ಅಕ್ರಮ ವಲಸಿಗರು ಬೇಕೆಂದೇ ಸಣ್ಣಪುಟ್ಟ ಕೇಸ್ ಹಾಕಿಸಿಕೊಳ್ತಾರೆ; ವಲಸಿಗರ ಅಕ್ರಮದ ಬಗ್ಗೆ ಆರಗ ಜ್ಞಾನೇಂದ್ರ ಹೇಳಿಕೆ
ಪ್ರಕರಣ ಮುಗಿಯೋವರೆಗೂ ಹೊರಗೆ ಹೋಗೋ ಹಾಗಿಲ್ಲ. ಇಲ್ಲೇ ನೆಲೆಸುವ ಪ್ರಯತ್ನವೂ ಆಗುತ್ತಿದೆ. ಈಗ ಅಂತವರನ್ನ ಹೊರ ಕಳುಹಿಸುವ ಪ್ರಯತ್ನ ನಡೆಯುತ್ತಿದೆ. ವೀಸಾ ಅವಧಿ ಮುಗಿದವರನ್ನ ಅರೆಸ್ಟ್ ಮಾಡಬೇಕು, ಇಲ್ಲಾ ಹೊರ ದೂಡಬೇಕು.
ಚಿಕ್ಕಮಗಳೂರು: ಬೆಂಗಳೂರು ನಗರದಲ್ಲಿ ಅಕ್ರಮ ವಲಸಿಗರದ್ದು ಭಾರೀ ಸಮಸ್ಯೆ ಇದೆ. ಅವರು ಬೇಕೆಂದೇ ಸಣ್ಣಪುಟ್ಟ ಕೇಸ್ ಹಾಕಿಸಿಕೊಳ್ಳುತ್ತಾರೆ. ಪ್ರಕರಣ ಮುಗಿಯೋವರೆಗೂ ಹೊರಗೆ ಹೋಗೋ ಹಾಗಿಲ್ಲ. ಇಲ್ಲೇ ನೆಲೆಸುವ ಪ್ರಯತ್ನವೂ ಆಗುತ್ತಿದೆ. ಈಗ ಅಂತವರನ್ನ ಹೊರ ಕಳುಹಿಸುವ ಪ್ರಯತ್ನ ನಡೆಯುತ್ತಿದೆ. ವೀಸಾ ಅವಧಿ ಮುಗಿದವರನ್ನ ಅರೆಸ್ಟ್ ಮಾಡಬೇಕು, ಇಲ್ಲಾ ಹೊರ ದೂಡಬೇಕು. ಬೆಂಗಳೂರಲ್ಲಿ ಈ ಸಮಸ್ಯೆ ಇರುವುದನ್ನು ವಿಶೇಷವಾಗಿ ಹೇಳಿದ್ದೀನಿ ಎಂದು ಚಿಕ್ಕಮಗಳೂರಿನಲ್ಲಿ ಇಂದು (ಆಗಸ್ಟ್ 15) ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ನೆರೆಯ ದೇಶಗಳಾದ ಶ್ರೀಲಂಕಾ ಸಹಿತ ಆಫ್ರಿಕಾ, ಬಾಂಗ್ಲಾದೇಶ, ಪಾಕಿಸ್ತಾನದ ಅಕ್ರಮ ವಲಸಿಗರು ಇರುವುದು ಕೆಲವಾರು ಪ್ರಕರಣಗಳ ಮೂಲಕ ಬೆಳಕಿಗೆ ಬಂದಿತ್ತು. ಅವರು ಅಕ್ರಮವಾಗಿ ಇಲ್ಲಿಂದ ವಿದೇಶಕ್ಕೆ ತೆರಳವುದು, ಸ್ಥಳೀಯರ ಬಳಿ ಕಾರ್ಮಿಕರಾಗಿ ದುಡಿಯುತ್ತಿರುವ ಬಗ್ಗೆ ಹೇಳಿ ಇಲ್ಲಿ ಇರುತ್ತಿರುವುದು ತಿಳಿದುಬಂದಿತ್ತು. ಭಾರತದಲ್ಲಿ ಆಧಾರ್ ಕಾರ್ಡ್ ಕೂಡ ಮಾಡಿಸಿಕೊಳ್ಳುತ್ತಿದ್ದ ಬಗ್ಗೆ ತಿಳಿದುಬಂದಿತ್ತು. ನಂತರ ವಿದೇಶಕ್ಕೆ ಮಾನವ ಕಳ್ಳಸಾಗಣೆ ಮಾಡುತ್ತಿರುವ ಪ್ರಕರಣಗಳನ್ನೂ ಪೊಲೀಸರು ಪತ್ತೆ ಹಚ್ಚಿದ್ದರು.
ಬಾಂಗ್ಲಾ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ತನಿಖೆ ವೇಳೆ ಬೃಹತ್ ಮಾನವ ಕಳ್ಳಸಾಗಣೆ ವಿಚಾರ ಬಹಿರಂಗವಾಗಿತ್ತು. ಮಾನವ ಕಳ್ಳಸಾಗಣೆ ದಂಧೆಯ ಕಿಂಗ್‌ಪಿನ್ ಸೇರಿ ನಾಲ್ವರನ್ನು ಬಂಧಿಸಲಾಗಿತ್ತು. ಬೆಂಗಳೂರು ಪೊಲೀಸರು ನೀಡಿದ ಮಾಹಿತಿ ಮೇರೆಗೆ ಬಾಂಗ್ಲಾದಲ್ಲಿ ಆರೋಪಿಗಳನ್ನು ಅಲ್ಲಿನ ಪೊಲೀಸರು ಬಂಧಿಸಿದ್ದರು.
ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿಯೂ ಈ ಬಗ್ಗೆ ಸಾಕಷ್ಟು ಚರ್ಚೆಗಳಾಗಿತ್ತು. ಕರ್ನಾಟಕದಲ್ಲಿರುವ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಕ್ರಮ ವಲಸಿಗರನ್ನು ರಾಜ್ಯದಿಂದ ಹೊರಕ್ಕೆ ಕಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜೂನ್ 13 ರಂದು ತಿಳಿಸಿದ್ದರು. ಮಾಧ್ಯಮದ ಜೊತೆ ಮಾತನಾಡಿದ ಅವರು, ಸಂಬಂಧಪಟ್ಟ ಅಧಿಕಾರಿಗಳಿಗೆ ರಾಜ್ಯದಲ್ಲಿ ಇರುವ ಅಕ್ರಮ ವಲಸಿಗರನ್ನು ಪತ್ತೆಹಚ್ಚಲು ತಿಳಿಸಲಾಗಿದೆ ಎಂದು ಹೇಳಿದ್ದರು.
ಇದನ್ನೂ ಓದಿ: ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಮಾಡುವೆ: ಗೃಹ ಸಚಿವ ಆರಗ ಜ್ಞಾನೇಂದ್ರ
ಝೀರೋ ಟ್ರಾಫಿಕ್ ಬೇಡ ಎಂದಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಝೀರೋ ಟ್ರಾಫಿಕ್ ಬಳಸಿದರು!
(Home Minister Araga Jnanendra on Illegal Migrants Immigrants in Bengaluru at Chikkamagaluru)