
ಚಿಕ್ಕಬಳ್ಳಾಪುರ, ಅಕ್ಟೋಬರ್ 11: ಚಿಕ್ಕಬಳ್ಳಾಪುರ ತಾಲೂಕಿನ ಕಳವಾರ ಗ್ರಾಮದ ಬಳಿ ಇರುವ ಸ್ಕಂದಗಿರಿ ಬೆಟ್ಟ ಪ್ರಕೃತಿಯ ಸೌಂದರ್ಯವನ್ನು ಹೊದ್ದುಕೊಂಡಿದೆ. ಬರೋಬ್ಬರಿ ಆರು ತಿಂಗಳ ಬಳಿಕ ಇದೀಗ ಪ್ರಸಿದ್ಧ ಸ್ಕಂದಗಿರಿ ಬೆಟ್ಟ ಹಾಗೂ ಕೈವಾರ ಬೆಟ್ಟದಲ್ಲಿ ಚಾರಣಕ್ಕೆ ಅರಣ್ಯ ಇಲಾಖೆ ಗ್ರೀನ್ ಸಿಗ್ನಲ್ ನೀಡಿದೆ. ಹಾಗಾಗಿ ಪ್ರಕೃತಿ ಹಾಗೂ ಚಾರಣ ಪ್ರಿಯರು ಮತ್ತೆ ಸ್ಕಂದಗಿರಿಯತ್ತ ಮುಖ ಮಾಡಿದ್ದಾರೆ.
ರಾಜಧಾನಿ ಬೆಂಗಳೂರಿನ ಜನರು ಸ್ಕಂದಗಿರಿತ್ತ ಮುಖ ಮಾಡುತ್ತಿದ್ದರು. ಆದರೆ ಕೊಡಗು ಹಾಗೂ ಚಿಕ್ಕಮಂಗಳೂರು ಜಿಲ್ಲೆಯಲ್ಲಿ ನಡೆದ ಕೆಲವು ಅಹಿತಕರ ಘಟನೆಯಿಂದ ರಾಜ್ಯ ಸರ್ಕಾರ ಕಳೆದ ಆರು ತಿಂಗಳುಗಳಿಂದ ರಾಜ್ಯದಲ್ಲಿರುವ ಎಲ್ಲಾ ಚಾರಣ ತಾಣಗಳಲ್ಲಿ ಚಾರಣಕ್ಕೆ ನಿರ್ಬಂಧಿಸಲಾಗಿತ್ತು. ಆದರೆ ಈಗ ಅರಣ್ಯ ಪ್ರದೇಶದ ಸುರಕ್ಷತೆ ಹಾಗೂ ಚಾರಣ ನಿರ್ವಹಣೆಗೆ ಸಂಬಂಧಿಸಿದಂತೆ ಎಸ್‌ಒಪಿ ರೂಪಿಸಿ ಅನುಷ್ಠಾನಗೊಳಿಸಿದ ಹಿನ್ನಲೆ ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತೆ ಸ್ಕಂದಗಿರಿ ಹಾಗೂ ಕೈವಾರ ಬೆಟ್ಟದಲ್ಲಿ ಚಾರಣಕ್ಕೆ ಅವಕಾಶ ಕಲ್ಪಿಸಿದ್ದಾರೆ.
ಇದನ್ನೂ ಓದಿ: ಖಾಸಗಿ ದರ್ಬಾರ್, ಚಾಮುಂಡಿ ದರ್ಶನ: ಮೈಸೂರು ದಸರಾ ಉದ್ಘಾಟನೆಯ ಸುಂದರ ಕ್ಷಣಗಳು; ಇಲ್ಲಿವೆ ಫೋಟೋಸ್
ಇನ್ನೂ ಸ್ಕಂದಗಿರಿ ಹಾಗೂ ಕೈವಾರ ಬೆಟ್ಟದಲ್ಲಿ ಚಾರಣಕ್ಕೆ ಅವಕಾಶ ಸಿಕ್ಕಿದ್ದೆ ತಡ, ಮೊದಲನೇ ದಿನವಾದ ಇಂದು, 150 ಜನ ಚಾರಣಿಗರು ಆಗಮಿಸಿದ್ದು, ಸ್ಕಂದಗಿರಿ ಬೆಟ್ಟದಲ್ಲಿ ಪ್ರಕೃತಿ ಸೌಂದರ್ಯ ಸವಿದರು. ಪ್ರಕೃತಿಯ ಮಡಿಲಲ್ಲಿ ಕಾಲ ಕಳೆಯಬೇಕು, ಬೆಟ್ಟದ ತುದಿಯಿಂದ ಸುತ್ತಲಿನ ಸುಂದರ ದೃಶ್ಯಗಳನ್ನು ಕಣ್ತುಂಬಿಕೊಳ್ಳಬೇಕು ಎಂಬ ಆಸೆಯಿಂದ ಚಾರಣಿಗರು ಸ್ಕಂದಗಿರಿಯತ್ತ ಹೆಜ್ಜೆ ಹಾಕುತ್ತಿದ್ದಾರೆ.
ಇದನ್ನೂ ಓದಿ: ಗೇ ಡೇಟಿಂಗ್ ಆ್ಯಪ್ ಮೂಲಕ ಪರಿಚಯ: ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸುಲಿಗೆ; ಮೂವರ ಬಂಧನ
ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ವ್ಯಕ್ತಿಗೆ 250 ರೂ ಪ್ರವೇಶ ಶುಲ್ಕ ಹಾಗೂ ಶನಿವಾರ, ಭಾನುವಾರ ಚಾರಣ ಕೈಗೊಳ್ಳುವವರಿಗೆ 500 ರೂ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ಆದರೆ ಚಾರಣ ಹಣವಿದ್ದವರಿಗೆ ಮಾತ್ರ ಎನ್ನುವಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.