ಕಾಂಗ್ರೆಸ್ ಶಾಸಕರ ದುಬೈ ಪ್ರವಾಸಕ್ಕೆ ಮರುಜೀವ: ಸತೀಶ್ ಜಾರಕಿಹೊಳಿ ಬೆಂಬಲಿಗರ ತಂಡದಿಂದ ಸಿದ್ಧತೆ
ಹಿಡಕಲ್ ಡ್ಯಾಮ್ ಯೋಜನೆ ಕಾಮಗಾರಿಯ ಟೆಂಡರ್ಗೆ ಏಕಪಕ್ಷೀಯವಾಗಿ ಅನುಮೋದನೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್ ನಿರ್ಧಾರದಿಂದ ಸಚಿವ ಸತೀಶ್ ಜಾರಕಿಹೊಳಿ ಆಕ್ರೋಶಗೊಂಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್ನಲ್ಲಿ ಬಣ ತಿಕ್ಕಾಟ ಮತ್ತೆ ತೀವ್ರಗೊಳ್ಳುವ ಸುಳಿವು ಲಭ್ಯವಾಗಿದೆ. ಜಾರಕಿಹೊಳಿ ಬೆಂಬಲಿಗ ಶಾಸಕರ ದುಬೈ ಪ್ರವಾಸ ಮತ್ತೆ ಮುನ್ನೆಲೆಗೆ ಬಂದಿದೆ.
![ಕಾಂಗ್ರೆಸ್ ಶಾಸಕರ ದುಬೈ ಪ್ರವಾಸಕ್ಕೆ ಮರುಜೀವ: ಸತೀಶ್ ಜಾರಕಿಹೊಳಿ ಬೆಂಬಲಿಗರ ತಂಡದಿಂದ ಸಿದ್ಧತೆ](https://images.tv9kannada.com/wp-content/uploads/2025/01/dk-shivakumar-and-satish-jarkiholi.jpg?w=1280)
ಬೆಂಗಳೂರು, ಜನವರಿ 29: ಬೆಳಗಾವಿ ರಾಜಕೀಯಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಎಂಟ್ರಿಯಾದ ಬೆನ್ನಲ್ಲೇ ಬಿರುಸುಗೊಂಡಿದ್ದ ಬಣ ತಿಕ್ಕಾಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಹೈಕಮಾಂಡ್ ಮಧ್ಯ ಪ್ರವೇಶ, ಖಡಕ್ ಸೂಚನೆ ಬಳಿಕ ತುಸು ತಣ್ಣಗಾದಂತೆ ಕಂಡಿದ್ದ ಬಣ ಸಂಘರ್ಷ ಈಗ ಮತ್ತೆ ಮುನ್ನೆಲೆಗೆ ಬರುವ ಎಲ್ಲ ಸಾಧ್ಯತೆಗಳು ಗೋಚರಿಸಿವೆ. ಸಚಿವ ಸತೀಶ್ ಜಾರಕಿಹೊಳಿ ಬಣದ 15 ಶಾಸಕರ ತಂಡ ತೆರೆಯ ಮರೆಯಲ್ಲೇ ದುಬೈ ಪ್ರವಾಸಕ್ಕೆ ಸಿದ್ಧತೆ ಮಾಡಿಕೊಂಡಿದೆ ಎಂಬುದು ತಿಳಿದುಬಂದಿದೆ.
ಕಾಂಗ್ರೆಸ್ ಬೆಳಗಾವಿ ಸಮಾವೇಶದ (ಗಾಂಧಿ ಭಾರತ ಸಮಾವೇಶ) ಸಂದರ್ಭದಲ್ಲಿ, ಮೊದಲ ಬಾರಿ ಆಯ್ಕೆಯಾದ ಕಾಂಗ್ರೆಸ್ ಶಾಸಕರಿಂದ ವಿದೇಶ ಪ್ರವಾಸಕ್ಕೆ ಪ್ಲ್ಯಾನ್ ನಡೆದಿರುವ ಬಗ್ಗೆ ಚರ್ಚೆಯಾಗಿತ್ತು. ಆದರೆ, ನಂತರ ಆ ವಿಚಾರ ತಣ್ಣಗಾಗಿತ್ತು. ಆದರೆ, ಇದೀಗ ಮತ್ತೆ ಆ ವಿಷಯ ಮುನ್ನೆಲೆಗೆ ಬಂದಿದ್ದು ಪ್ರವಾಸದ ನೆಪದಲ್ಲಿ ಸತೀಶ್ ಜಾರಕಿಹೊಳಿ ಶಕ್ತಿ ಪ್ರದರ್ಶನಕ್ಕೆ ಮುಂದಾಗುತ್ತಿದ್ದಾರೆ ಎನ್ನಲಾಗಿದೆ.
ಸತೀಶ್ ಜಾರಕಿಹೊಳಿಯನ್ನು ಕೆರಳಿಸಿದ ಡಿಕೆ ಶಿವಕುಮಾರ್ ನಡೆ
ತಣ್ಣಗಾಗಿದ್ದ ತಿಕ್ಕಾಟದ ಬೆಂಕಿಗೆ ಮತ್ತೆ ತುಪ್ಪ ಸುರಿದಿದ್ದೇ ಕಾಮಗಾರಿ ವಿಚಾರ. ಹಿಡಕಲ್ ಡ್ಯಾಮ್ ಪೈಪ್‌ಲೈನ್ ಕಾಮಗಾರಿಗೆ ಟೆಂಡರ್ ಅನುಮೋದನೆ ನೀಡಿದ್ದು ಸತೀಶ್ ಜಾರಕಿಹೊಳಿ ಮುನಿಸಿಗೆ ಕಾರಣ ಎನ್ನಲಾಗಿದೆ. ಬೆಳಗಾವಿಯ ಹಿಡಕಲ್ ಡ್ಯಾಮ್‌ನಿಂದ ಧಾರವಾಡದ ಕೈಗಾರಿಕಾ ಪ್ರದೇಶಗಳಿಗೆ ಪೈಪ್‌ಲೈನ್ ಮೂಲಕ ನೀರು ಸರಬರಾಜು ಮಾಡುವ 300 ಕೋಟಿ ರೂ. ಮೊತ್ತದ ಕಾಮಗಾರಿ ಟೆಂಡರ್ಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಕಾಮಗಾರಿ ಆರಂಭಿಸಲು ಸೈಲೆಂಟಾಗಿಯೇ ಅನುವು ಮಾಡಿಕೊಟ್ಟಿದ್ದಾರೆ. ಈ ನಡೆ ಸತೀಶ್ ಜಾರಕಿಹೊಳಿ ಅವರನ್ನು ಕೆರಳಿಸಿದೆ.
ಬೆಳಗಾವಿ ಜಿಲ್ಲೆ ಶಾಸಕರಿಂದಲೂ ಡಿಕೆಶಿ ವಿರುದ್ಧ ಆಕ್ರೋಶ
ಬೆಳಗಾವಿ ಜಿಲ್ಲೆಯ ಶಾಸಕರಿಂದಲೂ ಡಿಕೆ ಶಿವಕುಮಾರ್ ನಡೆಗೆ ಆಕ್ರೋಶ ವ್ಯಕ್ತವಾಗಿದೆ. ಜಿಲ್ಲೆಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಸಿಟ್ಟು ಅವರಲ್ಲಿದೆ. ಡ್ಯಾಮ್ ಬೆಳಗಾವಿಯದ್ದು, ನೀರು ಧಾರವಾಡಕ್ಕೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿ ಆಯ್ಕೆಯಾದ ಕಾಂಗ್ರೆಸ್ ಶಾಸಕರಿಂದ ವಿದೇಶ ಪ್ರವಾಸಕ್ಕೆ ಪ್ಲ್ಯಾನ್: ಡಿಕೆಶಿ ಅಚ್ಚರಿಯ ಪ್ರತಿಕ್ರಿಯೆ
ಹೀಗಾಗಿ ಡಿಕೆ ಶಿವಕುಮಾರ್ ನಿರ್ಧಾರಗಳಿಂದ ಆಕ್ರೋಶಗೊಂಡಿರುವ ಸತೀಶ್ ಜಾರಕಿಹೊಳಿ ತಮ್ಮ ಬೆಂಬಲಿಗರ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಫೆಬ್ರವರಿ ಮೊದಲ ವಾರದವರೆಗೆ ಸುಮ್ಮನಿರಿ ಎಂದು ಸತೀಶ್ ಬೆಂಬಲಿಗ ಶಾಸಕರಿಗೆ ಸೂಚನೆ ನೀಡಿದ್ದಾರೆ.
ಕಾಮಗಾರಿ ನಿಲ್ಲಿಸಲು ಡಿಸಿಗೆ ಸತೀಶ್ ಸೂಚನೆ
ಏತನ್ಮಧ್ಯೆ, ಹಿಡಕಲ್ ಡ್ಯಾಮ್ ಪೈಪ್‌ಲೈನ್ ಕಾಮಗಾರಿ ನಿಲ್ಲಿಸುವಂತೆ ಡಿಸಿಗೆ ಸತೀಶ್ ಜಾರಕಿಹೊಳಿ ಸೂಚನೆ ನೀಡಿದ್ದಾರೆ. ಇದು ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ನಡುವಣ ಸಂಘರ್ಷವನ್ನು ಮತ್ತೆ ಮುನ್ನೆಲೆಗೆ ತರುವ ಎಲ್ಲ ಸಾಧ್ಯತೆಗಳಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ