ನಿಪ್ಪಾಣಿ ಬೆನ್ನಲ್ಲೇ ಚಿಕ್ಕಮಗಳೂರಲ್ಲೂ ಕೈ, ಕಮಲ ಸಮರ: ಕಾಮಗಾರಿ ವಿಚಾರವಾಗಿ ಸಿ.ಟಿ.ರವಿ ಎದುರೇ ಹೈಡ್ರಾಮಾ
ಚಿಕ್ಕಮಗಳೂರಿನ ರಾಂಪುರದಲ್ಲಿ ಕಾಮಗಾರಿ ವೀಕ್ಷಣೆ ವೇಳೆ ಎಂಎಲ್‌ಸಿ ಸಿ.ಟಿ.ರವಿ ಎದುರೇ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು ಕೈಕೈ ಮಿಲಾಯಿಸಿದ್ದು, ಹೈಡ್ರಾಮಾ ಸೃಷ್ಟಿಯಾಗಿದೆ. ವಿಧಾನ ಪರಿಷತ್ ಸದಸ್ಯರನ್ನು ಅಡ್ಡಗಟ್ಟಿ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿದ ಹಿನ್ನೆಲೆ ಆರಂಭವಾದ ಗಲಾಟೆ ವಿಕೋಪಕ್ಕೆ ಹೋಗಿದೆ. ಆ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದು, ಇಂತಹ ಗೂಂಡಾಗಳನ್ನು ಎದರಿಸಿಯೇ ನಾವು ಇಲ್ಲಿಯವರೆಗೆ ಬಂದಿದ್ದೇವೆ. ನನ್ನ ಮೇಲೆ ಹಲ್ಲೆಯ ಪ್ರಯತ್ನವೂ ನಡೆದಿದ್ದು, ಹೆದರಿ ಓಡಿಹೋಗುವ ಜಾಯಮಾನ ನನ್ನದಲ್ಲ ಎಂದವರು ಕಿಡಿ ಕಾರಿದ್ದಾರೆ.

ಚಿಕ್ಕಮಗಳೂರು, ಮೇ 21: ಶಾಸಕಿ ಶಶಿಕಲಾ ಜೊಲ್ಲೆ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು ಕಿತ್ತಾಡಿಕೊಂಡಿರುವ ಘಟನೆ ನಿಪ್ಪಾಣಿಯಲ್ಲಿ ನಡೆದ ಬೆನ್ನಲ್ಲೇ ಇತ್ತ ಚಿಕ್ಕಮಗಳೂರಲ್ಲೂ (Chikkamagaluru) ಅದೇ ಮಾದರಿಯ ಪ್ರಸಂಗ ನಡೆದಿದೆ. ಚಿಕ್ಕಮಗಳೂರು ನಗರದ ರಾಂಪುರ ಗ್ರಾಮದಲ್ಲಿ ಕಾಮಗಾರಿ ವೀಕ್ಷಣೆಗೆ ಬಂದಿದ್ದ ಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಗೋಬ್ಯಾಕ್ ಘೋಷಣೆ ಕೂಗಿದ ಪರಿಣಾಮ, ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರ ನಡುವೆ ಹೈಡ್ರಾಮಾವೇ ನಡೆದಿದೆ.
ಮುಖ್ಯಾಂಶಗಳು
- ಪರಿಷತ್ ಸದಸ್ಯ ಸಿ.ಟಿ ರವಿ ವಿರುದ್ಧ ಗೋಬ್ಯಾಕ್ ಘೋಷಣೆ
- ಚಿಕ್ಕಮಗಳೂರಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಗಲಾಟೆ
- ಎಂಎಲ್‌ಸಿ ಎದುರೇ ಕೈ ಕೈ ಮಿಲಾಯಿಸಿದ ಕಾರ್ಯಕರ್ತರು
ರಾಂಪುರದಿಂದ ಶಕ್ತಿ ನಗರದವರೆಗೂ ಕಾಮಗಾರಿಗಳ ವೀಕ್ಷಣೆ ಮಾಡಿ ಸಿ.ಟಿ. ರವಿ ವಾಪಸ್ ಬರುತ್ತಿದ್ದ ವೇಳೆ ರಾಂಪುರ ಬಳಿ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಯಾಗಿದ್ದಾರೆ. ಈ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಪರಸ್ಪರ ಎದುರಾಗಿದ್ದು, ಎರಡೂ ಕಡೆಯಿಂದ ಘೋಷಣೆಗಳು ಮೊಳಗಿವೆ. ಇದು ವಿಕೋಪಕ್ಕೆ ಹೋಗಿ ಸಿ.ಟಿ. ರವಿ ಸಮ್ಮುಖದಲ್ಲಿಯೇ ಕಾರ್ಯಕರ್ತರು ಪರಸ್ಪರ ಕೈ ಕೈ ಮಿಲಾಯಿಸಿದ್ದಾರೆ. ಬಳಿಕ ಬಿಜೆಪಿ ಕಾರ್ಯಕರ್ತರು ಮತ್ತು ಸಿ.ಟಿ ರವಿ ರಸ್ತೆ ಮಧ್ಯೆ ಧರಣಿ ಕುಳಿತ ಪ್ರಸಂಗ ನಡೆದಿದೆ.
ಇದನ್ನೂ ಓದಿ: ನಿಪ್ಪಾಣಿಯಲ್ಲಿ ಬಿಜೆಪಿ, ಕಾಂಗ್ರೆಸ್ ಕಿತ್ತಾಟ, ಶಾಸಕಿ ಶಶಿಕಲಾ ಜೊಲ್ಲೆಯಿದ್ದ ಕಾರ್ಯಮದಲ್ಲಿಯೇ ಗಲಾಟೆ
ಶಾಸಕ ತಮ್ಮಯ್ಯ ವಿರುದ್ಧ ವಾಗ್ದಾಳಿ
ಇನ್ನು ಶಾಕ ತಮ್ಮ ವಿರುದ್ಧ ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದು, 5800 ಕೋಟಿ ಅನುದಾನ, ಮೆಡಿಕಲ್ ಕಾಲೇಜು ತಂದದ್ದು ನಾನು. 2022ರಲ್ಲಿ ಮಂಜೂರಾದ ಕಾಮಗಾರಿಗೆ ಈಗ ವರ್ಕ್ ಆರ್ಡರ್ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ. ಕಾಮಗಾರಿ ವೀಕ್ಷಣೆಗೆ ಬಂದ ವೇಳೆ ಕೆಲ ಚೇಲಾಗಳನ್ನು ಬಿಟ್ಟು ಗಲಾಟೆ ಮಾಡಿಸಿದ್ದಾರೆ. ಈ ಚಿಲ್ಲರೆ ರಾಜಕಾರಣಕ್ಕೆ ಹೆದರಲ್ಲ. ಸತ್ಯವನ್ನು ಹೇಳಿಯೇ ಹೇಳುತ್ತೇವೆ. ಇಂತಹ ಗೂಂಡಾಗಳನ್ನು ಎದರಿಸಿಯೇ ನಾವು ಇಲ್ಲಿಯವರೆಗೆ ಬಂದಿದ್ದೇವೆ. ನನ್ನ ಮೇಲೆ ಹಲ್ಲೆಯ ಪ್ರಯತ್ನವೂ ನಡೆದಿದ್ದು, ಹೆದರಿ ಓಡಿಹೋಗುವ ಜಾಯಮಾನ ನನ್ನದಲ್ಲ ಎಂದವರು ಕಿಡಿ ಕಾರಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:17 pm, Thu, 21 May 26





