ಬೆಂಗಳೂರು, ಅಕ್ಟೋಬರ್ 15: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅವ್ಯವಹಾರ ನಡೆದಿರುವುದು ನಿಜ. ಆದರೂ ಎಸ್ಸಿ ಎಸ್ಟಿ ಸಮುದಾಯಕ್ಕೆ ನೀಡಲಾಗುವ ಅನುದಾನದಲ್ಲಿ ಯಾವುದೇ ಕಡಿತ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಮಂಗಳವಾರ ಹೇಳಿದರು. ವಿಧಾನಸೌಧದಲ್ಲಿರುವ ಸಚಿವ ಬೈರತಿ ಸುರೇಶ್ ಕೊಠಡಿಯಲ್ಲಿ ಸಚಿವ ಭೈರತಿ, ಶಾಸಕ ದದ್ದಲ್ ಜೊತೆ ಸಮಾಲೋಚನೆ ನಡೆಸಿದ ನಂತರ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
ಎಸ್ಟಿ ಸಮುದಾಯದ ಶಾಸಕರು ಮತ್ತು ಸ್ವಾಮೀಜಿಗಳ ಬೇಡಿಕೆ ಇತ್ತು. ಎರಡು ಸಮಸ್ಯೆ ಗಳ ಬಗ್ಗೆ ಬೇಡಿಕೆ ಇತ್ತು. ವಾಲ್ಮೀಕಿ ಸಮುದಾಯಕ್ಕೆ ಅನುದಾನ ಕಡಿಮೆಯಾಗದಂತೆ ನೋಡಿಕೊಳ್ಳಬೇಕು ಎಂಬ ಬೇಡಿಕೆ ಇತ್ತು. ಅದರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 89 ಕೋಟಿ ರೂಪಾಯಿ ಅವ್ಯವಹಾರ ಆಗಿತ್ತು. 5 ಕೋಟಿ ರೂಪಾಯಿ ವಾಪಸ್ ಬಂದಿದೆ. 71 ಕೋಟಿ ರೂಪಾಯಿಯನ್ನು ಎಸ್ಐಟಿ ವಸೂಲಿ ಮಾಡಿದೆ. 13 ಕೋಟಿ ರೂಪಾಯಿ ವಸೂಲಿ ಮಾಡಬೇಕಿದೆ. ಈ ವಿಚಾರ ಈಗ ಕೋರ್ಟ್ ಮುಂದೆ ಇದೆ. ಹಾಗೆಂದು ಸಮುದಾಯಕ್ಕೆ ಅನುದಾನ ಕಡಿತ ಮಾಡುವುದಿಲ್ಲ. ನಾಡಿದ್ದು ವಾಲ್ಮೀಕಿ ಜಯಂತಿ ಇದೆ. ಅದರ ಬಗ್ಗೆಯೂ ಸಭೆಯಲ್ಲಿ ಚರ್ಚೆ ಆಗಿದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ನಕಲಿ ಜಾತಿ ಪ್ರಮಾಣಪತ್ರ ಗೊಂದಲ ಪರಿಹಾರ ಮಾಡಿ ಎಂದು ಸೂಚನೆ ನೀಡಿದ್ದೇನೆ. ಇಲಾಖಾ ಕಾರ್ಯದರ್ಶಿ ಮತ್ತು ಕಾನೂನು ಕಾರ್ಯದರ್ಶಿ ಚರ್ಚೆ ಮಾಡಿ ಸಮಸ್ಯೆ ಪರಿಹಾರ ಮಾಡಿ ಎಂದು ತಿಳಿಸಿದ್ದೇನೆ ಎಂದು ಅವರು ಹೇಳಿದರು.
ಇದನ್ನೂ ಓದಿ: ಮುಡಾ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು
ತೆರಿಗೆ ಅನ್ಯಾಯದ ಬಗ್ಗೆ ದೆಹಲಿಯಲ್ಲಿ ಪ್ರತಿಭಟನೆ ಮಾಡುವ ತೀರ್ಮಾನ ಇನ್ನೂ ಆಗಿಲ್ಲ. ಮಾಜಿ ಸಚಿವ ನಾಗೇಂದ್ರ ಅವರಿಗೆ ಜಾಮೀನು ಸಿಕ್ಕಿದೆ. ಯಾಕೆ ಸಿಗಬಾರದಿತ್ತಾ? ಉಪಚುನಾವಣೆ ಘೋಷಣೆ ಆಯ್ತಾ? ಚುನಾವಣೆ ಎದುರಿಸಲು ನಾವು ಸದಾ ಸಿದ್ಧ. ಉಪ ಚುನಾವಣೆಯನ್ನು ಸಮರ್ಥವಾಗಿ ಎದುರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ