
ಚಿಕ್ಕಮಗಳೂರು, ಮೇ 22: ನಗರದ ರಾಂಪುರ ಗ್ರಾಮದಲ್ಲಿ ಕಾಮಗಾರಿ ವೀಕ್ಷಣೆಗೆ ಬಂದಿದ್ದ ಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಗೋಬ್ಯಾಕ್ ಘೋಷಣೆ ಕೂಗಿದ ಪರಿಣಾಮ, ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಕಿತ್ತಾಟ ನಡೆದಿದೆ. ಚಿಕ್ಕಮಗಳೂರು (Chikkamagaluru) ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಈ ಕೇಸ್ ಭಾರಿ ಚರ್ಚೆಗೆ ಕಾರಣವಾಗಿದ್ದು, ಸಿ,ಟಿ ರವಿ ಈ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿಗೆ ಕಾರಣ ನಾನೇ, ಯಾವ ದೇವಸ್ಥಾನಕ್ಕೆ ಬೇಕಾದರೂ ಬಂದು ಪ್ರಮಾಣ ಮಾಡುತ್ತೇನೆ ಎಂದು ಹೇಳಿದ್ದಾರೆ.
ಕಾಮಗಾರಿ ಕ್ರೆಡಿಟ್ ವಿಚಾರವಾಗಿ ಶಾಸಕ ತಮ್ಮಯ್ಯ ವಿರುದ್ಧ ಸಿ.ಟಿ. ರವಿ ಆಕ್ರೋಶ ಹೊರಹಾಕಿದ್ದು, ಮುಖಾಮುಖಿ ಆಣೆ ಪ್ರಮಾಣಕ್ಕೆ ಸವಾಲು ಹಾಕಿದ್ದಾರೆ. ಈ ಭಾಗದಲ್ಲಿ ನಡೆಯುತ್ತಿರುವ ಶೇ 95ರಷ್ಟು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನವನ್ನು ತಂದಿದ್ದು ನಾನೇ. ಕಾಂಗ್ರೆಸ್ ಸರ್ಕಾರ ಈ ರಸ್ತೆ ಕಾಮಗಾರಿಗೆ ಒಂದು ಪೈಸೆ ಹಣವನ್ನೂ ನೀಡಿಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ವಿಶೇಷ ಅನುದಾನ ತಂದಿದ್ದೆ. ಯಾವ ದೇವಸ್ಥಾನಕ್ಕೆ ಕರೆದರೂ ಬಂದು ಪ್ರಮಾಣ ಮಾಡಲು ನಾನು ಸಿದ್ಧ, ಎಲ್ಲಿಗಾದರೂ ಕರೆಯಲಿ ಅವರು ಬಂದು ಆಣೆ ಮಾಡಲಿ ಎಂದು ಸಿ.ಟಿ. ರವಿ ನೇರ ಸವಾಲು ಎಸೆದಿದ್ದಾರೆ.
ಇದನ್ನೂ ಓದಿ ನಿಪ್ಪಾಣಿ ಬೆನ್ನಲ್ಲೇ ಚಿಕ್ಕಮಗಳೂರಲ್ಲೂ ಕೈ, ಕಮಲ ಸಮರ: ಕಾಮಗಾರಿ ವಿಚಾರವಾಗಿ ಸಿ.ಟಿ.ರವಿ ಎದುರೇ ಹೈಡ್ರಾಮಾ
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಕಾಮಗಾರಿಯನ್ನು ತಡೆಹಿಡಿಯುವ ಕೆಲಸ ಮಾಡಿತು ಎಂದು ಆರೋಪಿಸಿದ ಸಿ.ಟಿ.ರವಿ, 2024ರಲ್ಲಿ ಈ ರಸ್ತೆ ಕಾಮಗಾರಿಗೆ ವರ್ಕ್ ಆರ್ಡರ್ ನೀಡಲಾಗಿತ್ತು ಎಂದಿದ್ದಾರೆ. ರಸ್ತೆಯಲ್ಲಿದ್ದ ಮರ ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸಲು ಹಣವಿಲ್ಲದ ಕಾರಣ ಕಾಮಗಾರಿ ವಿಳಂಬವಾಗಿದೆ ವಿನಃ ಬೇರೇನೂ ಅಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದ್ಯ ಚಿಕ್ಕಮಗಳೂರು ನಗರದಲ್ಲಿ ಎಂಎಲ್‌ಸಿ ಹಾಗೂ ಎಂಎಲ್‌ಎ ನಡುವಿನ ಈ ಆಣೆ-ಪ್ರಮಾಣದ ಫೈಟ್ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:22 am, Fri, 22 May 26