Karnataka Weather: ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆ; ರಾಜ್ಯದ ಹವಾಮಾನ ಹೇಗಿರಲಿದೆ? ವರದಿ ಇಲ್ಲಿದೆ
ಕಳೆದ ಎರಡು ದಿನಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮನೆ, ಆಸ್ತಿ ಪಾಸ್ತಿಗೆ ಹಾನಿ ಉಂಟಾಗಿದೆ. ಮರ, ಕರೆಂಟ್ ಕಂಬ ಉರುಳಿರುವುದು ಕಂಡುಬಂದಿದೆ.
ಬೆಂಗಳೂರು: ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಕರ್ನಾಟಕದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಈ ಬಗ್ಗೆ ಎಚ್ಚರಿಕೆ ನೀಡಿರುವ ಭಾರತೀಯ ಹವಾಮಾನ ಇಲಾಖೆ ಸೌತ್ವೆಸ್ಟ್ ಮಾನ್ಸೂನ್ ಕಾರಣದಿಂದ ಇನ್ನೂ ಎರಡು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆ ವ್ಯಕ್ತಪಡಿಸಿದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸಹಿತ ದಕ್ಷಿಣ ಒಳನಾಡಿನಲ್ಲಿ ಇಂದು (ಜೂನ್ 15) ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಹವಾಮಾನ ಇಲಾಖೆಯ ನಿರ್ದೇಶಕ ಸಿ.ಎಸ್. ಪಾಟೀಲ್ ಕರಾವಳಿ ಜಿಲ್ಲೆಗಳಲ್ಲಿ ಜೂನ್ 16, 17 ಮತ್ತು 18ರಂದು ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದು, 16, 17 ರಂದು ಆರೆಂಜ್ ಅಲರ್ಟ್ ಹಾಗೂ 18ನೇ ತಾರೀಖಿನಂದು ಯೆಲ್ಲೋ ಅಲರ್ಟ್ ಘೋಷಿಸಿದ್ದಾರೆ. ಜೂನ್ 17ರಂದು ಶಿವಮೊಗ್ಗ, ಕೊಡಗು, ಗದಗ ಮತ್ತು ಹಾವೇರಿ ಜಿಲ್ಲೆಗೂ ಆರೆಂಜ್ ಅಲರ್ಟ್ ನೀಡಲಾಗಿದೆ.
ಸೋಮವಾರ ದಕ್ಷಿಣ ಕನ್ನಡದ ಪಣಂಬೂರು, ಕೊಡಗು ಜಿಲ್ಲೆಯ ಕುಟ್ಟ, ಭಾಗಮಂಡಲದಲ್ಲಿ ಅತಿಹೆಚ್ಚು 9 ಸೆಂಟಿ ಮೀಟರ್ ಮಳೆಯಾಗಿತ್ತು. ಮಂಗಳೂರು ಮತ್ತು ಆಗುಂಬೆಯಲ್ಲಿ 8 ಸೆಂಟಿ ಮೀಟರ್ ಮಳೆಯಾಗಿತ್ತು. ಈ ವೇಳೆ, ಉತ್ತರ ಕರ್ನಾಟಕದಲ್ಲಿ ಸಾಧಾರಣ ಮಳೆಯಾಗಿತ್ತು. ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಎರಡು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.
ಕಳೆದ ಎರಡು ದಿನಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಮನೆ, ಆಸ್ತಿ ಪಾಸ್ತಿಗೆ ಹಾನಿ ಉಂಟಾಗಿದೆ. ಮರ, ಕರೆಂಟ್ ಕಂಬ ಉರುಳಿರುವುದು ಕಂಡುಬಂದಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಸಾಧಿಸುವ ಮರವೂರು ಸೇತುವೆಯಲ್ಲಿ ಬಿರುಕು ಮೂಡಿದೆ. ಕಳೆದ ರಾತ್ರಿ ಸುರಿದ ಭಾರೀ ಮಳೆಗೆ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ಜನರ ಸುರಕ್ಷತೆಯ ದೃಷ್ಠಿಯಿಂದ ಸೇತುವೆಯ ಮೇಲೆ ಜನಸಂಚಾರ ಸ್ಥಗಿತಗೊಳಿಸಲಾಗಿದೆ. ಬದಲಿ ಮಾರ್ಗದ ಮೂಲಕ ಸಂಚಾರ ನಡೆಸಲಾಗುತ್ತಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಹೇಳಿದ್ದಾರೆ.
ಮಳೆಯಿಂದಾಗಿ ಜಿಲ್ಲೆಗಳ ನದಿಯ ನೀರಿನ ಮಟ್ಟ ಕೂಡ ಏರಿಕೆಯಾಗಿದೆ. ನೇತ್ರಾವತಿ, ಕುಮಾರಧಾರ ಹಾಗೂ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಕೊಡಗು ಜಿಲ್ಲಾಡಳಿತದ ಪ್ರಕಾರ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಕೂಡ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.
ಮುಂಬೈ- ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಪ್ರದೇಶಗಳಲ್ಲಿ ಕೂಡ ಸೋಮವಾರ ಮತ್ತು ಮಂಗಳವಾರ ಮಳೆಯಾಗಿದೆ.
2012 ರಿಂದೀಚೆಗೆ ಭಾರತದ ಹಲವಾರು ಕೇಂದ್ರಗಳಲ್ಲಿ ಮಳೆ ಪ್ರಮಾಣ ಜಾಸ್ತಿಯಾಗುತ್ತಿದೆ: ಭೂ ವಿಜ್ಞಾನ ಇಲಾಖೆ