Chitradurga News: ಟೊಮ್ಯಾಟೋ ಬೆಳೆದು ಕೈ ಸುಟ್ಟುಕೊಂಡ ರೈತರು; ಕೆ.ಜಿಗೆ 1 ರೂ, ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಕಂಗಾಲಾದ ರೈತ
ಕೋಟೆನಾಡಿನ ಕೆಲ ರೈತರು ಸಾಂಪ್ರದಾಯಿಕ ಕೃಷಿಯಿಂದ ಹೊರ ಬಂದು ಟೊಮ್ಯಾಟೋ ಬೆಳೆಯತ್ತ ಚಿತ್ತ ಹರಿಸಿದ್ದಾರೆ. ಅಂತೆಯೇ ಈ ವರ್ಷ ಟೊಮ್ಯಾಟೊ ಬೆಳೆ ಫಸಲೇನೋ ಉತ್ತಮವಾಗಿ ಬಂದಿದೆ. ಆದರೆ ಬೆಲೆ ಕುಸಿತದ ಪರಿಣಾಮ ರೈತನ ಶ್ರಮಕ್ಕೆ ತಕ್ಕ ಫಲ ಸಿಗದೆ ಕಂಗಾಲಾಗಿದ್ದಾನೆ.
ಚಿತ್ರದುರ್ಗ: ಹಗಲಿರುಳು ಕಷ್ಟಪಟ್ಟು ಬೆಳೆದ ಬೆಳೆ ಬಿಡಿಸದೆ ಜಮೀನಿನಲ್ಲೇ ಬಿಟ್ಟ ರೈತರು. ಟೊಮ್ಯಾಟೋ(Tomato) ದರ ಕುಸಿತದಿಂದಾಗಿ ರಸ್ತೆ ಬದಿ ಸುರಿದಿರುವ ಟೊಮ್ಯಾಟೋ ಬೆಳೆಗಾರರು. ಬೆಂಬಲ ಬೆಲೆ ನೀಡುವಂತೆ ಟೊಮ್ಯಾಟೋ ಬೆಳೆಗಾರರ ಆಗ್ರಹ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಜಿಲ್ಲೆಯ ಚಳ್ಳಕೆರೆ(Challakere) ತಾಲೂಕಿನ ಜಡೇಕುಂಟೆ ಗ್ರಾಮದ ಬಳಿ. ಹೌದು, ಚಿತ್ರದುರ್ಗ ಮತ್ತು ಚಳ್ಳಕೆರೆ ತಾಲೂಕಿನ ವಿವಿದೆಡೆ ರೈತರು ಟೊಮ್ಯಾಟೋ ಬೆಳೆಯನ್ನು ಬೆಳೆದಿದ್ದಾರೆ. ಈ ವರ್ಷ ಉತ್ತಮ ಬೆಳೆಯೇನೋ ಬಂದಿದೆ. ಆದ್ರೆ, ಒಂದು ಕೆಜಿ ಟೊಮ್ಯಾಟೋಗೆ 1 ರೂಪಾಯಿಗಿಂತ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ರೈತನ ಶ್ರಮ ಬಿಟ್ಟು ಕೃಷಿಗೆ ಹಾಕಿದ ಬಂಡವಾಳವೂ ಎದುರಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ. ಇನ್ನು ರೈತರು ‘ಎರಡು ಎಕರೆಯಲ್ಲಿ ಟೊಮ್ಯಾಟೋ ಬೆಳೆ ಬೆಳೆದಿದ್ದು ಉತ್ತಮ ಫಲ ಬಂದಾಗಲೇ ದರ ಕುಸಿತ ಆಗಿದೆ. ಸರ್ಕಾರ ಸೂಕ್ತ ಪರಿಹಾರ ಒದಗಿಸಬೇಕೆಂದು ಕೇಳಿಕೊಂಡಿದ್ದಾರೆ.
ಇನ್ನು ರೈತ ಮಹಿಳೆ ಗಂಗಮ್ಮ ಎನ್ನುವವರು ಸಹ 3 ಎಕರೆ ಪ್ರದೇಶದಲ್ಲಿ ಟೊಮ್ಯಾಟೋ ಬೆಳೆದಿದ್ದಾರೆ. ಆದ್ರೆ, ದಿಢೀರನೇ ಟೊಮ್ಯಾಟೋ ಬೆಲೆ ಕುಸಿತ ಆಗಿದ್ದು, ಪರಿಣಾಮ ಜಮೀನಿನಲ್ಲಿರುವ ಟೊಮ್ಯಾಟೋ ಬಿಡಿಸಿದರೂ ಪ್ರಯೋಜನವಿಲ್ಲದಂತಾಗಿದೆ. ಟೊಮ್ಯಾಟೋ ಬಿಡಿಸುವ ಹಣವೂ ಮೈಮೇಲೆ ಬರುತ್ತದೆ. ಹೀಗಾಗಿ, ಜಾನುವಾರುಗಳ ಪಾಲಾಗಲಿ ಎಂದು ಜಮೀನಿನಲ್ಲೇ ಬೆಳೆ ಬಿಟ್ಟು ಕಂಗಾಲಾಗಿ ಕುಳಿತಿದ್ದಾರೆ. ಇದೀಗ ಸರ್ಕಾರದ ನೆರವಿನ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡಿನಲ್ಲಿ ಚಿತ್ರದುರ್ಗ ಮತ್ತು ಚಳ್ಳಕೆರೆ ತಾಲೂಕಿನ ವಿವಿದೆಡೆ ನೂರಾರು ಎಕರೆ ಪ್ರದೇಶದಲ್ಲಿ ರೈತರು ಟೊಮ್ಯಾಟೋ ಬೆಳೆದಿದ್ದಾರೆ. ಆದ್ರೆ, ಟೊಮ್ಯಾಟೋ ಉತ್ತಮ ಫಲ ನೀಡಿದ ಸಂದರ್ಭದಲ್ಲೇ ಬೆಲೆ ಕುಸಿತ ಆಗಿದ್ದು, ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಹೀಗಾಗಿ, ಸರ್ಕಾರ ಟೊಮ್ಯಾಟೋಗೆ ಬೆಂಬಲ ಬೆಲೆ ಘೋಷಿಸಿ ರೈತರ ಕೈ ಹಿಡಿಯಬೇಕಿದೆ.
ವರದಿ: ಬಸವರಾಜ ಮುದನೂರ್ ಟಿವಿ9 ಚಿತ್ರದುರ್ಗ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ