ಚಿತ್ರದುರ್ಗ: ಗಣಿಭಾದಿತ ಪ್ರದೇಶ ಪಟ್ಟಿಯಿಂದ ಹೊರಗೆ; ಸಿಟ್ಟಿಗೆದ್ದ ಗ್ರಾಮಸ್ಥರಿಂದ ಮತದಾನ ಬಹಿಷ್ಕಾರದ ಎಚ್ಚರಿಕೆ
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ವಿವಿಧೆಡೆ ಗಣಿಗಾರಿಕೆ ನಡೆಯುತ್ತದೆ. ಹೀಗಾಗಿ, ಅನೇಕ ಗ್ರಾಮಗಳು ಗಣಿಗಾರಿಕೆಯ ದುಷ್ಪರಿಣಾಮಕ್ಕೆ ಒಳಗಾಗಿವೆ. ಹೀಗಿರುವಾಗ ಅದೊಂದು ಗ್ರಾಮವನ್ನು ಗಣಿಭಾದಿತ ಪ್ರದೇಶದಿಂದ ಹೊರಗಿಡಲಾಗಿದೆ. ಇದರಿಂದ ರೊಚ್ಚಿಗೆದ್ದ ಜನರು, ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ.
ಚಿತ್ರದುರ್ಗ, ಏ.25: ಗಣಿಭಾದಿತ ಪ್ರದೇಶ ಪಟ್ಟಿಯಿಂದ ಹೊರಗಿಟ್ಟಿದ್ದಕ್ಕೆ ಗ್ರಾಮಸ್ಥರೆಲ್ಲರೂ ಸೇರಿ ಲೋಕಸಭೆ ಚುಣಾವಣೆಯ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ ಘಟನೆ ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ. ಹೌದು, ಈ ಗ್ರಾಮದ ಬಳಿಯಲ್ಲೇ ಖನಿಜ ಗಣಿಗಾರಿಕೆ ನಡೆಯುತ್ತದೆ. ಗಣಿ ಪ್ರದೇಶದಿಂದ 12ಕಿ.ಮೀಟರ್ ದೂರದಲ್ಲಿರುವ ಅನೇಕ ಗ್ರಾಮಗಳನ್ನು ಗಣಿಭಾದಿತ ಪ್ರದೇಶ ಎಂದು ಪರಿಗಣಿಸಲಾಗಿದೆ. ಆದ್ರೆ, ಎರಡ್ಮೂರು ಕಿ.ಮೀಟರ್ ವ್ಯಾಪ್ತಿಯಲ್ಲಿರುವ ಸಿದ್ದಾಪುರ ಗ್ರಾಮವನ್ನು ಗಣಿಭಾದಿತ ಪ್ರದೇಶದಿಂದ ಹೊರಗಿಡಲಾಗಿದೆ.
ಹೀಗಾಗಿ ಡಿಎಂಎಫ್ ಫಂಡ್ ಇಲ್ಲದೆ ಗ್ರಾಮದ ಅಭಿವೃದ್ಧಿ ಸಾಧ್ಯವಾಗಿಲ್ಲ. ಗ್ರಾಮದಲ್ಲಿ ಗಣಿಗಾರಿಕೆಯು ಹೆಚ್ಚಾಗಿದ್ದು, ಇದರ ದುಷ್ಪರಿಣಾಮದಿಂದ ಜನರ ಆರೋಗ್ಯ ಸೇರಿದಂತೆ ಕಷ್ಟಪಟ್ಟು ಬೆಳೆದ ಬೆಳೆಗಳೂ ಕೂಡ ಹಾಳಾಗಿವೆ. ಹೀಗಾಗಿ, ಈ ಸಲದ ಚುನಾವಣೆಯ ಮತದಾನ ಬಹಿಷ್ಕರಿಸಲು ನಿರ್ಧರಿಸಿದ್ದೇವೆ ಎಂದು ಇಲ್ಲಿನ ಗ್ರಾಮಸ್ಥರು ಹೇಳುತ್ತಾರೆ. ಜೊತೆಗೆ ಈಗಾಗಲೇ ಗ್ರಾಮದ ಜನರು ಅನೇಕ ಸಲ ಜಿಲ್ಲಾಡಳಿತಕ್ಕೆ ಈ ಬಗ್ಗೆ ಮನವಿ ಸಲ್ಲಿಸಿದ್ದೇವೆ. ಗ್ರಾಮದಲ್ಲಿ ರಸ್ತೆ, ಚರಂಡಿ, ನೀರಿನ ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದೇವೆ.
ಇದನ್ನೂ ಓದಿ:ನೀರು ಕೊಡುವವರೆಗೂ ವೋಟ್ ಮಾಡಲ್ಲ: ಬಸವೇಶ್ವರ ಲೇಔಟ್ ನಿವಾಸಿಗಳಿಂದ ಮತದಾನ ಬಹಿಷ್ಕಾರ ಎಚ್ಚರಿಕೆ
ಮತದಾನ ಬಹಿಷ್ಕಾರಕ್ಕೆ ನಿರ್ಧಾರ
ಗಣಿಭಾಧಿತ ಪ್ರದೇಶವಾದ್ದರಿಂದ ಗಣಿಭಾದಿತ ಪ್ರದೇಶ ಪಟ್ಟಿಯಲ್ಲಿ ಗ್ರಾಮ ಸೇರಿಸಿ ಪರಿಹಾರ ಕ್ರಮಕ್ಕೆ ಮನವಿ ಮಾಡಿದ್ದೇವೆ. ಆದ್ರೆ, ಅಧಿಕಾರಿಗಳು, ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ, ಗ್ರಾಮದ ಜನರು ಒಟ್ಟಾಗಿ ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ. ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಸಿದ್ದಾಪುರ ಗ್ರಾಮದ ಜನರು ಮತದಾನ ಬಹಿಷ್ಕಾರಕ್ಕೆ ನಿರ್ಧರಿಸಿದ್ದಾರೆ. ನಿನ್ನೆ(ಏ.24) ರಾತ್ರಿ ಮತ್ತು ಇಂದು ಗ್ರಾಮದಲ್ಲಿ ಪ್ರತಿಭಟನೆ ನಡೆಸಿ ಎಚ್ಚರಿಕೆ ನಿಡಿದ್ದಾರೆ. ಆದ್ರೆ, ಅಧಿಕಾರಿಗಳು ಜನರ ಬೇಡಿಕೆಗೆ ಸ್ಪಂದಿಸಿಲ್ಲ. ಹೀಗಾಗಿ, ನಾಳೆ ನಡೆಯಲಿರುವ ಮತದಾನವನ್ನು ಗ್ರಾಮಸ್ಥರು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಜಿಲ್ಲಾಡಳಿತ ಜನರ ಮನವೊಲಿಸಲು ಯಾವ ರೀತಿ ಕಸರತ್ತು ನಡೆಸಲಿದೆ ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ