ಪತ್ರಿಕಾ ವಿತರಕರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ಬದ್ಧ: ಕೆ.ವಿ.ಪ್ರಭಾಕರ್
ಪತ್ರಿಕಾ ವಿತರಕರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮುಂದಾಗಿದ್ದ್ದರಿಂದಲೇ ಕಾರ್ಮಿಕ ಇಲಾಖೆಯಲ್ಲಿ ನಿಮಗಾಗಿ ಯೋಜನೆ ರೂಪುಗೊಳ್ಳಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಹೇಳಿದರು.
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ (Chitradurga) ಮುರುಘಾ ಮಠದ (Murugha Mutt) ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ಒಕ್ಕೂಟ ಏರ್ಪಡಿಸಿದ್ದ ರಾಜ್ಯ ಮಟ್ಟದ ನಾಲ್ಕನೇ ಸಮ್ಮೇಳನ ಸಂಭ್ರಮ ಸಡಗರಗಳಿಂದ ಯಶಸ್ವಿಯಾಗಿ ನಡೆಯಿತು.
ಸಮ್ಮೇಳನ ಉದ್ಘಾಟಿಸಿದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್ ಅವರು, ಪತ್ರಿಕಾ ವಿತರಕರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮುಂದಾಗಿದ್ದ್ದರಿಂದಲೇ ಕಾರ್ಮಿಕ ಇಲಾಖೆಯಲ್ಲಿ ನಿಮಗಾಗಿ ಯೋಜನೆ ರೂಪುಗೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ಪತ್ರಿಕಾ ವಿತರಕರು ನಿಜ ಅರ್ಥದಲ್ಲಿ ಪತ್ರಿಕೋದ್ಯಮದ ನರಮಂಡಲವಾಗಿ ಕೆಲಸ ಮಾಡುತ್ತಿದ್ದಾರೆ. ನ್ಯೂಸ್ ರೂಮಲ್ಲಿ ಲೇಔಟ್ ಆಗಿ, ಪ್ರಿಂಟಿಂಗ್ ಪ್ರೆಸ್‌ನಲ್ಲಿ ಮುದ್ರಣವಾಗುವ ಪತ್ರಿಕೆಗಳನ್ನು ರಾಜ್ಯದ ಮೂಲೆ ಮೂಲೆಯಲ್ಲಿರುವ ಓದುಗರ ಮನೆ ಬಾಗಿಲಿಗೆ ತಲುಪಿಸಲು ಪತ್ರಿಕಾ ವಿರತಕರ ನರ ಮಂಡಲ ವ್ಯವಸ್ಥಿತವಾಗಿರಬೇಕು. ನ್ಯೂಸ್ ರೂಮುಗಳು ಎಷ್ಟೇ ಹೈಟೆಕ್ ಆಗಿದ್ದರೂ, ಪ್ರಿಂಟಿಂಗ್ ಪ್ರೆಸ್‌ಗಳು ಎಷ್ಟೇ ಅಡ್ವಾನ್ಸ್ ಆಗಿದ್ದರೂ ಮನೆ ಮನೆಗೆ ಪತ್ರಿಕೆ ತಲುಪಿಸಲು ಪತ್ರಿಕಾ ವಿತರಕರೇ ಮುಖ್ಯವಾಗುತ್ತಾರೆ ಎಂದು ಹೇಳಿದರು.
ವಿದ್ಯಾರ್ಥಿಗಳಿಂದ ವಯಸ್ಕರವರೆಗೂ ಪ್ರತಿನಿತ್ಯ ಸೂರ್ಯ ಉದಯಿಸುವ ಮೊದಲೇ ಚಳಿ, ಮಳೆ ಎನ್ನದೆ ಪತ್ರಿಕೆಯನ್ನು ಮನೆ ಮನೆ ತಲುಪಿಸುತ್ತಾರೆ. ಪತ್ರಿಕೆ ವಿತರಕ ವಿದ್ಯಾರ್ಥಿಗಳು ಓದಿನ ಜೊತೆಗೆ ದುಡಿಮೆಯಲ್ಲೂ ತೊಡಗುತ್ತಾರೆ. ಇದು ಅವರ ಕುಟುಂಬಕ್ಕೆ ಮತ್ತು ನಾಡಿನ ಆರ್ಥಿಕತೆಗೂ ಅವರ ಪಾಲಿನ ಕೊಡುಗೆ ಕೊಟ್ಟಂತೆ ಎಂದರು.
ಪತ್ರಿಕೆ ವಿತರಕರ ಸಮಗ್ರ ಕಲ್ಯಾಣಕ್ಕೆ ಪ್ರತ್ಯೇಕ ನಿಧಿ ಸ್ಥಾಪನೆ ಮಾಡಬೇಕು. ಉಚಿತ ಪಡಿತರ, ವಿದ್ಯಾರ್ಥಿ ವೇತನ ನೀಡಬೇಕು. ಜೀವವಿಮೆ, ಹೆಲ್ತ್ ಕಾರ್ಡ್ ನೀಡಬೇಕು. ಬೈಕ್/ ಸೈಕಲ್ ಖರೀದಿಸಲು ಶೇ.50 ರಷ್ಟು ರಿಯಾಯ್ತಿ ಒದಗಿಸಬೇಕು, ಜರ್ಕೀನ್‌ಗಳನ್ನು ಒದಗಿಸಬೇಕು. ಜೀವ ವಿಮೆ ಮಾಡಿಸಿಕೊಡಬೇಕು ಎನ್ನುವ ಬಹು ವರ್ಷಗಳ ಬೇಡಿಕೆಗಳಿವೆ. ಎಲ್ಲವನ್ನೂ ಸರ್ಕಾರವೇ ಒದಗಿಸುವುದು ಕಷ್ಟ. ಹೀಗಾಗಿ ಮಾಧ್ಯಮ ಸಂಸ್ಥೆಗಳು ಖಾಸಗಿ ಕಂಪನಿಗಳ ಸಹಯೋಗಲ್ಲಿ ಸಿಎಸ್‌ಆರ್ ಂಡ್ ಬಳಸಿಕೊಂಡು ಈ ಬೇಡಿಕೆಗಳಲ್ಲಿ ಬಹಳಷ್ಟನ್ನು ಈಡೇರಿಸಬಹುದು ಎಂದರು.
ನ್ಯೂಸ್ ಪ್ರಿಂಟ್ ಬೆಲೆ ಹೆಚ್ಚಳ
ವಿಆರ್‌ಎಲ್ ಸಮೂಹ ಸಂಸ್ಥೆಗಳ ಛೇರ‌್ಮನ್ ವಿಜಯ ಸಂಕೇಶ್ವರ ಅವರು ಮಾತನಾಡಿ, ಮುದ್ರಣಕ್ಕೆ ಕಾಗದವೇ ಬಹಳ ಮುಖ್ಯ. ನ್ಯೂಸ್ ಪ್ರಿಂಟ್ ಬೆಲೆ ದುಬಾರಿಯಾಗಿರುವುದು ಮುದ್ರಣ ಮಾಧ್ಯಮದ ಎಲ್ಲರಿಗೂ ಹೊರೆಯಾಗುತ್ತಿದೆ. ಶೇ.70ರಷ್ಟು ನ್ಯೂಸ್ ಪ್ರಿಂಟ್ ಆಮದು ಮಾಡಿಕೊಳ್ಳಬೇಕಿದೆ. ಅದರ ಜೊತೆಗೆ ಜಿಎಸ್‌ಟಿ ತೆರಿಗೆ ಹೊರೆಯೂ ಹೆಚ್ಚಾಗಿದೆ. ಸಬ್ಸಿಡಿಯೂ ಸಿಗುತ್ತಿಲ್ಲ.ಈ ಬಗ್ಗೆ ಸರ್ಕಾರ ಗಮನಿಸಬೇಕು ಎಂದು ಹೇಳಿದರು.
ವಿಜಯ ಕರ್ನಾಟಕ ಪತ್ರಿಕೆ ಪ್ರಾರಂಭಿಸಿದಾಗ ನಾವು ಪ್ರತಿ ಜಿಲ್ಲಾ ಮಟ್ಟದಲ್ಲಿ ಪತ್ರಿಕಾ ವಿತರಕರ ಜೊತೆಗೆ ಸಭೆಗಳನ್ನು ನಡೆಸುವ ಮೂಲಕ ಅವರ ಅಹವಾಲುಗಳನ್ನು ಕೇಳುವ ಪ್ರಕ್ರಿಯೆ ಶುರು ಮಾಡಿದ್ದೆವು. ನಾವು ಈ ಉದ್ಯಮಕ್ಕೆ ಬಂದ ಮೇಲೆ ಪತ್ರಿಕಾ ವಿತರಕರಿಗಿದ್ದ ಸೌಲಭ್ಯಗಳು ಉತ್ತಮಗೊಳ್ಳಲು ಸಾಧ್ಯವಾಗಿದೆ. ಯಾವುದೇ ವೃತ್ತಿಯಲ್ಲಿ ಕೀಳಿರಿಮೆ ಇಟ್ಟುಕೊಳ್ಳದೆ ಕೆಲಸ ಮಾಡಬೇಕು ಎಂದರು.
ಕಾರ್ಮಿಕ ಇಲಾಖೆ ಯೋಜನೆ
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಮಾತನಾಡಿ, ಮಳೆ, ಚಳಿ, ಬಿಸಿಲೆನ್ನದೆ ಕೆಲಸ ಮಾಡುವ ಪತ್ರಿಕಾ ವಿತರಕರ ಬಗ್ಗೆ ಸರ್ಕಾರದ ಗಮನ ಸೆಳೆದು ಒತ್ತಡ ಹಾಕಿದ್ದರಿಂದಲೇ ಅವರಿಗಾಗಿ ಕಾರ್ಮಿಕ ಇಲಾಖೆಯಲ್ಲಿ ಯೋಜನೆ ಜಾರಿಗೆ ಬಂತು. ರಾಜ್ಯೋತ್ಸವ ಪ್ರಶಸ್ತಿ ಕೂಡ ಬಂತು ಎಂದರು.
ತಮ್ಮ ಪಾಡಿಗೆ ಅಲ್ಲಲ್ಲಿ ಹಂಚಿಹೋಗಿದ್ದ ಪತ್ರಿಕಾ ವಿತರಕರನ್ನು ಒಂದೇ ಸೂರಿನಡಿ ಸೇರಿಸಿ ಸಂಘಟನೆ ಮಾಡುವ ನಿಟ್ಟಿನಲ್ಲಿ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿಂಗ ಅವರ ನೇತೃತ್ವದ ತಂಡದ ಶ್ರಮ ಅಪಾರವಾದದ್ದು. ಪರಿಶ್ರಮದಿಂದ ಕೆಲಸ ಮಾಡಿದರೆ ಯಾವುದೇ ವೃತ್ತಿಯೂ ಕೀಳಲ್ಲ. ಅದನ್ನು ಅರಿತು, ಸಂಘಟಿತರಾದರೆ ಮಾತ್ರ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸ್ವಾಮೀಜಿಗಳ ಸಾನಿಧ್ಯ
ಸಾಣೇನಹಳ್ಳಿ ಮಠದ ಶ್ರೀಪಂಡಿತಾರಾದ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಬೋವಿ ಮಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಸಾನಿದ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಸುಧಾಕರ್, ಸಂಸದ ಗೋವಿಂದ ಕಾರಜೋಳ, ಶಾಸಕ ವೀರೇಂದ್ರ, ಹಿರಿಯ ಪತ್ರಕರ್ತರಾದ ಪ್ರಜಾಪ್ರಗತಿ ನಾಗಣ್ಣ, ಬಿ.ವಿ.ಮಲ್ಲಿಕಾರ್ಜುನಯ್ಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜವರಪ್ಪ, ಪತ್ರಿಕಾ ವಿತರಕರ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಶಂಭುಲಿಂಗ, ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ದಿನೇಶ್ ಗೌಡಗೆರೆ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು. ಲಕ್ಷ್ಮಿನಾರಾಯಣ್ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಪತ್ರಿಕಾ ವಿತರಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನೆರವೇರಿಸಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ