ಸೆರೆ ಕಾರ್ಯಾಚರಣೆ ಸುಳಿವು ಸಿಗುತ್ತಿದ್ದಂತೆ ಒಂಟಿ ಸಲಗ ಎಸ್ಕೇಪ್​​: ಸುಮಾರು 20 ಕಿ.ಮೀ. ದೂರದಲ್ಲಿ ಪತ್ತೆ

ಸೆರೆ ಕಾರ್ಯಾಚರಣೆಯ ಸುಳಿವು ಸಿಗುತ್ತಿದ್ದಂತೆ ಮತ್ತಾವರ ಪ್ಲಾಂಟೇಶನ್​​ ಮತ್ತು ನೆಲ್ಲೂರು ಗುಡ್ಡ ಪ್ರದೇಶದಿಂದ ಕಾಲ್ಕಿತ್ತ ಒಂಟಿ ಸಲಗ 20 ಕಿ.ಮೀ ದೂರದ ಮೂಡಿಗೆರೆ ತಾಲೂಕಿನ ನಂದೀಪುರ ಕಾಫಿ ತೋಟದಲ್ಲಿ ಪತ್ತೆಯಾಗಿದೆ. ಇತ್ತ ಕಾಡಾನೆ ಹಾವಳಿ ಖಂಡಿಸಿ ಮಾಕೋನಹಳ್ಳಿ-ನಂದೀಪುರ ಗ್ರಾಮ ಪಂಚಾಯತ್​​ ವ್ಯಾಪ್ತಿಯ ನಿವಾಸಿಗಳು ಬೇಲೂರು-ಮೂಡಿಗೆರೆ ರಸ್ತೆ ತಡೆದು ಪ್ರತಿಭಟಿಸಿದ್ದಾರೆ.

ಸೆರೆ ಕಾರ್ಯಾಚರಣೆ ಸುಳಿವು ಸಿಗುತ್ತಿದ್ದಂತೆ ಒಂಟಿ ಸಲಗ ಎಸ್ಕೇಪ್​​: ಸುಮಾರು 20 ಕಿ.ಮೀ. ದೂರದಲ್ಲಿ ಪತ್ತೆ
ಒಂಟಿ ಸಲಗ
Edited By:

Updated on: Nov 28, 2026 | 11:05 AM

ಚಿಕ್ಕಮಗಳೂರು, ನವೆಂಬರ್​​ 28: ಸೆರೆ ಕಾರ್ಯಾಚರಣೆಯ ಸುಳಿವು ಸಿಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದ್ದ ಪುಂಡಾನೆ ಸ್ಥಳಾಂತರವಾಗಿದೆ. ಮತ್ತಾವರ ಪ್ಲಾಂಟೇಶನ್​​ ಮತ್ತು ನೆಲ್ಲೂರು ಗುಡ್ಡ ಪ್ರದೇಶದಿಂದ ನಿನ್ನೆ ರಾತ್ರಿಯೇ ಕಾಲ್ಕಿತ್ತಿರುವ ಒಂಟಿ ಸಲಗ ಬೇಲೂರು ಕಡೆ ಮುಖ ಮಾಡಿದೆ. ನಿನ್ನೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ 6 ಕುಮ್ಕಿ ಆನೆಗಳ ಬಳಸಿ ಒಂಟಿ ಸಲಗದ ಸೆರೆಗೆ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಈ ವೇಳೆ ಅಯ್ಯಪ್ಪ ಆನೆ ಗಾಬರಿಗೊಂಡಿದ್ದ ಪರಿಣಾಮ ಅರಣ್ಯ ಇಲಾಖೆಯ ಅಧಿಕಾರಿಗಳು ಕಾರ್ಯಚರಣೆ ಸ್ಥಗಿತ ಮಾಡಿದ್ದರು.

ಸುಮಾರು 20 ಕಿಲೋಮೀಟರ್ ದೂರ ಕ್ರಮಿಸಿರುವ ಆನೆ

Wild Elephant Menace: ಕಾರ್ಯಾಚರಣೆ ವೇಳೆ ಕುಮ್ಕಿ ಆನೆಗಳ ಮೇಲೆ ದಾಳಿಗೆ ಬಂದಿದ್ದ ಸಲಗ

Loading...

ನಾಪತ್ತೆಯಾಗಿರುವ ಆನೆಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ನಡೆಸಿದಾಗ ಅದೀಗ ಮೂಡಿಗೆರೆ ತಾಲೂಕಿನ ನಂದೀಪುರ ಕಾಫಿತೋಟದಲ್ಲಿ ಕಂಡುಬಂದಿದೆ. ಒಂದು ಕಡೆ ನಿಲ್ಲದೆ ಓಡಾಟ ನಡೆಸುತ್ತಿರುವ ಒಂಟಿ ಸಲಗ, ಮಾಕೋನಹಳ್ಳಿ ಗ್ರಾಮದ ತೋಟದಲ್ಲಿರುವ 15 ಕಾಡಾನೆಗಳ ಹಿಂಡು ಹುಡುಕಿ ತೆರಳುತ್ತಿದೆ. ನಿನ್ನೆ ಇದ್ದ ಜಾಗದಿಂದ ಸುಮಾರು 20 ಕಿಲೋಮೀಟರ್ ದೂರವನ್ನು ಆನೆ ಸಾಗಿದ್ದು, ಒಂಟಿ ಸಲವನ್ನು ಅರಣ್ಯ ಇಲಾಖೆ ಸಿಬ್ಬಂದಿ ಸಹ ಬೆನ್ನತ್ತಿದ್ದಾರೆ. ಕಾಡಾನೆಯ ಚಲನವಲನಗಳ ಮೇಲೆ ಕಣ್ಣಿಡಲಾಗಿದೆ.

ಇದನ್ನೂ ಓದಿ: ಗಜಪಡೆ ದಾಂಧಲೆಗೆ ಕಾಫಿ ತೋಟ ಸರ್ವನಾಶ: 39 ಕಾಡಾನೆಗಳ ಸಂಚಾರಕ್ಕೆ ಬೆಚ್ಚಿಬಿದ್ದ ಮೂಡಿಗೆರೆ-ಬೇಲೂರು ಗಡಿ ಭಾಗದ ಜನ

ಬೇಲೂರು-ಮೂಡಿಗೆರೆ ರಸ್ತೆ ತಡೆದು ಪ್ರತಿಭಟನೆ

ಮತ್ತೊಂದೆಡೆ ಕಾಡಾನೆಗಳ ಹಾವಳಿಯಿಂದ ಬೆಳೆ ನಾಶವಾಗುತ್ತಿದ್ದು, ಜೀವ ಭಯವೂ ಜನರನ್ನು ಕಾಡತೊಡಗಿದೆ. ಹೀಗಾಗಿ ಕಾಡಾನೆಗಳನ್ನ ಓಡಿಸುವಂತೆ ಪಟ್ಟು ಹಿಡಿದಿರುವ ಮಾಕೋನಹಳ್ಳಿ-ನಂದೀಪುರ ಗ್ರಾಮ ಪಂಚಾಯತ್​​ ವ್ಯಾಪ್ತಿಯ ನಿವಾಸಿಗಳು ಬೇಲೂರು-ಮೂಡಿಗೆರೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಕಾಡಾನೆಗಳನ್ನ ಮೂಡಿಗೆರೆ ಭಾಗಕ್ಕೆ ಓಡಿಸಿದಕ್ಕೆ ಆಕ್ರೋಶ ವ್ಯಕ್ತಪಡಿಸಿ ಇಂದಿನಿಂದ ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡಿನ ಮಾವಿನಗುಣಿ ಗ್ರಾಮದಿಂದ ಬೆಂಗಳೂರಿಗೆ ಬಂದು ಪತ್ರಿಕೋದ್ಯಮ ವೃತ್ತಿ ಆರಂಭಿಸಿ, ಹಾಯ್ ಬೆಂಗಳೂರು, ಜನಶ್ರೀ, ಕಸ್ತೂರಿ, ಟೈಮ್ಸ್ ನೌ ನಲ್ಲಿ ಕೆಲಸ ಮಾಡಿದ್ದು. ಸದ್ಯ ಟಿವಿ9 ಕನ್ನಡದಲ್ಲಿ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ನಿರ್ವಹಿಸುತ್ತಿದ್ದು. 8 ವರ್ಷಗಳ ಕಾಲ ರಾಜಕೀಯ, ಕ್ರೈಮ್ ಸೇರಿದಂತೆ ಚಿಕ್ಕಮಗಳೂರು ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು. ಉತ್ತಮ ಸಮಾಜಕ್ಕಾಗಿ ಟಿವಿ9 ಜೊತೆ ವೃತ್ತಿ ಜೀವನ ಸಾಗಿದೆ.

Read More
Loading...
Unable to load recommendations.
Follow Us