ರದಾಯ ಬದ್ದ ಹಣ್ಣುಗಳ ಜೊತೆಗೆ ಹಸಿ ಖರ್ಜೂರ ಹಣ್ಣನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಆರಂಭಿಸಿದ್ದಾರೆ. ಚಿಕ್ಕಬಳ್ಳಾಪುರ ನಗರದ ಬಜಾರ್ ರಸ್ತೆಯಲ್ಲಿ ಹಣ್ಣುಗಳ ವರ್ತಕ ಗಂಗಾಧರ್ ಸಹ 1 ಕೆ.ಜಿ ಖರ್ಜೂರವನ್ನು 200 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಪ್ರತಿದಿನ 25 ಕೆಜಿ ಯಷ್ಟು ಖರ್ಜೂರ ಹಣ್ಣುಗಳನ್ನು ಸ್ಥಳೀಯವಾಗಿ ಮಾರಾಟ ಮಾಡ್ತಿದ್ದಾನೆ.

ಒಟ್ನಲ್ಲಿ ಉಷ್ಣವಲಯದಲ್ಲಿ ಹೇರಳವಾಗಿ ಬೆಳೆಯಾಗುವ ಖರ್ಜೂರವನ್ನು… ಚಿಕ್ಕಬಳ್ಳಾಪುರ ಜಿಲ್ಲೆಯ ರೈತರೂ ಬೆಳೆಯಲು ಆರಂಭಿಸಿದ್ದಾರೆ. ಇದ್ರಿಂದ ರೈತರಿಗೆ ಕೈತುಂಬ ಕಾಸು ಆಗುತ್ತಿದ್ದು, ಗ್ರಾಹಕರಿಗೆ ಸ್ಥಳೀಯವಾಗಿ ಸಿಗುವ ಖರ್ಜೂರ ಹಣ್ಣಿನ ಸವಿರುಚಿ ಸವಿಯುವ ಭಾಗ್ಯವೂ ದೊರೆತಿದೆ. ಕಡಿಮೆ ಖರ್ಚು ಅಧಿಕ ಲಾಭ ತರುವ ಖರ್ಜೂರವನ್ನು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಬೆಳೆಯುವಂತಾಗಲಿ ಎನ್ನುತ್ತಾರೆ ಇಲ್ಲಿನ ಖರ್ಜೂರ ತಿಂದುಂಡವರು!

-ಭೀಮಪ್ಪ ಪಾಟೀಲ, ಟಿವಿ9, ಚಿಕ್ಕಬಳ್ಳಾಪುರ

Published On - 7:00 pm, Thu, 7 July 22