ಬೆಳದ ಬೆಳೆಗೆ ಬೆಂಬಲ ಬೆಲೆ ಸಿಗದೆ ಪರದಾಡುತ್ತಿರುವ ರೈತರು, ಅಡ್ಡಕತ್ತರಿಯಲ್ಲಿ ಸಿಕ್ಕಂತಾದ ರೈತ
ಹೆಸರು ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿ ಎರಡು ತಿಂಗಳು ಕಳೆದರೂ ಧಾರವಾಡ ಜಿಲ್ಲೆಯಲ್ಲಿ ಒಂದೇ ಒಂದು ಕಾಳು ಖರೀದಿಯಾಗಿಲ್ಲ.
ರೈತರ ಕೃಷಿ ಉತ್ಪನ್ನಗಳಿಗೆ ಒಳ್ಳೆಯ ಬೆಂಬಲ ಬೆಲೆ ನೀಡಬೇಕು ಎನ್ನುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ಬೆಂಬಲ ಬೆಲೆ ಅಡಿಯಲ್ಲಿ ವಿವಿಧ ಕೃಷಿ ಉತ್ಪನ್ನಗಳನ್ನು ಖರೀದಿ ಮಾಡಿಕೊಂಡು ಬರುತ್ತೆ. ಹಾಗೆಯೇ ನಮ್ಮ ರಾಜ್ಯದಲ್ಲಿ ಹೆಸರು ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿ ಎರಡು ತಿಂಗಳು ಕಳೆದರೂ ಧಾರವಾಡ ಜಿಲ್ಲೆಯಲ್ಲಿ ಒಂದೇ ಒಂದು ಕಾಳು ಖರೀದಿಯಾಗಿಲ್ಲ. ಇದು ಈಗ ರೈತರಿಗೆ ಸಂಕಷ್ಟ ತಂದಿಟ್ಟಿದೆ.
ಧಾರವಾಡ ಜಿಲ್ಲೆಯ ಮುಂಗಾರು ಹಂಗಾಮಿನ ಪ್ರಮುಖ ಬೆಳೆಗಳಲ್ಲಿ ಹೆಸರು ಸಹ ಒಂದು. ಈ ಸಲದ ಮುಂಗಾರಿಗೆ ಸುಮಾರು 71 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೇಯಲಾಗಿತ್ತು. ಆದರೆ ಮಳೆಯ ಕಾಟದಿಂದ ಸಾಕಷ್ಟು ಪರದಾಡಿ ರೈತರು ಈಗ ಹೆಸರು ಉತ್ಪನ್ನ ತೆಗೆದಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಸರು ಕಾಳಿಗೆ 7750 ರೂಪಾಯಿ ಬೆಂಬಲ ಬೆಲೆ ಘೋಷಿಸಿ ಕೇಂದ್ರ ಸರ್ಕಾರ ಖರೀದಿ ಮಾಡಿಕೊಳ್ಳೋಕೆ ಮಂಜೂರಿ ನೀಡಿತ್ತು. ಅದರನ್ವಯ ಧಾರವಾಡ ಜಿಲ್ಲೆಯಲ್ಲಿ ಒಟ್ಟು 18 ಖರೀದಿ ಕೇಂದ್ರಗಳಲ್ಲಿ ಎರಡು ತಿಂಗಳ ಹಿಂದೆಯೇ ಆಯಾ ಕ್ಷೇತ್ರದ ಶಾಸಕರು ಪೂಜೆ ಸಹ ಮಾಡಿ ಚಾಲನೆಯನ್ನೂ ನೀಡಿದ್ದರು. ಆದರೆ ಬೆಳೆ ಬಂದ ಸಂದರ್ಭದಲ್ಲಿ ಮಳೆ ಸುರಿದಿದೆ. ಇದರಿಂದಾಗಿ ಹೆಸರಿನ ತೇವಾಂಶ ಎಫ್ಎಕ್ಯೂ ನಿಯಮದಡಿಯಲ್ಲಿ ಶೇ. 12 ಬರುತ್ತಿಲ್ಲ. ಹೀಗಾಗಿ ಎಲ್ಲಯೂ ಹೆಸರು ಖರೀದಿಯಾಗಿಲ್ಲ. ಹೀಗಾಗಿ ಆದಷ್ಟು ಬೇಗ ಖರೀದಿ ಮಾಡಬೇಕು. ಇಲ್ಲದೇ ಹೋದಲ್ಲಿ ಹೆಸರು ಸರಿಯಾಗಿ ಉಳಿಯೋದಿಲ್ಲ. ಹಾಳಾಗಿ ಹೋಗುತ್ತೆ ಅನ್ನೋದು ರೈತರ ಆತಂಕ.
ಪ್ರತಿ ಎಕರೆಗೆ ನಾಲ್ಕು ಕ್ವಿಂಟಾಲ್ದಂತೆ ಪ್ರತಿಯೊಬ್ಬ ರೈತನಿಂದ ಸುಮಾರು 15 ಕ್ವಿಂಟಾಲ್ವರೆಗೂ ಖರೀದಿ ಮಾಡಿಕೊಳ್ಳಲು ಅವಕಾಶವಿದೆ. ಆದರೆ ಖರೀದಿ ಕೇಂದ್ರ ಆರಂಭಗೊಂಡಾಗಿನಿಂದ ಕಳೆದ ಎರಡು ತಿಂಗಳಲ್ಲಿ ಎರಡು ಸಲ ಮಳೆಯಾಗಿದೆ. ಇದರಿಂದಾಗಿ ಹೆಸರು ಕಾಳುಗಳನ್ನು ಒಣಗಿಸಲು ಆಗಿಲ್ಲ. ಇನ್ನು ಎಷ್ಟೆ ಒಣಗಿಸಿದರು ಕೂಡ ತೇವಾಂಶ ಶೇಕಡಾ 15ಕ್ಕಿಂತ ಕಡಿಮೆ ಬರುತ್ತಲೇ ಇಲ್ಲ. ಹೀಗಾಗಿ ಆದಷ್ಟು ಬೇಗ ಖರೀದಿ ಆರಂಭಿಸಬೇಕಿದೆ. ಈ ಬಗ್ಗೆ ಸಾಕಷ್ಟು ಒತ್ತಾಯಗಳು ಸಹ ರೈತರಿಂದ ಕೇಳಿ ಬರುತ್ತಲೇ ಇವೆ.
ಈ ವಿಷಯ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ಸಹ ಬಂದಿದೆ. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಹಾಲಪ್ಪ ಆಚಾರ್ ಮಾತನಾಡಿ ನಾಫೇಡ್ ಸಂಸ್ಥೆಯ ಮೂಲಕ ಈ ಹೆಸರು ಖರೀದಿ ಮಾಡಿಕೊಳ್ಳಬೇಕಿದೆ. ಆ ಕಂಪನಿಯವರು ಶೇ. 12ಕ್ಕಿಂತ ಹೆಚ್ಚಿನ ತೇವಾಂಶ ಇರೋ ಹೆಸರು ಖರೀದಿಸೋದಿಲ್ಲ ಅಂತಾ ಷರತ್ತು ಇದೆ. ಹೀಗಾಗಿ ಇದರಲ್ಲಿ ಸಡಲಿಕೆ ಮಾಡೋ ಬಗ್ಗೆಯೂ ಸಂಸ್ಥೆಯವರ ಜೊತೆ ಸಭೆ ಮಾಡಿ, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಒಟ್ಟಾರೆಯಾಗಿ ಇಬ್ಬರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ ಸರ್ಕಾರ ಮತ್ತು ನಾಫೇಡ್ ಸಂಸ್ಥೆ ಮಧ್ಯದ ಒಡಂಬಡಿಕೆಯಲ್ಲಿನ ತೇವಾಂಶದ ಷರತ್ತು ಈಗ ರೈತರ ಪಾಲಿಗೆ ಮುಳುವಾಗಿದ್ದು, ಆದಷ್ಟು ಬೇಗ ತೇವಾಂಶದಲ್ಲಿ ಸಡಿಲಿಕೆ ಮಾಡಿ ಶೇಕಡಾ 15ವರೆಗೂ ವಿನಾಯ್ತಿ ನೀಡಿ ಖರೀದಿ ಮಾಡಿಕೊಳ್ಳಬೇಕಿದೆ. ಇಲ್ಲದೇ ಹೋದಲ್ಲಿ ಇನ್ನು ಕೆಲವೇ ದಿನಕ್ಕೆ ರೈತರು ಕೂಡಿಟ್ಟೋ ಹೆಸರೆಲ್ಲರೂ ನುಸಿ ಪೀಡೆಗೆ ಒಳಗಾಗುವ ಆತಂಕವೂ ಇದೆ.
ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಸಚಿವ ಆರ್. ಅಶೋಕ, ಎಂಎಲ್ಸಿ ಶರವಣ ಭಾಗಿಯಾಗಿದ್ದರು.
Published On - 8:41 pm, Tue, 1 November 22