AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನರ ಗಮನ ಸೆಳೆದ ವಯನಾಡು ಡಿಸಿ ಕನ್ನಡತಿ ಮೇಘಶ್ರೀ; ಸೊಸೆ ಬಗ್ಗೆ ಮಾವನ ಮೆಚ್ಚುಗೆ ಮಾತುಗಳು

Wayanad landslide: ವಯನಾಡು ಡಿಸಿ ಆಗಿ ಅಧಿಕಾರ ಪಡೆದ ಕೇವಲ 20 ದಿನಗಳಲ್ಲೇ ಕನ್ನಡತಿ ಮೇಘಶ್ರೀ ಅವರು ದಿಟ್ಟತನದಿಂದ ಹಗಲು ರಾತ್ರಿ ಎನ್ನದೆ ವಯನಾಡು ದುರಂತದ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ. ಇವರ ಈ ಕಾರ್ಯವೈಕರಿಗೆ ಮೆಚ್ಚುಗೆ ವ್ಯಕ್ತವಾಗಿದ್ದು ಅವರ ಮಾವ ಸೊಸೆಯ ಬಗ್ಗೆ ಹೆಮ್ಮೆಯ ಮಾತುಗಳನ್ನಾಡಿದ್ದಾರೆ.

ಜನರ ಗಮನ ಸೆಳೆದ ವಯನಾಡು ಡಿಸಿ ಕನ್ನಡತಿ ಮೇಘಶ್ರೀ; ಸೊಸೆ ಬಗ್ಗೆ ಮಾವನ ಮೆಚ್ಚುಗೆ ಮಾತುಗಳು
ಜನರ ಗಮನ ಸೆಳೆದ ವಯನಾಡು ಡಿಸಿ, ಕನ್ನಡತಿ ಮೇಘಶ್ರೀ
ಬಸವರಾಜ ಮುದನೂರ್, ಚಿತ್ರದುರ್ಗ
| Updated By: ಆಯೇಷಾ ಬಾನು|

Updated on: Aug 05, 2024 | 9:38 AM

Share

ಚಿತ್ರದುರ್ಗ, ಆಗಸ್ಟ್.05: ಕೇರಳದ ವಯನಾಡು ಜಿಲ್ಲೆಯಲ್ಲಿ ಸಂಭವಿಸಿದ ಸರಣಿ ಭೂಕುಸಿತದಲ್ಲಿ (Wayanad Landslide) ಮೃತಪಟ್ಟವರ ಸಂಖ್ಯೆ 350ಕ್ಕೂ ಅಧಿಕವಿದೆ. ಇನ್ನು 66 ಮೃತದೇಹಗಳ ಗುರುತೇ ಸಿಕ್ಕಿಲ್ಲ. ಇಂತಹ ಶವಗಳ ಡಿಎನ್‌ಎ ಸ್ಯಾಂಪಲ್‌ ಪಡೆದಿರೋ ಕೇರಳ ಸರ್ಕಾರ, ಪುತ್ತುಮಲಾ ಅನ್ನೋ ಏರಿಯಾದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ನಡೆಸಿದೆ. ಈ ದುರಂತದ ಬಳಿಕ ವಯನಾಡು ಜಿಲ್ಲಾಡಳಿತ (Wayanad DC) ಜನರಿಗಾಗಿ ನಿಂತಿದೆ. ಹಗಲಿರುಳು ಕೆಲಸ ಮಾಡುತ್ತಿದೆ. ಈ ನಡುವೆ ಜಿಲ್ಲಾಧಿಕಾರಿ, ಕನ್ನಡತಿ ತಮ್ಮ ಉತ್ತಮ ಕೆಲಸದ ಮೂಲಕ ಜನರ ಗಮನ ಸೆಳೆದಿದ್ದಾರೆ.

ವಯನಾಡ್ ಡಿಸಿ ಆಗಿರುವ ಮೇಘಶ್ರೀ ಅವರು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೊಡ್ಡೇರಿ ಗ್ರಾಮದವರು. ಸದ್ಯ ಈಗ ಕೋಟೆನಾಡಿನ ಸುಪುತ್ರಿ ಬಗ್ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಜಿಲ್ಲಾಧಿಕಾರಿ ಡಿ. ಆರ್. ಮೇಘಶ್ರೀ ಅವರು ದುರಂತ ನಡೆದ ಬಳಿಕ ಮುಂಜಾನೆ 3 ಗಂಟೆಯಿಂದ ಕೆಲಸ ಮಾಡುತ್ತಿದ್ದಾರೆ. ಜುಲೈ 10ರಂದು ಮೇಘಶ್ರೀ ಜಿಲ್ಲಾಧಿಕಾರಿಯಾಗಿ ಅಧಿಕಾರವಹಿಸಿಕೊಂಡರು. ಜಿಲ್ಲಾಧಿಕಾರಿಯಾಗಿ ಆಗಮಿಸಿದ ಕೆಲವೇ ದಿನಗಳಲ್ಲಿ ಅವರು ಅತಿ ದೊಡ್ಡ ಸವಾಲು ಎದುರಿಸಿದ್ದಾರೆ. ಮೇಘಶ್ರೀ ಅವರ ಕಾರ್ಯ ವೈಕರಿಗೆ ಜನ ಫಿದಾ ಆಗಿದ್ದಾರೆ.

ಇದನ್ನೂ ಓದಿ: ಕೇರಳ: ಭೂಕುಸಿತದಲ್ಲಿ ಸಿಲುಕಿರುವ ಪ್ರಾಣಿಗಳ ರಕ್ಷಣೆ, ಸುರಕ್ಷತೆಗೆ ಕಂಟ್ರೋಲ್ ರೂಂ ತೆರೆದ ಸರ್ಕಾರ

ಇನ್ನು ಮೇಘಶ್ರೀ ಅವರ ಬಗ್ಗೆ ಕುಟುಂಬಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೇಘಶ್ರೀ ಅವರಿಗೆ ಬಾಲ್ಯದಿಂದಲೇ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹರ್ತಿಕೋಟೆ ಗ್ರಾಮದ ಡಾ. ವಿಕ್ರಂ ಸಿಂಹ ಜೊತೆ ಪ್ರೇಮ ಅಂಕುರಿಸಿತ್ತು. ಜಾತಿ ಬೇಧ ಮರೆತು ಎರಡೂ ಕುಟುಂಬ ಒಂದಾಗಿ ಮದುವೆ ಮಾಡಿದ್ದರು. ಮೇಘಶ್ರೀ ಅವರು ವಯನಾಡ್ ಡಿಸಿ ಆದ್ರೆ, ಡಾ.ವಿಕ್ರಂ ಸಿಂಹ ಅಗ್ರಿಕಲ್ಚರ್ ವಿವಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದಾರೆ ಎಂದು ಹರ್ತಿಕೋಟೆಯಲ್ಲಿ ವಯನಾಡ್ ಡಿಸಿ ಮಾವ ವಿರೇಂದ್ರ ಸಿಂಹ ಮಾಹಿತಿ ನೀಡಿದರು. ಇನ್ನು ಮೇಘಶ್ರೀ ಮಾವ ವಿರೇಂದ್ರ ಸಿಂಹ ಅವರು ನಿವೃತ್ರ ಜೈಲರ್ ಆಗಿದ್ದಾರೆ.

20 ದಿನಗಳ ಹಿಂದಷ್ಟೇ ಮೇಘಶ್ರೀ ವಯನಾಡ್ ಡಿಸಿಯಾಗಿ ಚಾರ್ಜ್ ತೆಗೆದುಕೊಂಡರು. ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ದೊಡ್ಡ ಸವಾಲು ಕಣ್ಮುಂದೆ ಇದೆ. ಹತ್ತಾರು ಹಳ್ಳಿಗಳು ಸರ್ವನಾಶ ಆಗಿವೆ. ಈ ವೇಳೆ ಮೇಘಶ್ರೀ ದಿಟ್ಟತನದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಪಾಳೇಗಾರರ ಹಿನ್ನೆಲೆಯ ಮನೆತನ ನಮ್ಮದು. ನಮ್ಮ ಮನೆ ಸೊಸೆ ಮೇಘಶ್ರೀ ಧೈರ್ಯದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪುಟ್ಟ ಮಕ್ಕಳೊಂದಿಗೆ ನನ್ನ ಪುತ್ರ ಮನೆಯಲ್ಲಿದ್ದು ಪತ್ನಿಗೆ ಧೈರ್ಯ ತುಂಬಿದ್ದಾರೆ. ಸಾವು, ನೋವು ಸಂಭವಿಸಿದ ಸ್ಥಳಕ್ಕೆ ಮೇಘಶ್ರೀ ಭೇಟಿ ನೀಡಿದ್ದಾರೆ. ನಮ್ಮಂಥವರಿಗೆ ಆ ದೃಶ್ಯಗಳನ್ನು ನೋಡಿದರೆ ಆತಂಕ ಆಗುತ್ತದೆ. ಮೇಘಶ್ರೀ ಸ್ಥಳದಲ್ಲಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ನಾವು ಆಗಾಗ ಫೋನ್ ಕರೆ ಮಾಡಿ ಮಾತಾಡಿದ್ದೇವೆ. ನಮಗೂ ಸಹ ಮೊದಲಿಗೆ ತುಂಬಾ ಆತಂಕ ಆಗಿತ್ತು. ಸದ್ಯ ಯಾವುದೇ ಅಪಾಯ ಇಲ್ಲ ಎಂದು ತಿಳಿದು ಸಮಾಧಾನ ಆಗಿದೆ. ನಮ್ಮ ಸೊಸೆ ಜನರ ಸಂಕಷ್ಟಕ್ಕೆ ಸ್ಪಂದಿಸುವ ಪರಿ ಹೆಮ್ಮೆ ತಂದಿದೆ. ಕನ್ನಡತಿ ಮೇಘಶ್ರೀ ಎಂಬ ಮಾತು ಕೇಳಿ ಖುಷಿ ಆಗುತ್ತಿದೆ ಎಂದು ಸೊಸೆ ಬಗ್ಗೆ ಮಾವ ಸಂತೋಷದ ಮಾತುಗಳನ್ನಾಡಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ