- TV9 Kannada Kannada News Photos Mysuru Dasara 2026: Royal Durbar, Chamundi Devi Darshan; See the Grand Celebration in Photos
ಖಾಸಗಿ ದರ್ಬಾರ್, ಚಾಮುಂಡಿ ದರ್ಶನ: ಮೈಸೂರು ದಸರಾ ಉದ್ಘಾಟನೆಯ ಸುಂದರ ಕ್ಷಣಗಳು; ಇಲ್ಲಿವೆ ಫೋಟೋಸ್
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಗವಿಮಠದ ಶ್ರೀಗಳಿಂದ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಸಿಎಂ ಡಿಕೆ ಶಿವಕುಮಾರ್ ಸಾಥ್ ನೀಡಿದರು. ಅರಮನೆಯಲ್ಲಿ ಯದುವೀರ್ ಒಡೆಯರ್ ಅವರು ಖಾಸಗಿ ದರ್ಬಾರ್ ನಡೆಸಿದರು. ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗಿದ್ದು, ದೀಪಾಲಂಕಾರದಿಂದ ಮೈಸೂರು ಝಗಮಗಿಸುತ್ತಿದೆ. ಇಲ್ಲಿವೆ ನೋಡಿ ಫೋಟೋಸ್.
Updated on: Oct 11, 2026 | 7:28 PM

ನಾಡಹಬ್ಬ ಮೈಸೂರು ದಸರಾದ ಸಂಭ್ರಮಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಮೈಸೂರು ನಗರಿ ದೀಪಾಲಂಕಾರದಿಂದ ಝಗಮಗಿಸುತ್ತಿದೆ. ಅರಮನೆ ಅಂಗಳದಲ್ಲಿ ಸಂಭ್ರಮದ ಸಡಗರ ಮನೆಮಾಡಿದೆ. ಸಂಸ್ಕೃತಿ, ಸಂಪ್ರದಾಯ, ವೈಭವದ ಸಂಗಮಕ್ಕೆ ಸಾಂಸ್ಕೃತಿಕ ನಗರಿ ಸಜ್ಜಾಗಿದೆ.

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಶುಭ ಧನುರ್ ಲಗ್ನದಲ್ಲಿ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರು ವಿದ್ಯುಕ್ತ ಚಾಲನೆ ನೀಡಿದ್ದಾರೆ. ಈ ವೇಳೆ ಸಿಎಂ ಡಿಕೆ ಶಿವಕುಮಾರ್ ಅವರು ಸ್ವಾಮೀಜಿಗಳಿಗೆ ಸಾಥ್ ನೀಡಿದರು.

ಈ ವೇಳೆ ಮಾತನಾಡಿದ ಶ್ರೀಗಳು, ‘ನಾನು ದಸರಾ ಉದ್ಘಾಟಿಸಲು ಬಂದಿಲ್ಲ, ಚಾಮುಂಡೇಶ್ವರಿ ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಬಂದಿದ್ದೇನೆ. ನಾನು ದೀಪ ಹಚ್ಚಿದ್ದೇನೆ ಬೆಳಕು ದೇವಿಯದು, ಚಾಮುಂಡಿ ದೇವಿ ಟವರ್ ಆಫ್ ಪವರ್’ ಎಂದರು.

ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಪತ್ನಿ ಉಷಾ ಶಿವಕುಮಾರ್ ಚಾಮುಂಡಿ ದೇವಿ ದರ್ಶನ ಪಡೆದರು.

ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ‘ಈ ಐತಿಹಾಸಿಕ ದಸರಾ ಮಹೋತ್ಸವದಲ್ಲಿ ಭಾಗಿಯಾಗಿರುವುದು ತಮ್ಮ ಬದುಕಿನ ಸ್ಮರಣೀಯ ಕ್ಷಣ ಹಾಗೂ ಪೂರ್ವಜನ್ಮದ ಪುಣ್ಯ. ನಾಡು ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗಲಿ’ ಎಂದು ಹೇಳಿದರು.

ಇತ್ತ ದಸರಾಗೆ ಅದ್ಧೂರಿ ಚಾಲನೆ ಸಿಕ್ಕರೆ, ಅತ್ತ ಅರಮನೆಯಲ್ಲೂ ಇಂದಿನಿಂದಲೇ ಪೂಜಾ ಕೈಂಕರ್ಯಗಳು ಆರಂಭವಾಗಿವೆ. ಕಂಕಣಧಾರಣೆ ಮಾಡಿರುವ ಯದುವೀರ್ ಒಡೆಯರ್, ಅರಮನೆಯಲ್ಲಿ ಖಾಸಗಿ ದರ್ಬಾರ್ ನಡೆಸಿದರು.

ರಾಜ ಪೋಷಾಕು ಧರಿಸಿದ ಯದುವೀರ್, ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ಮಂಗಳಾರತಿ ಮಾಡಿದರು. ಸಿಂಹಾಸನದ ಪಕ್ಕದಲ್ಲೇ ಕುಳಿತು ನವಗ್ರಹ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿದರು. ಪಟ್ಟದ ಆನೆ, ಕುದುರೆ, ಹಸುವನ್ನು ಕರೆಸಿ ಪೂಜೆ ಸಲ್ಲಿಸಲಾಯಿತು.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕುಪ್ಪಣ್ಣ ಪಾರ್ಕ್ನಲ್ಲಿ ಆಯೋಜಿಸಿರುವ ಫ್ಲವರ್ಶೋ ಉದ್ಘಾಟಿಸಿದರು. ಆಹಾರ ಮೇಳಕ್ಕೆ ಸಚಿವ ರಿಜ್ವಾನ್ ಅರ್ಹದ್ ಚಾಲನೆ ನೀಡಿದರು. ಡಿಸಿಎಂ ಪರಮೇಶ್ವರ್, ದಸರಾ ಕ್ರೀಡಾಕೂಟ ಉದ್ಘಾಟಿಸಿದರು.

ಇನ್ನು ಮೈಸೂರು ದಸರಾದ ಉದ್ಘಾಟನಾ ಸಂದರ್ಭದಲ್ಲಿ ಸಚಿವರು, ಶಾಸಕರು ಸೇರಿದಂತೆ ವಿವಿಧ ಮಠಾಧೀಶರು ಉಪಸ್ಥಿತರಿದ್ದರು.

ಇನ್ನು ಕಣ್ಮನ ಸೆಳೆಯುವ ಅಲಂಕಾರದಲ್ಲಿ ತಾಯಿ ಚಾಮುಂಡೇಶ್ವರಿಗೆ ಕಂಗೊಳಿಸಿದ್ದು ಹೀಗೆ.

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.
Read More



