
ಚಿತ್ರದುರ್ಗ, ಜುಲೈ 13: ಇಂದಿರಾಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರೊಂದಿಗೆ ಅತ್ಯಂತ ನಿಕಟ ಸಂಪರ್ಕ ಹೊಂದಿದ್ದ, ಕಾಂಗ್ರೆಸ್‌ನ ಹಿರಿಯ ರಾಷ್ಟ್ರೀಯ ನಾಯಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಹೆಚ್. ಹನುಮಂತಪ್ಪ (95) ಅವರು ವಯೋಸಹಜ ಅನಾರೋಗ್ಯದಿಂದ ನಿನ್ನೆ (ಭಾನುವಾರ) ಮಧ್ಯಾಹ್ನ ವಿಧಿವಶರಾಗಿದ್ದಾರೆ. ಗಾಂಧಿ ಪರಿವಾರಕ್ಕೆ ಅತ್ಯಂತ ಆಪ್ತರಾಗಿದ್ದ ಹನುಮಂತಪ್ಪ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಮತ್ತು ಎರಡು ಬಾರಿ ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರಾಗಿ ದೇಶ ಹಾಗೂ ರಾಜ್ಯಕ್ಕೆ ಗಣನೀಯ ಸೇವೆ ಸಲ್ಲಿಸಿದ್ದರು. ಅವರ ನಿಧನಕ್ಕೆ ರಾಜಕೀಯ ಗಣ್ಯರು ತೀವ್ರ ಕಂಬನಿ ಮಿಡಿದಿದ್ದಾರೆ.
ಮೃತರ ಅಂತ್ಯಸಂಸ್ಕಾರವು ಇಂದು ಮಧ್ಯಾಹ್ನ 4 ಗಂಟೆಗೆ ಚಿತ್ರದುರ್ಗದ ಮುಕ್ತಿಧಾಮದಲ್ಲಿ ನೆರವೇರಲಿದೆ. ಗಣ್ಯರ ಅಂತಿಮ ದರ್ಶನಕ್ಕಾಗಿ ನಗರದ ವಿವಿಧೆಡೆ ಸಾರ್ವಜನಿಕ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 10 ಗಂಟೆಯವರೆಗೆ ನೆಹರು ನಗರದ ಅವರ ನಿವಾಸದ ಬಳಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. 10 ರಿಂದ 11 ಗಂಟೆಯವರೆಗೆ ಸರಸ್ವತಿ ಕಾನೂನು ಕಾಲೇಜು ಆವರಣ, 11:30ರವರೆಗೆ ಜಿಲ್ಲಾ ಕಾಂಗ್ರೆಸ್ ಕಚೇರಿ, ನಂತರ ಜಯದೇವ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ರಾಷ್ಟ್ರೀಯ ನಾಯಕರಾಗಿದ್ದ ಹನುಮಂತಪ್ಪ ಅವರಿಗೆ ಅಂತಿಮ ನಮನ ಸಲ್ಲಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಮಧ್ಯಾಹ್ನ 2:15ಕ್ಕೆ ಹೆಲಿಕಾಪ್ಟರ್ ಮೂಲಕ ಚಿತ್ರದುರ್ಗಕ್ಕೆ ಆಗಮಿಸಲಿದ್ದಾರೆ. ಸಿಎಂ ಮತ್ತು ಡಿಸಿಎಂ ಭೇಟಿಯ ಹಿನ್ನೆಲೆಯಲ್ಲಿ ಜಯದೇವ ಕ್ರೀಡಾಂಗಣ ಹಾಗೂ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ