ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

ಚಿಕ್ಕಮಗಳೂರು ಜಿಲ್ಲಾದ್ಯಂತ ಕಳೆದೊಂದು ವಾರದಿಂದ ಧಾರಾಕಾರವಾಗಿ ಮಳೆ ಸುರಿದಿದ್ದು, ಇದೀಗ ಕೊಂಚ ಬಿಡುವು ಕೊಟ್ಟಿದೆ. ಆದರೆ ಮಳೆಯಿಂದ ಉಂಟಾಗುತ್ತಿರುವ ಅವಾಂತರ ಮಾತ್ರ ಕಡಿಮೆಯಾಗಿಲ್ಲ. ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ‌ಸುರಿದ ಮಳೆಯಿಂದ ಗುಡ್ಡ ಕುಸಿತ ಸಂಭವಿಸಿದೆ. ಹೀಗಾಗಿ ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ.

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಮುಳ್ಳಯ್ಯನಗಿರಿ ಬೆಟ್ಟ
Edited By: ವಿವೇಕ ಬಿರಾದಾರ

Updated on: Jul 23, 2024 | 9:30 AM

ಚಿಕ್ಕಮಗಳೂರು, ಜುಲೈ 23: ಚಿಕ್ಕಮಗಳೂರಿನ (Chikkamagaluru) ಮುಳ್ಳಯ್ಯನಗಿರಿಗೆ (Mullayanagiri) ಪ್ರವಾಸ ಕೈಗೊಳ್ಳಬೇಕು ಎಂದು ಪ್ಲ್ಯಾನ್​ ಹಾಕಿಕೊಂಡವರಿಗೆ ಬ್ಯಾಡ್​ ನ್ಯೂಸ್​. ನಿರಂತರವಾಗಿ ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ‌ಸುರಿದ ಮಳೆಯಿಂದ ಮುಳ್ಳಯ್ಯನಗಿರಿ, ದತ್ತಪೀಠಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಭೂ ಕುಸಿತ, ಗುಡ್ಡ ಕುಸಿತವಾಗಿದ್ದು ಒಂದು ವಾರಗಳ ಕಾಲ‌ ಪ್ರವಾಸಿಗರಿಗೆ ಚಂದ್ರದ್ರೋಣ ಪರ್ವತದ ಸಾಲಿನಲ್ಲಿರುವ ಮುಳ್ಳಯ್ಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಹೊನ್ನಮ್ಮನ ಹಳ್ಳ ಪ್ರವೇಶಕ್ಕೆ ಅವಕಾಶವಿಲ್ಲ. ಜುಲೈ 31ರ ವರೆಗೂ ಮುಳ್ಳಯ್ಯನಗಿರಿ ಭೇಟಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಆದೇಶ ಹೊರಡಿಸಿದ್ದಾರೆ. ಸ್ಥಳೀಯ ವಾಹನಗಳಿಗೆ ಮಾತ್ರ ಸಂಚರಿಸಲು ಅವಕಾಶ ನೀಡಲಾಗಿದೆ.

ಪ್ರವಾಸಿಗರು ತೆರಳದಂತೆ ಕೈಮರ ಚೆಕ್ಪೋಸ್ಟ್ ಬಳಿ ಗೇಟ್ ಬಂದ್ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿ 169ರ ಮಂಗಳೂರು ಶೃಂಗೇರಿ ಮಾರ್ಗ ಮಧ್ಯೆ ನೆಮ್ಮಾರು ಗ್ರಾಮದ ಬಳಿ ಹತ್ತಾರು ಕಡೆ ಭೂ ಕುಸಿತ, ಗುಡ್ಡ ಕುಸಿತವಾಗಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸಲಾಗಿದ್ದು 12,000 ಟನ್ ತೂಕದ ಲಾರಿ ಸೇರಿದಂತೆ ವಾಹನಗಳಿಗೆ ಸಂಚಾರ ನಿಷೇಧ ಮಾಡಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಕೊಂಚ ಮಳೆ ವಿರಾಮ ನೀಡಿದ್ದು ಒಂದು ವಾರಗಳ‌ ಕಾಲ ಸುರಿದ ಮಳೆ‌ ವಾಡಿಕೆ‌ ಪ್ರಮಾಣದ 25% ಅಷ್ಟು ಹೆಚ್ಚಿದ್ದು ಗಾಳಿ ಸಹಿತ ಸುರಿದ ಮಳೆ ಒಂದೇ ವಾರಕ್ಕೆ ನೂರು ಕೋಟಿ ನಷ್ಟ ಮಾಡಿದೆ
ರಾಜ್ಯದ ಅತ್ಯಂತ ಎತ್ತರದ ಶಿಖರ ಮುಳ್ಳಯ್ಯನಗಿರಿ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಪ್ರತಿ ದಿನ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ರಾಜ್ಯ, ದೇಶದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಾರೆ. ವೀಕೆಂಡ್​, ರಜಾ ದಿನ ಬಂತೆಂದರೆ ಇಲ್ಲಿ ಜನ ಪ್ರವಾಹವೇ ಕಂಡು ಬರುತ್ತದೆ. ಆದರೆ ಇದೀಗ, ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಧಾರಾಕಾರ ಮಳೆಗೆ ಗುಡ್ಡ ಕುಸಿದು, ಬೃಹತ್​ ಗಾತ್ರದ ಕಲ್ಲು, ಮಣ್ಣು, ಮರ ರಸ್ತೆಗೆ ಬಿಳುತ್ತಿವೆ. ಹೀಗಾಗಿ ಮುಳ್ಳಯ್ಯನಗಿರಿಗೆ ಪ್ರವೇಶ ನಿರ್ಬಂಧಿಸಿದ್ದು, ಪ್ರವಾಸಿಗರಲ್ಲಿ ನಿರಾಶೆ ಮೂಡಿದೆ.

ಇದನ್ನೂ ಓದಿ: ಶೃಂಗೇರಿ ಶಾರದಾಂಬೆ ದೇವಸ್ಥಾನದಲ್ಲಿ ವಸ್ತ್ರ ಸಂಹಿತೆ ಜಾರಿ, ಯಾರು ಯಾವ ಡ್ರೆಸ್ ಹಾಕ್ಬೇಕು ಗೊತ್ತಾ?

100 ಕೋಟಿ ನಷ್ಟ

ಒಂದು ವಾರ ಸುರಿದ ಮಳೆಯಿಂದ ಸರ್ಕಾರಕ್ಕೆ 100 ಕೋಟಿ ರೂ. ನಷ್ಟವಾಗಿದೆ. ಕಳೆದ ಒಂದು ವಾರದಿಂದ ಚಿಕ್ಕಮಗಳೂರು, ಕೊಪ್ಪ, ಶೃಂಗೇರಿ, ಕಳಸ‌, ಮೂಡಿಗೆರೆ, ಎನ್​ಆರ್​ ಪುರ ತಾಲೂಕು ಸೇರಿದಂತೆ ಜಿಲ್ಲೆಯಾದ್ಯಂತ ವರುಣ ಅಬ್ಬರಿಸಿದ್ದಾನೆ. ಒಂದು ಕಡೆ ವರುಣಾರ್ಭಟಕ್ಕೆ ಜನ ಆತಂಕಗೊಂಡರೆ ಮತ್ತೊಂದು ಕಡೆ ಆರ್ಭಟಿಸುತ್ತಿದ್ದ ಹೇಮಾವತಿ, ತುಂಗಾ, ಭದ್ರಾ ನದಿಗಳು ನೆರೆ ಆತಂಕ ಸೃಷ್ಟಿ ಮಾಡಿತ್ತು.

ಮಳೆ ಜೊತೆ ಬಿಸುತ್ತಿದ್ದ ಬಿರುಗಾಳಿ ಮಲೆನಾಡಿಗರ ಬದುಕನ್ನ ಅಕ್ಷರಶಃ ಕತ್ತಲೆಗೆ ದೂಡಿದೆ, ಲೋಕೋಪಯೋಗಿ ಇಲಾಖೆಗೆ 58 ಕೋಟಿ, PRED ಇಲಾಖೆಗೆ 41 ಕೋಟಿ ಜಸ್ಟ್ ಒಂದು ವಾರದಲ್ಲಿ ಮಳೆಯಿಂದ ನಷ್ಟವಾಗಿದೆ. ಜಿಲ್ಲೆಯಾದ್ಯಂತ 192 ಮನೆಗಳಿಗೆ ಹಾನಿಯಾಗಿದ್ರೆ, 41 ಸೇತುವೆ, 1849 ವಿದ್ಯುತ್ ಕಂಬಗಳು ನಾಶವಾಗಿದೆ. ಸುರಿದ ಮಳೆಗೆ 8.5 ಕಿಮೀ ಅಷ್ಟು ರಾಜ್ಯ ಹೆದ್ದಾರಿ ರಸ್ತೆಗೆ ಹಾನಿಯಾಗಿದ್ದರೆ ಚಾರ್ಮಾಡಿ, ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಭೂ ಕುಸಿತ, ಗುಡ್ಡ ಕುಸಿತವಾಗಿದೆ. ಮನೆ ಕಳೆದುಕೊಂಡ 77 ಜನರಿಗೆ ಜಿಲ್ಲಾಡಳಿತ ಪರಿಹಾರ ನೀಡಿದ್ದು, ಕಾಳಜಿ ಕೇಂದ್ರಗಳನ್ನ ತೆರೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Ashwith Mavinaguni

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More
Follow Us