ಚಿಕ್ಕಮಗಳೂರು: ಮತ್ತೆ ಇಬ್ಬರಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ, ರೋಗಿಗಳ ಸಂಖ್ಯೆ 6ಕ್ಕೆ ಏರಿಕೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಂಗನಕಾಯಿಲೆ (KFD) ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗೆ ಮತ್ತಿಬ್ಬರಿಗೆ ಸೋಂಕು ತಗುಲಿದೆ, ಒಟ್ಟು ಸೋಂಕಿತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆ ಅಲರ್ಟ್ ಘೋಷಿಸಿ, ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ವಿಶೇಷ ವಾರ್ಡ್ ತೆರೆದಿದೆ. ಗ್ರಾಮಗಳಲ್ಲಿ ಪರಿಶೀಲನೆ ನಡೆಯುತ್ತಿದೆ ಮತ್ತು ಅರಣ್ಯ ಪ್ರದೇಶಕ್ಕೆ ಹೋಗದಂತೆ ಸೂಚಿಸಲಾಗಿದೆ. ರಕ್ತದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಚಿಕ್ಕಮಗಳೂರು, ಜನವರಿ 27: ಮಂಗನಕಾಯಿಲೆ ರೋಗ (KFD-ಕ್ಯಾಸನೂರು ಫಾರೆಸ್ಟ್ ಡಿಸೀಸ್) ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಜನರನ್ನು ಬೆಂಬಿಡದೆ ಕಾಡುತ್ತಿದೆ. ಮತ್ತಿಬ್ಬರಲ್ಲಿ ಮಂಗನಕಾಯಿಲೆ ರೋಗ ಕಾಣಿಸಿಕೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಆರಕ್ಕೆ ಏರಕೆಯಾಗಿದೆ. ಎನ್ಆರ್ ಪುರ ತಾಲೂಕಿನ ಮೂವರಲ್ಲಿ, ಕೊಪ್ಪ ತಾಲೂಕಿನ ಇಬ್ಬರಲ್ಲಿ ಮತ್ತು ಚಿಕ್ಕಮಗಳೂರು ತಾಲೂಕಿನ ಓರ್ವನಲ್ಲಿ ಮಂಗನಕಾಯಿಲೆ ರೋಗ ಕಾಣಿಸಿಕೊಂಡಿದೆ.
ಮಂಗನಕಾಯಿಲೆ ಚಿಕಿತ್ಸೆಗೆಂದು ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಇಲಾಖೆ ಕೆಎಫ್ಡಿ ವಾರ್ಡ್ ತೆರೆದಿದೆ. ಆರೋಗ್ಯ ಇಲಾಖೆಯಿಂದ ಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು, ಗ್ರಾಮಗಳಿಗೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ. ಅರಣ್ಯ ಪ್ರದೇಶಕ್ಕೆ ತೆರಳದಂತೆ ಗ್ರಾಮಸ್ಥರಿಗೆ ಅಧಿಕಾರಿಗಳು ಸೂಚನೆ ನೀಡುತ್ತಿದ್ದಾರೆ. ಜೊತೆಗೆ, ಆರೋಗ್ಯ ಇಲಾಖೆ ಸಿಬ್ಬಂದಿ ಮಂಗನ ಕಾಯಿಲೆ ಸೋಂಕು ಲಕ್ಷಣ ಕಂಡುಬಂದವರ ರಕ್ತದ ಮಾದರಿಗಳನ್ನು ಸಂಗ್ರಹಿಸಿ, ಶಿವಮೊಗ್ಗದ ಲ್ಯಾಬ್ ರವಾನಿಸಿದ್ದಾರೆ.
ಇದನ್ನೂ ಓದಿ: ವಾಕಿಂಗ್ ಹೋಗಿದ್ದ ಯುವ ವೈದ್ಯ ನಿಗೂಢ ಸಾವು!
ಮಂಗನ ಕಾಯಿಲೆ ಒಂದು ವಾರದ ಹಿಂದೆ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿಯ ಮತ್ತಿಖಂಡ ಗ್ರಾಮದ 25 ವರ್ಷದ ಯುವಕನಲ್ಲಿ ಕಾಣಿಸಿಕೊಂಡಿತ್ತು. ತೀವ್ರ ಜ್ವರದಿಂದ ಬಳಲುತ್ತಿದ್ದ ಯುವಕನ ರಕ್ತ ಪರೀಕ್ಷೆಯಲ್ಲಿ ಮಂಗನ ಕಾಯಿಲೆ ಬಂದಿರುವ ದೃಢವಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಯುವಕನನ್ನ ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು.
ಕಳೆದ ವರ್ಷ ಚಿಕ್ಕಮಗಳೂರು ಜಿಲ್ಲೆಯಲ್ಲಿ 132 ಜನರಲ್ಲಿ ಕಾಯಿಲೆ ಕಾಣಿಸಿಕೊಂಡು ನಾಲ್ವರನ್ನು ಬಲಿ ಪಡೆದಿತ್ತು. ಕಾಡಂಚಿನ ತಾಲೂಕುಗಳಾದ ಚಿಕ್ಕಮಗಳೂರು, ಕೊಪ್ಪ, ಎನ್ಆರ್ಪುರ, ಶೃಂಗೇರಿ ತಾಲೂಕುಗಳಲ್ಲಿ ಮಂಗನ ಕಾಯಿಲೆ ತನ್ನ ರುದ್ರರೂಪ ತಾಳುವ ಮುನ್ನ ಅರೋಗ್ಯ ಇಲಾಖೆ ಮಂಗನ ಕಾಯಿಲೆ ಅಲರ್ಟ್ ಘೋಷಣೆ ಮಾಡಲಾಗಿದೆ.
ಮಂಗನ ಕಾಯಿಲೆ ಪತ್ತೆಯಾಗಿರುವ ಚಿಕ್ಕಮಗಳೂರು ಜಿಲ್ಲೆಯ ಖಾಂಡ್ಯ ಹೋಬಳಿ ಮತ್ತಿಖಂಡ ಗ್ರಾಮದಲ್ಲಿ ಉಣ್ಣೆಗಳನ್ನ ಸಂಗ್ರಹ ಮಾಡಲಾಗಿದೆ. ಅರಣ್ಯದಲ್ಲಿ ಮಂಗಗಳು ಸಾವನ್ನಪ್ಪಿರುವ ಕುರಿತು ಮಾಹಿತಿ ಪಡೆಯಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ