ಈತ ಅಮೆರಿಕದ ಕ್ರಿಕೆಟರ್: ಬೌಲಿಂಗ್​ಗೂ ಸೈ- ಬ್ಯಾಟಿಂಗ್​ಗೂ ಜೈ ಅನ್ನೋ ಜಾಯಮಾನ! ಈತನ ಜೊತೆಗಿದೆ ಕಾಫಿನಾಡಿನ ನಂಟು!

ಈತ ಅಮೆರಿಕದ ಕ್ರಿಕೆಟರ್: ಬೌಲಿಂಗ್​ಗೂ ಸೈ- ಬ್ಯಾಟಿಂಗ್​ಗೂ ಜೈ ಅನ್ನೋ ಜಾಯಮಾನ! ಈತನ ಜೊತೆಗಿದೆ ಕಾಫಿನಾಡಿನ ನಂಟು!
ಈತ ಅಮೆರಿಕದ ಕ್ರಿಕೆಟರ್- ಬೌಲಿಂಗ್​ಗೂ ಸೈ, ಬ್ಯಾಟಿಂಗ್​ಗೂ ಜೈ ಅನ್ನೋ ಜಾಯಮಾನ! ಈತನ ಜೊತೆಗಿದೆ ಕಾಫಿನಾಡಿನ ನಂಟು!

Nosthush Pradeep Kenjige: ನಾನು ಕ್ರಿಕೆಟ್ ಲವರ್, ಅಮೆರಿಕದ ಪರ ಆಡ್ತಿದ್ರೂ ಕ್ರಿಕೆಟನ್ನ ಎಂಜಾಯ್ ಮಾಡ್ತಿದ್ದೇನೆ ಅಂತಾ ಟಿವಿ9 ಬಳಿ ಮನಬಿಚ್ಚಿ ಮಾತನಾಡಿದ್ದಾರೆ. ಮುಂದಿನ ಜೂನ್​ ತಿಂಗಳಲ್ಲಿ ಕ್ವಾಲಿಫೈಯರ್ ಮ್ಯಾಚ್ ಇದೆ, 2023ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವರ್ಲ್ಡ್ ಕಪ್ ಆಡುವ ಆಸೆಯಿದೆ ಅಂತಾ ಟಿವಿ9 ಜೊತೆ ತಮ್ಮ ಕನಸನ್ನ ಬಿಚ್ಚಿಟ್ಟಿದ್ದಾರೆ.

TV9kannada Web Team

| Edited By: sadhu srinath

Jan 25, 2022 | 9:35 AM

ಮಾಸ್ಟರ್ ಬ್ಲಾಸ್ಟರ್ ಸಚಿನ್ ಪ್ರಪಂಚದ ಕ್ರೀಡಾಪ್ರೇಮಿಗಳ ಮನಗೆದ್ರೆ, ಎಬಿ ಡಿವಿಲಿಯರ್ಸ್ ಕೋಟ್ಯಾಂತರ ಭಾರತೀಯರಿಗೆ ಇಷ್ಟವಾಗ್ತಾರೆ. ಅಂದ್ರೆ ಕ್ರಿಕೆಟ್ ಗೆ ದೇಶ-ಭಾಷೆಯ ಹಂಗಿಲ್ಲ, ಗಡಿಯ ರೇಖೆಯನ್ನ ಮೀರಿ ಕ್ರಿಕೆಟ್ ಆಟ, ಕ್ರಿಕೆಟಿಗರು ಎಲ್ಲರ ಮನಗೆದ್ದಿದ್ದಾರೆ. ಕ್ರಿಕೆಟನ್ನೇ ಫ್ಯಾಶನ್ ಅಂತಾ ಪ್ರೀತಿಸ್ತಿರೋ ಇಲ್ಲೊಬ್ಬ ಕಾಫಿನಾಡಿನ ಯುವಕ, ಕಳೆದ ನಾಲ್ಕು ವರ್ಷದಿಂದಲೂ ಸದ್ದಿಲ್ಲದೇ ಅಮೆರಿಕ ತಂಡವನ್ನ ಪ್ರತಿನಿಧಿಸುತ್ತ ಭಾರತೀಯರನ್ನೇ ಬೆರಗುಗೊಳಿಸಿದ್ದಾನೆ.. ಅಷ್ಟಕ್ಕೂ ಯಾರು ಆ ಪ್ರತಿಭೆ..? ಕಾಫಿನಾಡಿನಿಂದ ಅಮೆರಿಕಕ್ಕೆ ಹಾರಿದ ಇಂಟರೆಸ್ಟಿಂಗ್ ಸ್ಟೋರಿ ಏನು ಅಂತೀರಾ? ಬಾಲನ್ನ ಬುಗುರಿಯಂತೆ ತಿರುಗಿಸುವ ಯುವಕ..! ರಾಹುಲ್ ದ್ರಾವಿಡ್ ಶೈಲಿಯಲ್ಲಿ ಬ್ಯಾಟ್ ಬೀಸುವ ಬ್ಯಾಟರ್ ಈತ! ಈತನದ್ದು ಬೌಲಿಂಗ್​ಗೂ ಸೈ (left-arm orthodox bowler), ಬ್ಯಾಟಿಂಗ್​ಗೂ ಜೈ (left-handed batter) ಅನ್ನೋ ಜಯಮಾನ..! ಅಷ್ಟಿಲ್ಲದೇ ಇಂಟರ್ ನ್ಯಾಷನಲ್ ಕ್ರಿಕೆಟರ್ ಆಗೋಕೆ ಆಗುತ್ತಾ..? ಛಾನ್ಸೇ ಇಲ್ಲ, ತನ್ನ ಈ ಅಪ್ರತಿಮ ಪ್ರತಿಭೆಯಿಂದಲೇ ಇಂದು ಅಂತರರಾಷ್ಟ್ರೀಯ ಕ್ರಿಕೆಟರ್ ಆಗಿ ಈ ಯುವಕ ಗುರುತಿಸಿಕೊಂಡಿದ್ದಾನೆ. ಇದ್ಯಾರಿದು, ನಾವು ನೋಡಿದ ಹಾಗೆಯೇ ಇಲ್ವಲ್ಲ ಅಂತಾ ಅಚ್ಚರಿ ಪಡಬೇಡಿ. ಈ ಯುವಕ ಅಮೆರಿಕ ತಂಡದ ಕ್ರಿಕೆಟರ್.. ಹೆಸ್ರು, ನೋಸ್ತುಶ್ ಕೆಂಜಿಗೆ (Nosthush Pradeep Kenjige).

ಅಮೆರಿಕದ ಕ್ರಿಕೆಟರ್ ಅಲ್ವಾ ಅದ್ರಲೇನು ಮಹಾ ಅಂತಲೂ ಮೂಗು ಮುರಿಯಬೇಡಿ. ಅಮೆರಿಕ ತಂಡದ ಕ್ರಿಕೆಟರ್ ಆದ್ರೂ ಈ ಪ್ರತಿಭೆ ಅಪ್ಪಟ ಭಾರತದ್ದು ಕಣ್ರೀ.. ಅದ್ರಲ್ಲೂ ನಮ್ಮ ಹೆಮ್ಮೆಯ ಕರ್ನಾಟಕದ ಕಾಫಿನಾಡಿನ ಟಾಲೆಂಟ್ ಕ್ರಿಕೆಟರ್ ಈ ನೋಸ್ತುಶ್ ಕೆಂಜಿಗೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಂಜಿಗೆ ಗ್ರಾಮದ ಪ್ರದೀಪ್-ಶೃತಿಕೀರ್ತಿ ದಂಪತಿಯ ಸುಪುತ್ರ ಈ ನೋಸ್ತುಶ್. ಎಡಗೈ ಸ್ಪಿನರ್ ಆಗಿರೋ ನೋಸ್ತುಶ್ ಅಮೆರಿಕ ಕ್ರಿಕೆಟ್ ತಂಡದ ಫರ್ಮನೆಂಟ್ ಸದಸ್ಯ.

2017ರಲ್ಲಿ ಅಮೆರಿಕ ತಂಡದ ಪರ ಅಂತರರಾಷ್ಟ್ರೀಯ ಪಂದ್ಯ ಆಡಿದ ನೋಸ್ತುಶ್, ಈಗಾಗಲೇ 60 ಓಡಿಐ, ಟಿ20 ಪಂದ್ಯಗಳನ್ನಾಡಿ ಗಮನ ಸೆಳೆದಿದ್ದಾರೆ. ಕಾಫಿನಾಡಿನ ಈ ಪ್ರತಿಭೆ ಎಡಗೈಯಲ್ಲಿ ಬೌಲ್ ಮಾಡಿದ್ರೂ ಬ್ಯಾಟ್ ಬೀಸೋದು ಬಲಗೈಯಲ್ಲೇ. ಸದ್ಯ ವಿಶ್ರಾಂತಿ ಪಡೆದು ತವರೂರಿಗೆ ಆಗಮಿಸಿರುವ ನೋಸ್ತುಶ್, ಇಲ್ಲೂ ಕೂಡ ಪ್ರಾಕ್ಟಿಸ್ ಮಾಡೋದನ್ನ ಮಿಸ್ ಮಾಡ್ತಿಲ್ಲ. ರಾಹುಲ್ ದ್ರಾವಿಡ್ ರನ್ನ ಮಾದರಿಯಾಗಿ ತೆಗೆದುಕೊಂಡಿರುವ ನೋಸ್ತುಶ್, ಬಿಸಿಲ ಬೇಗೆಯಲ್ಲೇ ಗೆಳೆಯರ ಜೊತೆ ನೆಟ್ ಪ್ರಾಕ್ಟಿಸ್ ಮಾಡ್ತಾ ತಮ್ಮ ಕ್ರಿಕೆಟ್ ಆಟವನ್ನ ಮುಂದುವರೆಸಿದ್ದಾರೆ.

ಮಯಾಂಕ್ ಆಗರ್ವಾಲ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್ ಜೊತೆ ಕ್ಲಬ್ ಕ್ರಿಕೆಟ್ನಲ್ಲಿ ಒಂದೇ ತಂಡವನ್ನ ಪ್ರತಿನಿಧಿಸುತ್ತಿದ್ದ ನೋಸ್ತುಶ್, ಬೇರೆ ದೋಣಿಯಲ್ಲಿ ಪಯಣಿಸುವ ತರ ಅಮೆರಿಕದ ಪರ ಕ್ರಿಕೆಟ್ ಆಡುವಂತಾಗಿದೆ. ಬೆಂಗಳೂರಲ್ಲೇ ಕ್ರಿಕೆಟ್ ಆಟವನ್ನ ಅಭ್ಯಾಸ ಮಾಡಿದ್ರೂ ಹೆಚ್ಚು ಅವಕಾಶ ಇಲ್ಲಿ ಸಿಗದೇ ಇದ್ದಿದ್ದರಿಂದ ಅಮೆರಿಕ ದೇಶದ ಪರ ಆಡುವಂತಾಗಿದೆ ಅನ್ನುವ ನೋಸ್ತುಶ್, ನಾನು ಕ್ರಿಕೆಟ್ ಲವರ್, ಅಮೆರಿಕದ ಪರ ಆಡ್ತಿದ್ರೂ ಕ್ರಿಕೆಟನ್ನ ಎಂಜಾಯ್ ಮಾಡ್ತಿದ್ದೇನೆ ಅಂತಾ ಟಿವಿ9 ಬಳಿ ಮನಬಿಚ್ಚಿ ಮಾತನಾಡಿದ್ದಾರೆ. ಮುಂದಿನ ಜೂನ್​ ತಿಂಗಳಲ್ಲಿ ಕ್ವಾಲಿಫೈಯರ್ ಮ್ಯಾಚ್ ಇದೆ, 2023ರಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವರ್ಲ್ಡ್ ಕಪ್ ಆಡುವ ಆಸೆಯಿದೆ ಅಂತಾ ಟಿವಿ9 ಜೊತೆ ತಮ್ಮ ಕನಸನ್ನ ಬಿಚ್ಚಿಟ್ಟಿದ್ದಾರೆ. ಇದೇ ವೇಳೆ ಮಾತನಾಡಿದ ನೋಸ್ತುಶ್ ಸ್ನೇಹಿತರು, ತಮ್ಮೂರಿನ ಪ್ರತಿಭೆ ಅಮೆರಿಕದಲ್ಲಿ ಅರಳಿದ ಬಗ್ಗೆ ಹೆಮ್ಮೆ ಪಡ್ತಿದ್ದಾರೆ.

ಸಾಧನೆ ಮಾಡಬೇಕು ಅಂತಾ ಹೊರಟ್ರೆ ಎಲ್ಲಿ ಬೇಕಾದ್ರೂ ಮಾಡಬಹುದು ಅನ್ನೋದಕ್ಕೆ ನಿಜಕ್ಕೂ ನೋಸ್ತುಶ್ ಮಾದರಿಯಾಗಿದ್ದಾರೆ. ಕ್ರಿಕೆಟ್ ಅಂದ್ರೆ ಜೀವ ಬಿಡುವ ನೋಸ್ತುಶ್, ನಮ್ಮಲ್ಲಿ ಅವಕಾಶ ಸಿಗಲಿಲ್ಲ ಅಂತಾ ಕುಗ್ಗಲಿಲ್ಲ, ಸುಮ್ಮನೇ ಕೂರಲಿಲ್ಲ, ಬದಲಿಗೆ ಅಮೆರಿಕಕ್ಕೆ ಹೋಗಿ ಆ ದೇಶವನ್ನ ಪ್ರತಿನಿಧಿಸುವ ಮಟ್ಟಕ್ಕೆ ಬೆಳೆದು ತೋರಿಸಿದ್ದಾರೆ. ಅಮೆರಿಕ ಕ್ರಿಕೆಟ್ ತಂಡದಲ್ಲಿ ಕಾಫಿನಾಡ ಯುವಕನ ಕಮಾಲ್ ನೋಡಿ ಕ್ರಿಕೆಟ್ ಪ್ರೇಮಿಗಳು ಸಂತಸ ಪಡುತ್ತಿದ್ದಾರೆ. ಅದಕ್ಕೆ ಹೇಳೋದಲ್ವಾ ಕ್ರಿಕೆಟ್, ದೇಶ-ಭಾಷೆಯನ್ನೂ ಮೀರಿದ್ದು ಅಂತಾ..! ಆಲ್ ದಿ ಬೆಸ್ಟ್ ನೋಸ್ತುಶ್..!!

-ಪ್ರಶಾಂತ್, ಟಿವಿ9, ಚಿಕ್ಕಮಗಳೂರು

Follow us on

Related Stories

Most Read Stories

Click on your DTH Provider to Add TV9 Kannada