ಚಿಕ್ಕಮಗಳೂರು: 18ನೇ ವರ್ಷದ ಶ್ರೀರಾಮ ಸೇನೆಯ ದತ್ತಮಾಲಾ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ. ಚಿಕ್ಕಮಗಳೂರು ನಗರದ ಶಂಕರ ಮಠದಲ್ಲಿ 50ಕ್ಕೂ ಹೆಚ್ಚು ಶ್ರೀರಾಮಸೇನೆಯ ಕಾರ್ಯಕರ್ತರು ಮಾಲಾಧಾರಣೆ ಮಾಡುವ ಮೂಲಕ ಚಾಲನೆ ನೀಡಿದರು. ಈ ವೇಳೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಸೇರಿ ಹಲವರು ಮಾಲಾಧಾರಣೆ ಮಾಡಿದರು. ಚಿಕ್ಕಮಗಳೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಇಂದಿನಿಂದ ಏಳು ದಿನಗಳ ಕಾಲ ದತ್ತಮಾಲಾ ಅಭಿಯಾನ ನಡೆಯಲಿದೆ. ಮಾಲಾಧಾರಿಗಳು ನವೆಂಬರ್ 13 ರಂದು ದತ್ತಪೀಠದಲ್ಲಿ ದತ್ತ ಪಾದುಕೆ ದರ್ಶನ ಪಡೆಯಲಿದ್ದಾರೆ.
ಇನ್ನು ಈ ವೇಳೆ ಶ್ರೀರಾಮಸೇನೆ ರಾಜ್ಯ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಮಾತನಾಡಿದ್ದಾರೆ. ಪ್ರತಿ ವರ್ಷ ಬರೋದು, ಹೆಣ ಇಲ್ಲದ ಗೋರಿ ನೋಡೋದು ವಾಪಸ್ ಹೋಗೋದು. ಎಚ್ಚರಿಕೆ ನೀಡಿ, ನೀಡಿ ಬೇಜಾರು, ಆಕ್ರೋಶವಾಗಿದೆ. ನಮಗೆ ಈ ಬಿಜೆಪಿ ಸರ್ಕಾರದ ಮೇಲೆ ಹೇಸಿಗೆ ಬರುತ್ತಿದೆ. ಧರ್ಮದ ವಿಚಾರದಲ್ಲಿ ಡ್ರಾಮಾ ಒಳ್ಳೆದಲ್ಲ. ತಕ್ಷಣ ಏನಾದ್ರು ಆಗಲಿ ಎಂದು ಗಟ್ಟಿ ನಿರ್ಧಾರ ಮಾಡಿ. ಕೂಡಲೇ ದತ್ತಪೀಠವನ್ನ ಹಿಂದೂಗಳ ಪೀಠವೆಂದು ಆದೇಶಿಸಿ, ಹಿಂದೂ ಅರ್ಚಕರ ನೇಮಿಸಿ. 13ನೇ ತಾರೀಖಿನೊಳಗೆ ಅರ್ಚಕರ ನೇಮಿಸದಿದ್ದರೆ ಪರಿಸ್ಥಿತಿ ಕಠಿಣವಾಗುತ್ತೆ. ಹೇಗೆ ಬಿಜೆಪಿ ಅಧ್ಯಕ್ಷರ ಕಾರು ಅಲುಗಾಡಿತ್ತೋ, ಅದೇ ರೀತಿ ಸರ್ಕಾರ ಅಲುಗಾಡುತ್ತೆ.
ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸದಿದ್ದರೆ ಯಡಿಯೂರಪ್ಪರ ಪೀಠ ಹೋಗುತ್ತೆ ಎಂದು ಹೇಳಿದ್ದೆ. ದತ್ತ ಗುರುಗಳ ಶಾಪದಿಂದ ಯಡಿಯೂರಪ್ಪ ಪೀಠ ಕಳ್ಕೊಂಡ್ರು. ಈಗ ಬೊಮ್ಮಾಯಿಗೂ ಹೇಳ್ತಿದ್ದೀವಿ, ಮುಂದೆ ಸರ್ಕಾರ ಬರಬೇಕಂದ್ರೆ ತಕ್ಷಣ ದತ್ತಪೀಠವನ್ನ ಹಿಂದೂಗಳಿಗೆ ಒಪ್ಪಿಸಿ. ಇಲ್ಲವಾದರೆ, ಯಡಿಯೂರಪ್ಪನವರಿಗೆ ಆದ ಪರಿಸ್ಥಿತಿಯೇ ನಿಮಗೂ ಆಗುತ್ತೆ. ಎಂದು ಚಿಕ್ಕಮಗಳೂರು ನಗರದಲ್ಲಿ ದತ್ತಮಾಲಾಧಾರಣೆ ಬಳಿಕ ಗಂಗಾಧರ್ ಕುಲಕರ್ಣಿ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:53 pm, Mon, 7 November 22