2012 ರಿಂದೀಚೆಗೆ ಭಾರತದ ಹಲವಾರು ಕೇಂದ್ರಗಳಲ್ಲಿ ಮಳೆ ಪ್ರಮಾಣ ಜಾಸ್ತಿಯಾಗುತ್ತಿದೆ: ಭೂ ವಿಜ್ಞಾನ ಇಲಾಖೆ

2020 ಮಾನ್ಸೂನ್ ಸೀಸನ್​ನಲ್ಲಿ ದೇಶದ ಬೇರೆ ಬೇರೆ ಭಾಗಗಳಲ್ಲಿ ‘ಹೆಚ್ಚು,’ ‘ಅತಿ ಹೆಚ್ಚು,’ ಮತ್ತು ‘ಭಾರೀ,’ ಪ್ರಮಾಣದ ಮಳೆಗಳಾದವು. ಇದರಿಂದಾಗಿ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ಅಸ್ಸಾಂ, ಬಿಹಾರ ಮತ್ತು ತೆಲಂಗಾಣ ರಾಜ್ಯಗಳ ಕೆಲ ಭಾಗಗಳಲ್ಲಿ ಪ್ರವಾಹಗಳು ಬಂದವು.

2012 ರಿಂದೀಚೆಗೆ ಭಾರತದ ಹಲವಾರು ಕೇಂದ್ರಗಳಲ್ಲಿ ಮಳೆ ಪ್ರಮಾಣ ಜಾಸ್ತಿಯಾಗುತ್ತಿದೆ: ಭೂ ವಿಜ್ಞಾನ ಇಲಾಖೆ
ಸಾಂದರ್ಭಿಕ ಚಿತ್ರ
TV9kannada Web Team

| Edited By: Arun Belly

Jun 14, 2021 | 9:48 PM

ನವದೆಹಲಿ: ಪ್ರಾಯಶಃ ಇದು ನಿಮ್ಮ ಗಮನಕ್ಕೂ ಬಂದಿರಬಹುದು. ಇತ್ತೀಚಿನ ವರ್ಷಗಳಲ್ಲಿ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ದೇಶದಾದ್ಯಂತ ಮಳೆಯ ಪ್ರಮಾಣ ಹೆಚ್ಚುತ್ತಲೇ ಸಾಗುತ್ತಿದೆ. ಕೇಂದ್ರ ಭೂ ವಿಜ್ಞಾನಗಳ ಇಲಾಖೆ ಬಹಿರಂಗಗೊಳಿಸಿರುವ ಮಾಹಿತಿಯ ಪ್ರಕಾರ ದೇಶದೆಲ್ಲೆಡೆ ‘ಹೆಚ್ಚು,’ ‘ಅತಿ ಹೆಚ್ಚು’ ಮತ್ತು ‘ಭಾರೀ’ ಪ್ರಮಾಣದ ಮಳೆಗಳು ಭಾರತದಲ್ಲಿ ಆಗುತ್ತಿವೆ. 2012 ರಲ್ಲಿ 185 ಕೇಂದ್ರಗಳಲ್ಲಿ ಭಾರೀ ಮಳೆಯಾದರೆ, 2020ರಲ್ಲಿ ಇದು ಹೆಚ್ಚು ಕಡಿಮೆ ಶೇಕಡಾ 85 ರಷ್ಟು ಹೆಚ್ಚಿ 341 ಕೇಂದ್ರಗಳಲ್ಲಿ ಅತೀವ ಮಳೆ ಸುರಿದಿದೆ ಎಂದು ಮಾಹಿತಿ ತಿಳಿಸುತ್ತದೆ. ಮತ್ತೂ ಗಾಬರಿಯಾಗುವ ಸುದ್ದಿಯೆಂದರೆ, 2019ರಲ್ಲಿ 554 ಭಾಗಗಳಲ್ಲಿ ‘ಭಾರೀ ಮಳೆ’ ಸುರಿದಿದೆ. ಹಾಗೆಯೇ, ಸುಮಾರು 3,056 ಕೇಂದ್ರಗಳಲ್ಲಿ ‘ಅತಿ ಹೆಚ್ಚು’ ಮಳೆಯಾಗಿದೆ, ಎಂದು ಇಲಾಖೆ ಹೇಳಿದೆ.

ಮಳೆಯ ಪ್ರಮಾಣಗಳ ಕಡೆ ಬೆಳಕು ಚೆಲ್ಲುವುದಾದರೆ, 15 ಮಿಮೀಗಳಿಗಿಂತ ಕಡಿಮೆ ಮಳೆಯನ್ನು ‘ಹಗುರ’, 15 ಮಿಮೀ ನಿಂದ 64.5 ಮಿಮೀ ವರೆಗಿನ ಮಳೆಯನ್ನು ‘ಸಾಧಾರಣ,’ 64.5 ಮಿಮೀನಿಂದ ಹಿಡಿದು 115.6 ಮಿಮೀವರೆಗೆ ಸುರಿವ ಮಳೆಯನ್ನು ‘ಹೆಚ್ಚು’, 115.6 ರಿಂದ 204.4 ಮಿಮೀವರೆಗಿನ ಮಳೆಯನ್ನು ‘ಅತಿ ಹೆಚ್ಚು’ ಹಾಗೂ 204.4 ಮಿಮೀಗಳಿಗಿಂತ ಜಾಸ್ತಿ ಸುರಿಯುವ ಮಳೆಯನ್ನು ‘ಭಾರೀ’ ಎಂದು ಪರಿಗಣಿಸಲಾಗುತ್ತದೆ. 2012, ಜೂನ್​ನಿಂದ ಸೆಪ್ಟಂಬರ್​ವರೆಗಿನ ನೈಋತ್ಯ ಮಾನ್ಸೂನ್ ಸಂದರ್ಭದಲ್ಲಿ 1,251 ಕೇಂದ್ರಗಳಲ್ಲಿ ಅತಿ ಹೆಚ್ಚು ಮಳೆ ಸುರಿಯಿತು ಎಂದು ಇಲಾಖೆ ತಿಳಿಸುತ್ತದೆ. 2020 ರ ಇದೇ ಅವಧಿಯಲ್ಲಿ 1,912 ಕೇಂದ್ರಗಳಲ್ಲಿ ‘ಅತಿ ಹೆಚ್ಚು’ (ಶೇಕಡಾ 53ರಷ್ಟು ಹೆಚ್ಚಳ) ಮಳೆ ಸುರಿದಿದೆ,

ಭಾರತದಲ್ಲಿ ಜೂನ್​ ಸೆಪ್ಟಂಬರ್​ವರೆಗಿನ ಅವಧಿಯನ್ನು ಮುಖ್ಯ ಮಳೆಗಾಲದ ಸೀಸನ್​ ಎಂದು ಪರಿಗಣಿಸಲಾಗುತ್ತದೆ.

2017 ಮತ್ತು 2019 ರ ನಡುವೆ ‘ಅತಿ ಹೆಚ್ಚು’ ಮತ್ತು ಭಾರೀ’ ಮಳೆ ಸುರಿದ ಸಂದರ್ಭಗಳು ಹೆಚ್ಚಾಗಿವೆ. 2017ರಲ್ಲಿ 261 ಕೇಂದ್ರಗಳು ‘ಭಾರೀ’ ಮಳೆ ಕಂಡರೆ, 2019 ರಲ್ಲಿ ‘ಭಾರೀ’ ಮಳೆ ಕಂಡ ಕೇಂದ್ರಗಳ ಸಂಖ್ಯೆ 321 ರಷ್ಟು ಹೆಚ್ಚಿ 554 ತಲುಪಿತು.

2017ರಲ್ಲಿ 1,824 ಕೇಂದ್ರಗಳಲ್ಲಿ ‘ಅತಿ ಹೆಚ್ಚು’ ಮಳೆ ಸುರಿಯಿತು. ಇದು 2018ರಲ್ಲಿ 2,181 ಮತ್ತು 2019ರಲ್ಲಿ 3,056ಕ್ಕೆ ಹೆಚ್ಚಿತು.

2020 ಮಾನ್ಸೂನ್ ಸೀಸನ್​ನಲ್ಲಿ ದೇಶದ ಬೇರೆ ಬೇರೆ ಭಾಗಗಳಲ್ಲಿ ‘ಹೆಚ್ಚು,’ ‘ಅತಿ ಹೆಚ್ಚು,’ ಮತ್ತು ‘ಭಾರೀ,’ ಪ್ರಮಾಣದ ಮಳೆಗಳಾದವು. ಇದರಿಂದಾಗಿ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಕೇರಳ, ಉತ್ತರ ಪ್ರದೇಶ, ಅಸ್ಸಾಂ, ಬಿಹಾರ ಮತ್ತು ತೆಲಂಗಾಣ ರಾಜ್ಯಗಳ ಕೆಲ ಭಾಗಗಳಲ್ಲಿ ಪ್ರವಾಹಗಳು ಬಂದವು.

2020ರಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ 19,241 ಜನ ಮತ್ತು 334 ಜಾನುವಾರಗಳನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ರವಾನಿಸಿತು.

ಗೃಹ ಸಚಿವಾಲಯದ ಬಿಡುಗಡೆ ಆಗಿರುವ ದತ್ತಾಂಶದ ಪ್ರಕಾರ 2020ರಲ್ಲಿ ‘ಭಾರೀ ಮಳೆ’ ಮತ್ತು ಅದರಿಂದ ಉಂಟಾದ ಪ್ರವಾಹಗಳಿಂದಾಗಿ 1,503 ಜನ ಪ್ರಾಣ ಕಳೆದುಕೊಂಡರು, 7,842 ಜಾನುವಾರು ನೀರು ಪಾಲಾದವು ಮತ್ತು 2,75,045 ಮನೆಗಳು ಕೊಚ್ಚಿಹೋದವು. ಮಳೆ ಮತ್ತು ಪ್ರವಾಹ 20.75 ಲಕ್ಷ ಹೆಕ್ಟೇರ್​ಗಳಲ್ಲಿನ ಬೆಳೆಗಳನ್ನು ನಾಶ ಮಾಡಿದವು. ಪಶ್ಚಿಮ ಬಂಗಾಳದಲ್ಲಿ ಅತಿಹೆಚ್ಚು 258 ಸಾವುಗಳು ಸಂಭವಿಸಿದರೆ ಮಧ್ಯಪ್ರದೇಶ ಮತ್ತು ಗುಜರಾತ್​ನಲ್ಲಿ ತಲಾ 190 ಜನ ಸಾವನ್ನಪ್ಪಿದ್ದರು.

ಭೂ ವಿಜ್ಞಾನ ಇಲಾಖೆಯು 2020ರಲ್ಲಿ ಸಂಸತ್ತಿಗೆ, ‘ಭಾರೀ’ ಪ್ರಮಾಣದ ಮಳೆಗಳಿಂದಾಗಿ ಭಾರತದ ಹಲವಾರು ಭಾಗಗಳಲ್ಲಿ ಪ್ರವಾಹಗಳು ತಲೆದೋರುತ್ತಿವೆ ಎಂದು ಹೇಳಿತ್ತು. ‘ಬದಲಾಗುತ್ತಿರುವ ಹವಾಮಾನದ ಹಿನ್ನೆಲೆಯಲ್ಲಿ ಕೇಂದ್ರೀಯ ಮತ್ತು ಉತ್ತರ ಭಾರತವಲ್ಲದೆ ಪಶ್ಚಿಮ ಹಿಮಾಲಯ ಪ್ರದೇಶಗಳಲ್ಲಿ ಭಾರೀ ಪ್ರಮಾಣದ ಮಳೆ ಆಗುತ್ತಿದೆ. ಇದನ್ನೇ ನೇರವಾದ ಕಾರಣವೆಂದು ಹೇಳಲಾಗದಿದ್ದರೂ ದೇಶದ ವಿವಿಧ ಭಾಗಗಳಲ್ಲಿ ಭಾರೀ ಪ್ರಮಾಣದ ಮಳೆ ಜಾಗತಿಕ ತಾಪಮಾನ ಹೆಚ್ಚುತ್ತಿರುವುದರ ನಡುವೆ ಕೊಂಡಿಯಾಗಿರುವ ಸಾಧ್ಯತೆಯಿದೆ,’ ಅಂತ ಇಲಾಖೆ ಹೇಳಿತ್ತು.

ಪ್ರಸಕ್ತ ವರ್ಷ ಮಹಾರಾಷ್ಟ್ರ ಮತ್ತು ಗೋವಾದಲ್ಲಿ ನಿಗದಿತ ಅವಧಿಗಿಂತ ಎರಡು ದಿನ ಮೊದಲೇ ಮಾನ್ಸೂನ್ ಪ್ರವೇಶಿಸಿದ್ದು ನಂತರದ ದಿನಗಳಲ್ಲಿ ಪೂರ್ವ ಕೇಂದ್ರ ಭಾಗ, ಪೂರ್ವ ಮತ್ತು ಈಶಾನ್ಯ ಭಾರತ ಮತ್ತು ಆಗ್ನೇಯ ಭಾಗವನ್ನು ವ್ಯಾಪಿಸಿದೆ.

ಸೋಮವಾರದಂದು ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಭಾರತದ ಹವಾಮಾನ ಇಲಾಖೆಯು ಮಾನ್ಸೂನ್ ಅತಿ ಶೀಘ್ರದಲ್ಲಿ ದೇಶದ ಎಲ್ಲ ಭಾಗಗಳನ್ನು ವ್ಯಾಪಿಸಿದೆ ಎಂದು ಹೇಳಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಬಾರ ಕುಸಿತದಿಂದಾಗಿ ಮಾನ್ಸೂನ್ 10 ದಿನಗಳ ಅವಧಿಯಲ್ಲಿ ದೇಶದ ಹೆಚ್ಚಿನ ಭಾಗವನ್ನು ಆವರಿಸಿದೆ ಎಂದು ಇಲಾಖೆ ಹೇಳಿದೆ.

ಆದರೆ, ಮಧ್ಯ-ಅಕ್ಷಾಂಶದ ಪಶ್ಚಿಮಾಭಿಮುಖ ಗಾಳಿಯಿಂದಾಗಿ ಭಾರತದ ಇತರ ಆಗ್ನೇಯ ಭಾಗಗಳಲ್ಲಿ ಮಾನ್ಸೂನ್​ನ ಮುಂದುವರಿಕೆ ಕುಂಠಿತಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: Monsoon 2021: ಮುಂಬೈನಲ್ಲಿ ಮಹಾ ಮಳೆ; ಮುಂದಿನ ಎರಡು ದಿನ ಆರೆಂಜ್​ ಅಲರ್ಟ್​​, ಪರಿಸ್ಥಿತಿ ಎದುರಿಸಲು ರಕ್ಷಣಾ ತಂಡಗಳು ಸನ್ನದ್ಧ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada