ಮುಡಾ ಹಗರಣ: ಇಂದು ಲೋಕಾಯುಕ್ತ ಪೊಲೀಸರಿಂದ ಸಿಎಂ ಸಿದ್ದರಾಮಯ್ಯ ವಿಚಾರಣೆ
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿಚಾರಣೆಯನ್ನು ಲೋಕಾಯುಕ್ತ ಪೊಲೀಸರು ಇಂದು ಆರಂಭಿಸುತ್ತಿದ್ದಾರೆ. ಅವರ ಪತ್ನಿ ಪಾರ್ವತಿ ಮತ್ತು ಇತರರ ವಿಚಾರಣೆ ನಡೆದ ಬಳಿಕ ಇದೀಗ ಸಿಎಂಗೂ ವಿಚಾರಣೆ ಎದುರಿಸಬೇಕಾಗಿ ಬಂದಿದೆ. ವಿಚಾರಣೆ ಹಿನ್ನೆಲೆ ಮಂಗಳವಾರ ಸಿಎಂ ಆಪ್ತ ಸಚಿವರ ಜತೆ ಗೌಪ್ಯ ಸಭೆ ನಡೆಸಿದ್ದರು.
ಬೆಂಗಳೂರು, ನವೆಂಬರ್ 6: ಸಿಎಂ ಸಿದ್ದರಾಮಯ್ಯ ಉಪಚುನಾವಣೆ ಅಖಾಡದಲ್ಲಿ ಅಬ್ಬರಿಸುತ್ತಿರುವಾಗಲೇ, ಅವರಿಗೆ ಮುಡಾ ಹಗರಣ ಮಗ್ಗಲ ಮುಳ್ಳಾಗಿ ಕಾಡುತ್ತಿದೆ. ಈಗಾಗಲೇ ಮುಡಾ ಕೇಸ್ ಸಂಬಂಧ ಮೈಸೂರಿನ ಲೋಕಾಯುಕ್ತ ಪೊಲೀಸರು ಸಿಎಂ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಭೂ ಮಾಲೀಕ ದೇವರಾಜು ಸೇರಿದಂತೆ ಹಲವರ ವಿಚಾರಣೆ ನಡೆಸಿದ್ದಾರೆ. ಪ್ರಕರಣದಲ್ಲಿ ಎ1 ಆಗಿರುವ ಸಿಎಂ ಸಿದ್ದರಾಮಯ್ಯಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದ್ದರು. ಇದೀಗ ಸಿಎಂ ಸಿದ್ದರಾಮಯ್ಯ ವಿಚಾರಣೆಗೆ ಕ್ಷಣಗಣನೆ ಶುರುವಾಗಿದೆ. ಇಂದು ಬೆಳಗ್ಗೆ 10 ಗಂಟೆಗೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ.
ಇಂದು ಸಿಎಂ ವಿಚಾರಣೆ ಹಿನ್ನೆಲೆ ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಮೈಸೂರು ಸಿಟಿ ಕಮಿಷನರ್ ಸೀಮಾ ಲಾಟ್ಕರ್ ಮಂಗಳವಾರ ಪೊಲೀಸ್ ಅಧಿಕಾರಿಗಳ ಜತೆ ಸಭೆ ನಡೆಸಿ ನೂರಾರು ಬ್ಯಾರಿಕೇಡ್‌ಗಳನ್ನು ತರಿಸಿಕೊಂಡಿದ್ದಾರೆ.
ಸಿದ್ದರಾಮಯ್ಯ ಪ್ರವಾಸದ ಪರಿಷ್ಕೃತ ಪಟ್ಟಿ ಬಿಡುಗಡೆ
ಸಿಎಂ ಸಿದ್ದರಾಮಯ್ಯ ಇಂದಿನ ಲೋಕಾಯುಕ್ತ ವಿಚಾರಣೆ ಎದುರಿಸಲು ಮೊದಲು ಬೆಳಗ್ಗೆ 10 ಗಂಟೆಯಿಂದ 12 ಗಂಟೆಯವರೆಗೆ ಸಮಯ ಕಾಯ್ದಿರಿಸಿದ್ದರು. ಆದರೆ, ಸಿಎಂ ಅವರೇ ವಿಚಾರಣೆಗೆ ಗಡುವು ಹಾಕಿಕೊಟ್ಟಿದ್ದಾರೆ ಎಂಬ ಟೀಕೆ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಪರಿಷ್ಕೃತ ಪ್ರವಾಸ ಪಟ್ಟಿ ಬಿಡುಗಡೆ ಮಾಡಲಾಗಿದೆ. ಬೆಳಗ್ಗೆ 9.30ಕ್ಕೆ ಮೈಸೂರಿಗೆ ಸಿದ್ದರಾಮಯ್ಯ ತೆರಳಲಿದ್ದು, ಬೆಳಗ್ಗೆ 9.30ರ ನಂತರ ವಿಚಾರಣೆಗೆ ಸಮಯ ಕಾಯ್ದಿರಿಸಲಾಗಿದೆ ಎಂದಷ್ಟೇ ಉಲ್ಲೇಖಿಸಲಾಗಿದೆ.
ಲೋಕಾಯುಕ್ತ ಪೊಲೀಸರಿಂದ ನಡೆಯುವ ಸಿಎಂ ವಿಚಾರಣೆಗೆ ಬಿಜೆಪಿ ನಾಯಕರು ತಮ್ಮದೇ ಧಾಟಿಯಲ್ಲಿ ಮಾತಿನ ಚಾಟಿ ಬೀಸಿದ್ದಾರೆ.
ಸಿದ್ದರಾಮಯ್ಯ ವಿಚಾರಣೆ ಎದುರಿಸುತ್ತಿರುವುದು ಸಿಎಂ ಆಗಿಯಾ ಅಥವಾ ಆರೋಪಿಯಾಗಿಯಾ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ. ಲೋಕಾಯುಕ್ತ ವಿಚಾರಣೆ ಡ್ರಾಮಾ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.
ಬಾಮೈದ ಕೊಟ್ಟ ಜಮೀನು, ನಾನೇನೂ ತಪ್ಪು ಮಾಡಿಲ್ಲ ಎಂದ ಸಿಎಂ
ಇಂದು ವಿಚಾರಣೆಗೆ ಹಾಜರಾಗುತ್ತಿರುವ ಸಿಎಂ, ಮುಡಾದಲ್ಲಿ ನಾನೇನೂ ತಪ್ಪು ಮಾಡಿಲ್ಲ. ನನ್ನನ್ನು ಸಿಎಂ ಸ್ಥಾನದಿಂದ ಕಿತ್ತು ಹಾಕಲು ಮೋದಿ, ದೇವೇಗೌಡ ಒಂದಾಗಿದ್ದಾರೆ. ಅವರಿಗೆ ನಾನು ಬಗ್ಗಲ್ಲ ಎಂದು ಗುಡುಗಿದ್ದಾರೆ. ಸುಳ್ಳು ಕೇಸ್‌ನಲ್ಲಿ ಹೇಳಿಕೆ ಕೊಡುವ ಸ್ಥಿತಿ ಬಂತಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಹುಬ್ಬಳ್ಳಿಯಲ್ಲಿ ಆಪ್ತ ಸಚಿವರ ಜತೆ ಸಿದ್ದರಾಮಯ್ಯ ಗೌಪ್ಯ ಸಭೆ
ಮುಡಾ ಕೇಸ್‌ನಲ್ಲಿ ಇಂದು ಲೋಕಾಯುಕ್ತ ವಿಚಾರಣೆ ಹಿನ್ನೆಲೆ, ಸಿಎಂ ಸಿದ್ದರಾಮಯ್ಯ ಮಂಗಳವಾರ ರಾತ್ರಿ ಹುಬ್ಬಳ್ಳಿ ಏರ್‌ಪೋರ್ಟ್‌ನಲ್ಲಿ ಆಪ್ತ ಸಚಿವರಾದ ಭೈರತಿ ಸುರೇಶ್, ಈಶ್ವರ್ ಖಂಡ್ರೆ ಜತೆ ಗೌಪ್ಯ ಸಭೆ ನಡೆಸಿದರು. ಸಭೆ ಬಳಿಕ ಬೆಂಗಳೂರಿಗೆ ವಾಪಸ್ ಆದರು. ಇನ್ನು ಭೈರತಿ ಸುರೇಶ್ ಪ್ರತಿಕ್ರಿಯಿಸಿ, ಬಿಜೆಪಿಯವರು ಹೇಳಿದ ತಕ್ಷಣ ಯಾಕೆ ಸಿಎಂ ರಾಜೀನಾಮೆ ಕೊಡಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿರೋದು 136 ಶಾಸಕರಿಂದ ಅಂತ ಹೇಳಿದರು.
ನವೆಂಬರ್ 26ಕ್ಕೆ ಮುಡಾ ಕೇಸ್ ಸಿಬಿಐ ತನಿಖೆ ಭವಿಷ್ಯ
ಲೋಕಾಯುಕ್ತ ತನಿಖೆಯಿಂದ ನ್ಯಾಯ ಸಿಗಲ್ಲ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠದಲ್ಲಿ ಮಂಗಳವಾರ ವಿಚಾರಣೆ ನಡೆಯುತು. ಮುಂದಿನ ವಿಚಾರಣೆ ನವೆಂಬರ್ 26ಕ್ಕೆ ಮುಂದೂಡಲಾಗಿದೆ. ಇದರ ಜೊತೆಗೆ ನವೆಂಬರ್ 25ವರೆಗೆ ನಡೆದಿರುವ ತನಿಖೆಯ ವಿವರ ಸಲ್ಲಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಹೈಕೋರ್ಟ್ ಸೂಚನೆ ಕೊಟ್ಟಿದೆ.
ಇದನ್ನೂ ಓದಿ: ಸಿಎಂ ಪರಿಷ್ಕೃತ ಪ್ರವಾಸ ಪಟ್ಟಿ ಬಿಡುಗಡೆ: ಲೋಕಾಯುಕ್ತ ವಿಚಾರಣೆಗೆ ಹಾಜರಾಗುವುದು ಖಚಿತ
ಒಟ್ಟಿನಲ್ಲಿ ಸಿಎಂಗೆ ಮುಡಾ ಸಂಕಷ್ಟ ಬೆನ್ನಿಗೆ ಬಿದ್ದ ಬೇತಾಳನಂತೆ ಕಾಡುತ್ತಿದೆ. ಇಂದು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಒಂದು ವೇಳೆ ಸಿಬಿಐ ತನಿಖೆಗೆೆ ಅವಕಾಶ ಸಿಕ್ಕರೆ ಪ್ರಕರಣದ ದಿಕ್ಕೇ ಬದಲಾಗಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ