ಜಿಲ್ಲೆಯ ಅಭಿವೃದ್ಧಿ, ಕರ್ನಾಟಕದ ಅಭಿವೃದ್ಧಿಗೆ ಸಂಕಲ್ಪ ಮಾಡಲಾಗಿದೆ. ಈ ಘಟನೆಗಳು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಲ್ಲ. ಚುನಾವಣೆಗೆ 1 ತಿಂಗಳಿರುವಾಗ ರಾಜಕಾರಣ ಮಾಡೋಣ ಎಂದು ರಾಮನಗರದಲ್ಲಿ ವೇದಿಕೆಯಲ್ಲಿ ಅಶ್ವತ್ಥ ನಾರಾಯಣ, ಡಿಕೆ ಸುರೇಶ್, ಕಾಂಗ್ರೆಸ್, ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಗಲಾಟೆಗೆ ಸಂಬಂಧಿಸಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
ರಾಮನಗರ ಜಿಲ್ಲೆ ಕರ್ನಾಟಕಕ್ಕೆ ಮಾದರಿಯಾಗುವ ಜಿಲ್ಲೆ. ಅಭಿಮಾನ, ಸಂತಸದಿಂದ ರಾಮನಗರಕ್ಕೆ ಬಂದಿದ್ದೇನೆ. ಜಿಲ್ಲೆಯ ಅಭಿವೃದ್ಧಿಗೆ ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ. ಚುನಾವಣೆಯ 1 ತಿಂಗಳು ಮಾತ್ರ ರಾಜಕಾರಣ ಮಾಡೋಣ. ರಾಮನಗರ ಜಿಲ್ಲೆಗೆ ಬಂದು ಪ್ರಚಾರ ಪಡೆಯುವ ಅಗತ್ಯವಿಲ್ಲ. ರಾಮನಗರ ಜಿಲ್ಲೆಗೆ ಕೊಡುಗೆ ಕೊಡಲು ಇಲ್ಲಿಗೆ ಬಂದಿದ್ದೇನೆ. ಹಲವಾರು ವಿಚಾರಗಳು ನನೆಗುದಿಗೆ ಬಿದ್ದಿರುವುದು ಗೊತ್ತಿದೆ. ಜನರು ರಾಜಕಾರಣ ಮಾಡುವುದನ್ನು ಕಲಿಯಬೇಕು ಎಂದು ಬೊಮ್ಮಾಯಿ ತಿಳಿಸಿದ್ದಾರೆ.
ಜನರು ರಾಜಕಾರಣ ಮಾಡಿದರೆ ನಮ್ಮನ್ನು ಕೈಬಿಡುವುದಿಲ್ಲ. ಕರ್ನಾಟಕ ಏಕೀಕರಣಕ್ಕೆ ಹೋರಾಟ ಮಾಡಿದ ಜಿಲ್ಲೆ ಇದು. ರಾಮನಗರ ಜಿಲ್ಲೆಯ ಜೊತೆ ಹಳೆಯ ಸಂಬಂಧವಿದೆ. ಕೆಂಗಲ್ ಹನುಮಂತಯ್ಯ ಅಖಂಡ ಕರ್ನಾಟಕದ ಸಿಎಂ ಆಗಿದ್ರು. ಕೆಂಗಲ್ ಹನುಮಂತಯ್ಯನವರು ಸುಸಂಸ್ಕೃತ ಆಡಳಿತ ನೀಡಿದ್ರು. ಇಂದಿರಾ ಗಾಂಧಿಯವರ ಜತೆ ಅತ್ಯಂತ ಒಡನಾಟ ಹೊಂದಿದ್ದರು. ಪ್ರಧಾನಿ ಜತೆ ಹೆಚ್.ಡಿ. ದೇವೇಗೌಡರಿಗೆ ಅನ್ಯೋನ್ಯ ಸಂಬಂಧವಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.
ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಚಿಕ್ಕಕಲ್ಯಾ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಚಾಲನೆ ನೀಡಿದ್ದಾರೆ. ಎತ್ತಿನಗಾಡಿಯಲ್ಲಿ ಆಗಮಿಸಿ ಸಿಎಂ ಬೊಮ್ಮಾಯಿಗೆ ಭವ್ಯ ಸ್ವಾಗತ ಕೋರಲಾಗಿದೆ. ಸಚಿವರಾದ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಡಾ.ಸುಧಾಕರ್, ಭೈರತಿ ಬಸವರಾಜ್, ಸಂಸದ ಡಿ.ಕೆ.ಸುರೇಶ್, ಎಂಎಲ್ಸಿ ರವಿ, ಮಾಜಿ ಸಚಿವ ಸಿ.ಪಿ.ಯೋಗೇಶ್ವರ್, ಮಠಾಧೀಶರು ಭಾಗಿ ಆಗಿದ್ದಾರೆ.
ಇದನ್ನೂ ಓದಿ: ರಾಮನಗರ: ವೇದಿಕೆಯಲ್ಲೇ ಬಿಜೆಪಿ- ಕಾಂಗ್ರೆಸ್ ನಾಯಕರ ಜಟಾಪಟಿ; ಅಶ್ವತ್ಥ ನಾರಾಯಣ ಫ್ಲೆಕ್ಸ್ ಹರಿದು ಆಕ್ರೋಶ!
ಇದನ್ನೂ ಓದಿ: ರಾಮನಗರ: ಸಿಎಂ ಸಮ್ಮುಖದಲ್ಲೇ ಅಶ್ವತ್ಥ ನಾರಾಯಣ, ಡಿಕೆ ಸುರೇಶ್ ವಾಕ್ಸಮರ; ವೇದಿಕೆಯಲ್ಲೇ ಧರಣಿ ನಡೆಸಿದ ಕಾಂಗ್ರೆಸ್!