ಚಿಕ್ಕಮಗಳೂರು: ಸ್ಥಗಿತಗೊಂಡ ರಾಜ್ಯದ ಮೊದಲ ಶುದ್ಧಗಂಗಾ ನೀರಿನ ಘಟಕ, ಗ್ರಾಮಸ್ಥರ ಆಕ್ರೋಶ
ರಾಜ್ಯದಲ್ಲೇ ಮೊಟ್ಟ ಮೊದಲು ಶುದ್ಧಗಂಗಾ ಕುಡಿಯುವ ನೀರಿನ ಘಟಕ ಆರಂಭವಾಗಿದ್ದು, ಚಿಕ್ಕಮಗಳೂರು ಜಿಲ್ಲೆಯಲ್ಲಿ. ಈ ಘಟಕದ ಉದ್ಘಾಟನೆಗಾಗಿ ಅಂದು ಸಚಿವರು, ಸಂಸದರು, ಶಾಸಕರ ದಂಡೇ ಬಂದಿತ್ತು. ಆದರೆ, ಇದೀಗ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿಯ ನಿರ್ಲಕ್ಷ್ಯದಿಂದ ಕಳೆದ 7-8 ವರ್ಷಗಳಿಂದ ರಾಜ್ಯದ ಮೊಟ್ಟ ಮೊದಲ ಶುದ್ಧಗಂಗಾ ನೀರಿನ ಘಟಕ ಸ್ಥಗಿತಗೊಂಡಿದೆ. ಇದರಿಂದ ಜನರು ಶುದ್ಧ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದಾರೆ.

ಚಿಕ್ಕಮಗಳೂರು, ಏಪ್ರಿಲ್ 18: ಪ್ರತಿ ಹಳ್ಳಿ ಹಳ್ಳಿಗೂ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು ಎಂಬ ಮಹತ್ವಕಾಂಕ್ಷೆಯಿಂದ ಸರ್ಕಾರ ಶುದ್ಧಗಂಗಾ ಕುಡಿಯುವ ನೀರಿನ ಘಟಕ (Shuddhanganga Drinking Water Unit) ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಗಾಗಿ ಕೋಟ್ಯಾಂತರ ರೂಪಾಯಿ ಹಣ ಖರ್ಚು ಮಾಡುತ್ತಿದೆ. ಸರ್ಕಾರದ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಮೊಟ್ಟ ಮೊದಲ ಬಾರಿಗೆ ಸ್ಥಾಪನೆಯಾಗಿದ್ದು, ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಕಡೂರು (Kadur) ತಾಲೂಕಿನ ಎಲ್. ಅಗ್ರಹಾರ ತಾಂಡ್ಯದಲ್ಲಿ.
2015ರಲ್ಲಿ ಆರಂಭವಾದ ಈ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಎರಡೇ ವರ್ಷದಲ್ಲಿ ಅಂದರೆ 2017ರಲ್ಲಿ ಸ್ಥಗಿತಗೊಂಡಿದೆ. ಈ ಮೂಲಕ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಹಳ್ಳ ಹಿಡಿದಿದೆ. ಈ ಊರಿನಲ್ಲಿ ಹೆಚ್ಚಾಗಿ ಲಂಬಾಣಿ ಸಮುದಾಯದ ಜನರು ವಾಸಿಸುತ್ತಿದ್ದಾರೆ. ಎಲ್ಲರೂ ಕೂಲಿ-ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಒಮ್ಮೊಮ್ಮೆ ಮನೆಯ ಗಂಡು ಮಕ್ಕಳು ಕೆಲಸಕ್ಕೆಂದು ಹೊರಗಡೆ ಹೋದರೇ ಬರುವುದು ಎರಡು ಮೂರು ದಿನಗಳಾಗುತ್ತದೆ. ಈ ವೇಳೆ, ಮಹಿಳೆಯರು ಪಕ್ಕದ ನಾಗೇನಹಳ್ಳಿ ಅಥವಾ ಬಾಣೂರಿಗೆ ಹೋಗಿ ಕುಡಿಯುವ ನೀರು ತರುತ್ತಾರೆ. ಒಂಟಿ ಮಹಿಳೆಯರು, ವೃದ್ಧರು 2-3 ಕಿ.ಮೀ ಹೋಗಿ ನೀರು ತರುವುದು ಕಷ್ಟವಾಗಿದೆ ಎಂದು ಗ್ರಾಮಸ್ಥೆ ಶಕುಂತಲಾ ಹೇಳಿದ್ದಾರೆ.
ಗ್ರಾಮೀಣ ಪ್ರದೇಶದ ಜನರ ಆರೋಗ್ಯ ಚೆನ್ನಾಗಿರಲಿ, ಎಲ್ಲರೂ ಶುದ್ಧ ನೀರು ಕುಡಿಯಲಿ ಅಂತ ಸರ್ಕಾರ ಒಂದೊಳ್ಳೆ ಯೋಜನೆ ಜಾರಿಗೆ ತಂದಿದೆ. ಆದರೆ, ಸರಿಯಾದ ನಿರ್ವಹಣೆ ಇಲ್ಲದೆ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಸ್ಥಗಿತಗೊಂಡು 7-8 ವರ್ಷಗಳೇ ಕಳೆದರೂ ಕೂಡ ಇದನ್ನು ರಿಪೇರಿ ಮಾಡಿಸಲು ಮಾತ್ರ ಯಾರೂ ಮುಂದಾಗಿಲ್ಲ. ಈ ಬಗ್ಗೆ ಗ್ರಾಮ ಪಂಚಾಯಿತಿ, ಶಾಸಕರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ CEO ಅವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.
ದುಡ್ಡಿದ್ದವರು ತಮ್ಮ ತಮ್ಮ ಮನೆಗಳಲ್ಲಿ ವಾಟರ್ ಫಿಲ್ಟರ್ ಹಾಕಿಸಿಕೊಂಡಿದ್ದಾರೆ. ಬೈಕ್ ಇದ್ದವರು, ಪಕ್ಕದ ಗ್ರಾಮಕ್ಕೆ ಹೋಗಿ ಕುಡಿಯುವ ನೀರು ತರುತ್ತಾರೆ. ನಮ್ಮಂತ ಬಡವರು ಏನು ಮಾಡುವುದು? ಇನ್ನೂ ಒಬ್ಬಂಟಿಯಾಗಿ ವಾಸಿಸುವ ಮಹಿಳೆಯರು, ವಯೋ ವೃದ್ಧರು ಏನು ಮಾಡಬೇಕೆಂದು ಗ್ರಾಮಸ್ಥ ರಮೇಶ್ ನಾಯ್ಕ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಮನವಿ ಮಾಡಿ ನಾವು ಬೇಸತ್ತಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಬೇಗ ರಿಪೇರಿ ಮಾಡಿಸಬೇಕು. ಇಲ್ಲದಿದ್ದರೇ ನೋಡುವವರೆಗೂ ನೋಡಿ ಘಟಕವನ್ನು ಕಿತ್ತು ಬಿಸಾಕುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಸಪ್ತಪದಿ ತುಳಿದ ಎದುರು ಬದುರು ಮನೆಯ ಹಿಂದೂ-ಮುಸ್ಲಿಂ ಜೋಡಿ!
ಒಟ್ಟಿನಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ಜನರು ಶುದ್ಧ ನೀರು ಕುಡಿಬೇಕು ಅಂತ ಸರ್ಕಾರ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡುತ್ತಿದೆ. ಇದರ ನಿರ್ವಣೆಗಾಗಿ ಪ್ರತೀ ವರ್ಷ ಲಕ್ಷಾಂತರ ರೂಪಾಯಿ ಮೀಸಲಿಡುತ್ತಿದ್ದರೂ ಕೂಡ ರಾಜ್ಯದ ಮೊದಲ ಶುದ್ಧಗಂಗಾ ಕುಡಿಯುವ ನೀರಿನ ಘಟಕ ಸೇರಿದಂತೆ ರಾಜ್ಯಾದ್ಯಂತ ವಿವಿಧ ಹಳ್ಳಿಗಳಲ್ಲಿರುವ ಸಾವಿರಾರು ಘಟಗಳು ಮಾತ್ರ ಸ್ಥಗಿತಗೊಂಡು ತುಕ್ಕು ಹಿಡಿಯುತ್ತಿವೆ. ಸರ್ಕಾರದ ಹಣ ಎಲ್ಲಿ ಪೋಲಾಗುತ್ತಿದೆ ಎಂಬುವುದರ ಬಗ್ಗೆ ಅಧಿಕಾರಿಗಳು ಉತ್ತರಿಸಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Fri, 18 April 25




