
ಚಿತ್ರದುರ್ಗ, ಮೇ 01: ಚಿತ್ರದುರ್ಗ ತಾಲೂಕಿನ ಕಾತ್ರಾಳ ಗ್ರಾಮದ ಕೆರೆ ಬಳಿ ಡಿವೈಡರ್‌ಗೆ ಇನ್ನೋವಾ ಕಾರು ಡಿಕ್ಕಿಯಾಗಿ (accident) ತಮಿಳುನಾಡು ಮೂಲದ ಮೂವರು ಸಾವನ್ನಪ್ಪಿರುವಂತಹ (death) ಘಟನೆ ನಡೆದಿದೆ. ಕಾರಿನಲ್ಲಿದ್ದ ಅರ್ಜುನ್(28), ಶರವಣ(31) ಮತ್ತು ಸೇಂದಿಲ್(29) ಮೃತರು. ಘಟನೆ ಸ್ಥಳದಲ್ಲೇ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಇಬ್ಬರು ಮೃತಪಟ್ಟಿದ್ದಾರೆ. ಸದ್ಯ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಾವಣಗೆರೆ: ಮೊಬೈಲ್ನಲ್ಲಿ ಮಾತನಾಡುತ್ತಾ ರೈಲ್ವೆ ಟ್ರ್ಯಾಕ್ ದಾಟುತ್ತಿದ್ದಾಗ ರೈಲು ಡಿಕ್ಕಿ ಹೊಡೆದು ಸ್ಥಳದಲ್ಲೇ ಯುವತಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹರಿಹರ ತಾಲ್ಲೂಕಿನ ಹರಿಹರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಬಳ್ಳಾರಿ ಮೂಲದ ಶ್ರಾವಣಿ (23) ಸಾವನ್ನಪ್ಪಿದ ಯುವತಿ. ಹರಿಹರ ನಗರ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.
ಇದನ್ನೂ ಓದಿ: ನೆಲಮಂಗಲ: ಗ್ಯಾಸ್ ಲಿಕೇಜ್ನಿಂದ ಹೊತ್ತಿ ಉರಿದ ಮನೆ, ಇಬ್ಬರು ಸಜೀವದಹನ, ನಾಲ್ವರ ಸ್ಥಿತಿ ಚಿಂತಾಜನಕ
ಮೈಸೂರಿನಲ್ಲಿ ಎಂಬಿಎ ಮಾಡುತ್ತಿದ್ದ ಶ್ರಾವಣಿ, ಶುಭ ಕಾರ್ಯಕ್ಕೆ ಸಂಬಂಧಿಕರ ಮನೆಗೆ ಬಂದಿದ್ದರು. ರಾತ್ರಿ ಮೈಸೂರಿಗೆ ಹೋಗಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದು, ಮೊಬೈಲ್ನಲ್ಲಿ ಮಾತನಾಡುತ್ತಾ ರೈಲು ಬರುವುದನ್ನು ಗಮನಿಸದೇ ರೈಲ್ವೆ ಟ್ರ್ಯಾಕ್ ದಾಟುವಾಗ ಅವಘಡ ಸಂಭವಿಸಿದೆ. ರೈಲು ಡಿಕ್ಕಿ ಹೊಡೆದ ರಭಸಕ್ಕೆ ಯುವತಿಯ ತಲೆಗೆ ಬಲವಾದ ಪೆಟ್ಟು ಬಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಪಾದಚಾರಿ ಯುವಕನಿಗೆ ಟ್ರಾಕ್ಟರ್ ಡಿಕ್ಕಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕೊಂಡದಹಳ್ಳಿಯಲ್ಲಿ ನಡೆದಿದೆ. ಕೆ.ಪಿ.ಸ್ವಾಮೀ (18) ಮೃತ ಯುವಕ. ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವಕ ಕ್ರಿಕೆಟ್ ಆಟವಾಡಿ ನಡೆದುಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಟ್ರಾಕ್ಟರ್ ಡಿಕ್ಕಿ ಹೊಡೆದಿದೆ. ಪರಿಣಾಮ ತಲೆಗೆ ಪೆಟ್ಟಾಗಿ ಸ್ಥಳದಲ್ಲಿಯೇ ಯುವಕ ಸಾವನ್ನಪ್ಪಿದ್ದಾನೆ. ಟ್ರಾಕ್ಟರ್ ಹಾಗೂ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಿದ್ಯುತ್ ಲೈನ್ ಬದಲಾವಣೆ ವೇಳೆ ಅವಘಡ ಸಂಭವಿಸಿ ಲೈನ್ ಮೆನ್ ಸಾವನ್ನಪ್ಪಿರುವಂತಹ ಘಟನೆ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ದೂಪದಹಳ್ಳಿ ಗ್ರಾಮದಲ್ಲಿ ನಡೆದಿದೆ. ಅಜ್ಜಯ್ಯ (28) ಮೃತ ಲೈನ್ ಮೆನ್.
ಇದನ್ನೂ ಓದಿ: ಬೆಂಗಳೂರಿನಲ್ಲಿ ಆಫ್ರಿಕಾದ 32 ವರ್ಷದ ಮಹಿಳೆಯ ಮೃತದೇಹ ಪತ್ತೆ: ಸಾವಿನ ಸುತ್ತ ಅನುಮಾನದ ಹುತ್ತ
ಲೈನ್ ಬದಲಾವಣೆ ಮಾಡುವಾಗ ತಪ್ಪು ಮಾಹಿತಿ ನೀಡಿರುವ ಆರೋಪ ಕೇಳಿಬಂದಿದೆ. ಹಿರಿಯ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದೆ ಲೈನ್ ಬದಲಾವಣೆ ಮಾಡಲು ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಕೊಟ್ಟೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:26 am, Thu, 1 May 25