ಘೋಷಣೆ ಕೂಗೋಕೆ ಸೇರಿಸಿಕೊಳ್ತಾರೆ: ಡಿಕೆ ಸೋದರರ ವಿರುದ್ಧ ಹರಿಹಾಯ್ದ ಸಚಿವ ಅಶ್ವತ್ಥ ನಾರಾಯಣ
ತಮ್ಮನಿಗೆ ಬೈದು ಬುದ್ಧಿ ಹೇಳಬೇಕಿದ್ದವರು, ರಾಮನಗರಕ್ಕೂ ಅಶ್ವತ್ಥ ನಾರಾಯಣ ಅವರಿಗೂ ಏನು ಸಂಬಂಧ ಎನ್ನುತ್ತಾರೆ ಡಿ.ಕೆ.ಶಿವಕುಮಾರ್ ವರ್ತನೆಯನ್ನು ಆಕ್ಷೇಪಿಸಿದರು.
ಬೆಂಗಳೂರು: ಕಾರ್ಯಕ್ರಮಕ್ಕೆ ತಡವಾಗಿ ಬಂದ ಸಂಸದ ಡಿ.ಕೆ.ಸುರೇಶ್ ವಿನಾಕಾರಣ ಗೊಂದಲ ಸೃಷ್ಟಿಸಿದರು. ಮುಖ್ಯಮಂತ್ರಿಯಿರುವ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಯಾಗಿ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಅವರು ಗಮನ ಕೊಡಲಿಲ್ಲ. ಸಭಾ ಕಾರ್ಯಕ್ರಮದಲ್ಲಿ ಡಿಕೆಡಿಕೆ ಎಂದು ಕೇಲವರು ಕೂಗುತ್ತಲೇ ಇದ್ದರು. ಸುಮ್ಮನಿರಿ ಎಂದರೂ ಯಾರು ಕೇಳಲಿಲ್ಲ. ಅವರ ಬಂಟರು, ಹಿಂಬಾಲಕರು ಸೇರಿ ಗಲಾಟೆ ಮಾಡಿದರು. ಇವರು ಎಲ್ಲಿ ಹೋದರೂ 50 ಜನರು ಸೇರಿಕೊಂಡು ಘೋಷಣೆಗಳನ್ನು ಕೂಗುತ್ತಿರುತ್ತಾರೆ ಎಂದು ಡಿಕೆ ಬ್ರದರ್ಸ್ ಎಂದು ಕರೆಯಲಾಗುವುದು ಡಿ.ಕೆ.ಸುರೇಶ್ ಮತ್ತು ಡಿ.ಕೆ.ಶಿವಕುಮಾರ್ ವಿರುದ್ಧ ಸಚಿವ ಅಶ್ವತ್ಥ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.
ರಾಮನಗರದ ಬೆಳವಣಿಗೆಗಳನ್ನು ವಿವರಿಸಿದ ಅವರು, ರಾಮನಗದಲ್ಲಿ ಹಲವು ಸಭಾ ಕಾರ್ಯಕ್ರಮಗಳಿದ್ದವು. ಹಲವು ದಿನಗಳಿಂದ ಬಾಕಿಯಾಗಿದ್ದ ಅಂಬೇಡ್ಕರ್ ಪ್ರತಿಮೆ ಅನಾವರಣ ಸೇರಿದಂತೆ ಹಲವು ಕಾರ್ಯಕ್ರಮಗಳಿದ್ದವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಉಪಸ್ಥಿತರಿದ್ದ ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಜಿಲ್ಲಾಧಿಕಾರಿ ಎಲ್ಲರಿಗೂ ಆಹ್ವಾನ ನೀಡಿದ್ದರು. ಮೂವರಿಗೆ ಮಾತ್ರ ಪುಷ್ಪಾರ್ಚನೆಗೆ ಅವಕಾಶವಿತ್ತು. ನಾನು, ಮುಖ್ಯಮಂತ್ರಿ ಮತ್ತು ಶಾಸಕಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆವು. ಅಲ್ಲಿಗೆ ನನ್ನನ್ನು ಕರೆಯಲಿಲ್ಲ ಎಂದು ಸಂಸದರು ವಾದಮಾಡಿದರು. ವಾಸ್ತವವಾಗಿ ಸಂಸದರು ಅಲ್ಲಿ ಇರಲೇ ಇಲ್ಲ. ನಾವು ಪುಷ್ಪಾರ್ಚನೆ ಮುಗಿಸಿದ ನಂತರ ಅಲ್ಲಿಗೆ ಬಂದಿದ್ದರು. ಹಾಗಾಗಿ ಅವರು ಬಂದಿದ್ದನ್ನು ನಾವು ನೋಡಲಿಲ್ಲ. ಆದರೂ ಈ ವಿಷಯವನ್ನು ದೊಡ್ಡದು ಮಾಡಲಾಯಿತು ಎಂದರು.
ಕಾರ್ಯಕ್ರಮದಲ್ಲಿ ನಾನು ಜಿಲ್ಲೆಗೆ ಕೊಟ್ಟಿರುವ ಕಾರ್ಯಕ್ರಮ ಮತ್ತು ಯೋಜನೆಗಳ ಬಗ್ಗೆ ವಿವರಿಸಲು ಯತ್ನಿಸಿದೆ. ಇದನ್ನು ಆಕ್ಷೇಪಿಸುವುದು ನಿಮ್ಮ ಯೋಗ್ಯತೆಗೆ, ಗಂಡಸ್ತನಕ್ಕೆ ಸರಿಯಲ್ಲ. ನಿಮ್ಮ ಯೋಗ್ಯತೆ, ಅರ್ಹತೆ ಕೆಲಸದಲ್ಲಿ ತೋರಿಸಬೇಕು, ಪುಂಡಾಟಿಕೆ ಸರಿಯಲ್ಲ ಎಂದು ನಾವು ಮಾಡುತ್ತಿರುವ ಕೆಲಸಗಳ ಬಗ್ಗೆ ಹೇಳುತ್ತಿದ್ದೆ. ನಾನು ಮಾತನಾಡಿದ ಬಳಿಕ, ಅವರು ಮಾತನಾಡಲು ಅವಕಾಶ ಕೇಳಿದ್ದರು. ಆದರೆ ನನ್ನ ಮಾತಿನ ಮಧ್ಯೆಯೇ ಅವರು ಮಾತನಾಡಲು ಮುಂದೆ ಬಂದು, ಗಲಾಟೆ ಮಾಡಿದರು. ತಮ್ಮನಿಗೆ ಬೈದು ಬುದ್ಧಿ ಹೇಳಬೇಕಿದ್ದವರು, ರಾಮನಗರಕ್ಕೂ ಅಶ್ವತ್ಥ ನಾರಾಯಣ ಅವರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದರು. ನಾನೊಬ್ಬ ಸಚಿವ. ಯಾವ ಜಿಲ್ಲೆಗೆ ಬೇಕಾದರೂ ಹೋಗ್ತೀನಿ ಎಂದು ಬೇಸರ ವ್ಯಕ್ತಪಡಿಸಿದರು. ಬರೀ ಕುತಂತ್ರ ಮಾಡಿಕೊಂಡು ಬಂದ ಇವರ ರಾಜಕೀಯ ಇತಿಹಾಸದ ಬಗ್ಗೆ ಎಲ್ಲರಿಗೂ ಗೊತ್ತಿದೆ. ರಾಮನಗರ ಜಿಲ್ಲೆಗೆ ಇವರು ಅವಮಾನ, ಕಳಂಕ. ಅಣ್ಣತಮ್ಮಂದಿರು ಇಬ್ಬರೂ ತಿಳಿವಳಿಕೆ ತೆಗೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಭೆಯಲ್ಲಿದ್ದಾಗಲೂ ಇವರು ಹೀಗೆಯೇ ಮಾಡ್ತಿದ್ರಾ? ಬೇಕೆಂದೇ ಪದೇಪದೆ ಘೋಷಣೆ ಕೂಗಿ ನಮ್ಮನ್ನು ಕೆಣಕಿದರು. ಅವರಿಗೆ ಅಲ್ಲಿ ಅಭದ್ರತೆ ಕಾಡಿರಬಹುದು. ರಾಮನಗರ ಇವರಿಗಷ್ಟೇ ಸೇರಿದ್ದಲ್ಲ. ನನಗೂ ಅಷ್ಟೇ ಅಧಿಕಾರ ಇದೆ. ಇವರಿಗಿಂತ ಹೆಚ್ಚಿನ ಸಂಬಂಧವಿದೆ, ರಾಮನಗರದಲ್ಲಿ ಇವರಿಗಿಂತ ನನಗೆ ಓನರ್ಶಿಪ್ ಹೆಚ್ಚಿದೆ ಎಂದರು. ನಾನು ತಂತ್ರ-ಕುತಂತ್ರದ ನರಿ ರಾಜಕೀಯ ಮಾಡುವುದಿಲ್ಲ. ಆ ರೀತಿ ತುಳಿದು ಬೆಳೆಯುವ ರಾಜಕೀಯ ನನ್ನದಲ್ಲ. ಅವರವರ ಸರ್ಕಾರಗಳನ್ನ ಅವರವರೇ ಬೀಳಿಸಿರೋದು ಎಂದು ವ್ಯಂಗ್ಯವಾಡಿದರು.
ಮತ್ತೆ ಗಂಡಸ್ತನದ ಚಾಲೆಂಜ್ ರಾಮನಗರ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸುವ ಸಂದರ್ಭದಲ್ಲಿ ಮತ್ತೆ ಮತ್ತೆ ಗಂಡಸ್ತನದ ಬಗ್ಗೆ ಮಾತನಾಡಿದರು. ಡಿಕೆ ಬ್ರದರ್ಸ್ ಮತ್ತು ಅವರ ಶಿಷ್ಯಂದರಿಗೆ ಯೋಗ್ಯತೆ ಹಾಗು ಗಂಡಸ್ತನ ಇದ್ದರೆ ಅಭಿವೃದ್ಧಿ ಕೆಲಸದಲ್ಲಿ ತೋರಿಸಲಿ. ನಾನು ವೇದಿಕೆಯಲ್ಲಿ ಈ ಮಾತನ್ನು ಪರೋಕ್ಷವಾಗಿ ಹೇಳಿದ್ದೆ. ಆದರೆ ಇಂದು ನೇರವಾಗಿ ಮಾತನಾಡುತ್ತಿದ್ದೇನೆ. ಡಿಕೆಶಿ ಈ ಲೋಕದಲ್ಲಿ ಇದ್ದಾರಾ ಯಾವ ಲೋಕದಲ್ಲಿ ಇದ್ದಾರೆ? ಡಿಕೆಶಿ ಬ್ರದರ್ಸ್ ಕುತ್ತಿಗೆ ಕುಯ್ಯುವ ಕುತಂತ್ರದ ರಾಜಕಾರಣ ಮಾಡಿ ಬೆಳೆದು ಬಂದವವರು. ಅವರ ಯೋಗ್ಯತೆಯ ಬಗ್ಗೆ ರಾಜ್ಯದ ಜನರಿಗೆ ಗೊತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವನಾಗಿ ಮತ್ತೆ ರಾಮನಗರ ಜಿಲ್ಲೆಗೆ ತೆರಳುತ್ತೇನೆ. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ರಾಮನಗರವನ್ನು ಮತ್ತಷ್ಟು ಅಭಿವೃದ್ಧಿ ಮಾಡುತ್ತೇನೆ. ಇದನ್ನೇ ಸವಾಲಾಗಿ ಸ್ವೀಕರಿಸುತ್ತೇನೆ ಎಂದು ಘೋಷಿಸಿದರು.
ಇದನ್ನೂ ಓದಿ: ರಾಮನಗರಕ್ಕೆ ಬಂದು ಗಂಡಸ್ತನದ ಮಾತಾಡ್ತೀರಾ, ಇದು ರಾಮನಗರದ ಜನತೆಗೇ ಹಾಕಿದ ಸವಾಲು ಗೊತ್ತಾ? ಡಿಕೆ ಸುರೇಶ್ ಗುಡುಗು ಇದನ್ನೂ ಓದಿ: ರಾಮನಗರ ಜಿಲ್ಲೆಗೆ ಬಂದು ಪ್ರಚಾರ ಪಡೆಯುವ ಅಗತ್ಯವಿಲ್ಲ; ಚುನಾವಣೆಗೆ ತಿಂಗಳಿರುವಾಗ ರಾಜಕಾರಣ ಮಾಡೋಣ: ಸಿಎಂ ಬೊಮ್ಮಾಯಿ
Published On - 7:51 pm, Tue, 4 January 22