ನಂದಿ ಗಿರಿಧಾಮವನ್ನು ಪ್ರವಾಸೋದ್ಯಮ ಇಲಾಖೆ ಸುಪರ್ದಿಗೆ ನೀಡಿದ್ದೇ ತಡ, ಬೆಟ್ಟದ ಮೇಲೆ ಕುಡುಕರು ತಟ್ಟಾಡುವುದು ಮಿತಿ ಮೀರಿದೆ!
Nandi hills: ನಂದಿ ಗಿರಿಧಾಮ ವಿಶ್ವವಿಖ್ಯಾತ ಪ್ರವಾಸಿ ತಾಣ. ಇಂತಹ ಪ್ರಕೃತಿ ತಾಣವನ್ನು ತೋಟಗಾರಿಕೆ ಇಲಾಖೆಯಿಂದ ಪ್ರವಾಸೋದ್ಯಮ ಇಲಾಖೆಯ ಕೆಎಸ್‌ಟಿಡಿಸಿ ಸುಪರ್ದಿಗೆ ನೀಡಿದ್ದೇ ತಡ ಬೆಟ್ಟದಲ್ಲಿ ಎಲ್ಲೆಲ್ಲೂ ಮೋಜು, ಮಸ್ತಿ ಸೇರಿದಂತೆ ಕುಡುಕರ ಹಾವಳಿ ಹೆಚ್ಚಾಗಿದೆ.
ಚಿಕ್ಕಬಳ್ಳಾಪುರ: ಅದು ವಿಶ್ವವಿಖ್ಯಾತ ಪ್ರವಾಸಿತಾಣ. ಅಲ್ಲಿಗೆ ಹೋಗಿ ಕೆಲಕಾಲ ವಿಹಾರ ಮಾಡಿದರೆ ಅದೇನೋ ಮನಸ್ಸಿಗೆ ಹಿತವೆನಿಸುತ್ತೆ. ಅಲ್ಲಿರುವ ಅಹ್ಲಾದಕರ ವಾತಾವರಣಕ್ಕೆ ಮನಸೋಲದವರೇ ಇಲ್ಲ. ಪ್ರೇಮಿಗಳಿಗೆ ಪ್ರೇಮಸ್ವರ್ಗ, ವೃದ್ಧರಿಗೆ ವಿಶ್ರಾಂತಿಧಾಮ, ನವವಿವಾಹಿತರಿಗೆ ಹನಿಮೂನ್ ತಾಣ, ಪ್ರಕೃತಿ ಪ್ರಿಯರ ಅಚ್ಚುಮೆಚ್ಚಿನ ತಾಣ ಎಂದೇ ಖ್ಯಾತಿಯಾಗಿದ್ದ ಆ ತಾಣ ಈಗ ಮುಂದುವರಿದು ಕುಡುಕರ ನೆಚ್ಚಿನ ತಾಣವಾದಂತೆ ಕಂಡುಬಂದಿದೆ! ಅಷ್ಟಕ್ಕೂ ಅದ್ಯಾವ ತಾಣ ಅಂದರೆ…
ಆಕಾಶ-ಭೂಮಿ ಒಂದಾಗಿ, ಭೂಮಿಯ ಮೇಲೆ ಸ್ವರ್ಗ ಸೃಷ್ಟಿಸಿರುವ ಇದು ನಂದಿ ಗಿರಿಧಾಮ (World famous Nandi hills). ವಿಶ್ವವಿಖ್ಯಾತ ಪ್ರವಾಸಿ ತಾಣ. ಇಂತಹ ಪ್ರಕೃತಿ ತಾಣವನ್ನು ತೋಟಗಾರಿಕೆ (Horticulture) ಇಲಾಖೆಯಿಂದ ಪ್ರವಾಸೋದ್ಯಮ (Tourism) ಇಲಾಖೆಯ ಕೆಎಸ್‌ಟಿಡಿಸಿ (KSTDC) ಸುಪರ್ದಿಗೆ ನೀಡಿದ್ದೇ ತಡ ಬೆಟ್ಟದಲ್ಲಿ ಎಲ್ಲೆಲ್ಲೂ ಮೋಜು, ಮಸ್ತಿ ಸೇರಿದಂತೆ ಕುಡುಕರ (Drunkard) ಹಾವಳಿ ಹೆಚ್ಚಾಗಿದೆ. ಇದರಿಂದ ಗಿರಿಧಾಮದಲ್ಲಿ ಗಿಡ, ಮರ, ಪೊದೆಗಳ ಸಂಖ್ಯೆಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಮದ್ಯದ ಬಾಟಲಿಗಳ ರಾಶಿಗಳೇ ಕಾಣುತ್ತಿವೆ. ಇನ್ನು ಸ್ವಚ್ಚತಾ ಅಭಿಯಾನದ ಪ್ರಯುಕ್ತ ಚಿಕ್ಕಬಳ್ಳಾಪುರ (Chikkaballapur) ಜಿಲ್ಲಾ ಪಂಚಾಯ್ತಿ ನಂದಿ ಗಿರಿಧಾಮದಲ್ಲಿ ಸ್ವಚ್ಚ ನಂದಿ ಕಾರ್ಯಕ್ರಮ ಆಯೋಜನೆ ಮಾಡಿದಾಗ ರಾಶಿ ರಾಶಿ ಮದ್ಯದ ಬಾಟಲುಗಳು ಪತ್ತೆಯಾಗಿವೆ.
ಇನ್ನು ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಸೇರಿದಂತೆ ಜಿಲ್ಲೆಯ 157 ಗ್ರಾಮ ಪಂಚಾಯ್ತಿಗಳ ಪಿಡಿಓಗಳು, ಕಾರ್ಯದರ್ಶಿಗಳು, ಬಿಲ್ ಕಲೆಕ್ಟರ್‌ಗಳು ತಾಲ್ಲೂಕು ಪಂಚಾಯ್ತಿಗಳು ಇ.ಓ. ಅಧಿಕಾರಿಗಳು ಸೇರಿದಂತೆ ನೂರಾರು ಜನ ಅಧಿಕಾರಿ ಸಿಬ್ಬಂದಿ ನಂದಿ ಗಿರಿಧಾಮವನ್ನು ಸ್ವಚ್ಛ ಮಾಡಿದರು. ಗಿರಿ ಧಾಮದಲ್ಲಿದ್ದ ಪ್ಲಾಸ್ಟಿಕ್ ಬಾಟಲು ಮತ್ತು ಮದ್ಯದ ಬಾಟಲುಗಳನ್ನು ತುಂಬಿಕೊಂಡು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ವಿಲೇವಾರಿ ಮಾಡಿದರು. ಇನ್ನು ಸ್ವಚ್ಛತೆಯೇ ಸೇವೆ ಎಂಬ ಧ್ಯೇಯದೊಂದಿಗೆ ಚಿಕ್ಕಬಳ್ಳಾಪುರ ತಾಲ್ಲೂಕಿನ ಸುಲ್ತಾನ ಪೇಟೆಯಿಂದ ಕುದುರೆ ಮೆಟ್ಟಿಲುಗಳ ಮೂಲಕ ಟ್ರಕ್ಕಿಂಗ್ ಅಂಡ್ ಕ್ಲೀನಿಂಗ್ ಮಾಡಿ ಸುಂದರ ಪ್ರಕೃತಿ ಸೊಬಗಿಗೆ ಮಾರುಹೋದರು ಎನ್ನುತ್ತಾರೆ ಧನುರೇಖಾ, ಮುಖ್ಯ ಯೋಜನಾಧಿಕಾರಿ, ಚಿಕ್ಕಬಳ್ಳಾಪುರ ಜಿ ಪಂ.
ನಂದಿ ಗಿರಿಧಾಮ ತೋಟಗಾರಿಕೆ ಇಲಾಖೆಯ ಅಧೀನದಲ್ಲಿದ್ದಾಗ ಗಿಡ, ಮರ, ಬಳ್ಳಿ ಸೇರಿದಂತೆ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುತ್ತಿದ್ದರು. ಆದರೆ ಪ್ರವಾಸೋದ್ಯಮ ಇಲಾಖೆಯ ವ್ಯಾಪ್ತಿಗೆ ನಂದಿ ಗಿರಿಧಾಮ ಬರುತ್ತಿದ್ದಂತೆ ಸ್ವಚ್ಚತೆ, ಪರಿಸರ, ಪ್ರಕೃತಿ ಸೊಬಗಿಗೆ ಪ್ರಾಮುಖ್ಯತೆ ನೀಡದೇ ವ್ಯಾಪಾರ, ವಾಣಿಜ್ಯ ಲಾಭಕ್ಕೆ ಪ್ರಾಮುಖ್ಯತೆ ನೀಡಲಾಗಿದೆ. ಇದರಿಂದ ಗಿರಿಧಾಮದಲ್ಲಿ ಸ್ವಚ್ಚತೆ ಮರೀಚಿಕೆಯಾಗಿದ್ದು, ಪ್ರವಾಸಕ್ಕೆ ಬಂದ ಕೆಲವರು ಹೇಳೋರು, ಕೇಳೂರು ಯಾರೂ ಇಲ್ಲದೇ ಕುಡುಕರ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿ ಬಂದಿದೆ – ಭೀಮಪ್ಪ ಪಾಟೀಲ, ಟಿವಿ 9, ಚಿಕ್ಕಬಳ್ಳಾಪುರ