ಲಸಿಕೆ ಪಡೆದಿದ್ದ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಏಕೆ ಬಂತು ಕೊರೊನಾ: ರಾಜ್ಯ ಕಾಂಗ್ರೆಸ್ ಪ್ರಶ್ನೆ
ಲಸಿಕೆ ಪಡೆದರೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಸೋಂಕು ತಗುಲುತ್ತದೆ ಎಂಬರ್ಥದಲ್ಲಿ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.
ಬೆಂಗಳೂರು: ಕೊರೊನಾ ಲಸಿಕೆ ಪರಿಣಾಮಕಾರಿಯಾಗಿ ಇದ್ದಿದ್ದರೆ ಲಸಿಕೆ ಪಡೆದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಏಕೆ ಕೊರೊನಾ ಬಂತು? ಕೊರೊನಾ ಲಸಿಕೆಗಳು ಬೀರುವ ಪರಿಣಾಮದ ಬಗ್ಗೆ ನಾವು ಅನುಮಾನ ವ್ಯಕ್ತಪಡಿಸಿದ್ದೆವು. ನಮ್ಮ ಅನುಮಾನಕ್ಕೆ ಇಂದು ರಾಜ್ಯ ಸರ್ಕಾರಕ್ಕೆ ಪುರಾವೆ ಸಿಕ್ಕಿದೆ ಎಂದು ಕಾಂಗ್ರೆಸ್ನ ರಾಜ್ಯ ಘಟಕ ಟ್ವೀಟ್ ಮಾಡಿದೆ. ‘ಲಸಿಕೆ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ ಸೋಂಕಿನ ಪ್ರಭಾವ ಕಡಿಮೆಗೊಳಿಸುತ್ತದೆಯೇ ಹೊರತು ಅದೇ ಮದ್ದಾಗುವುದಿಲ್ಲ ತಿಳಿಯಿರಿ’. ಕೊರೊನಾ ಲಸಿಕೆ ಪರಿಣಾಮಕಾರಿಯಾಗಿ ಇದ್ದಿದ್ದರೆ ಮುಖ್ಯಮಂತ್ರಿ ಬಿ. ಎಸ್.ಯಡಿಯೂರಪ್ಪರಿಗೆ ಕೊರೊನಾ ಸೊಂಕು ಹೇಗೆ ತಗುಲಿತು ಎಂದು ರಾಜ್ಯ ಕಾಂಗ್ರೆಸ್ ಟೀಕಿಸಿದೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರಿಗೆ ಎರಡನೇ ಬಾರಿ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಗುಣಮುಖರಾಗುವಂತೆ ಹಾರೈಸಿ ಕಾಂಗ್ರೆಸ್ ಟ್ವೀಟ್ ಮಾಡಿದೆ. ಅಲ್ಲದೇ ಲಸಿಕೆ ಪಡೆದರೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿದ್ದರೆ ಸೋಂಕು ತಗುಲುತ್ತದೆ ಎಂಬರ್ಥದಲ್ಲಿ ಕಾಂಗ್ರೆಸ್ ಸರಣಿ ಟ್ವೀಟ್ ಮಾಡಿದೆ.
ಇದೇ ವೇಳೆ ಸಿಎಂ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ಮತ್ತೊಮ್ಮೆ ತಗುಲಿರುವ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ. ಸಿಎಂ ಯಡಿಯೂರಪ್ಪ ಬೇಗನೆ ಗುಣಮುಖರಾಗಲಿ ಎಂದು ಇಬ್ಬರೂ ನಾಯಕರು ಹಾರೈಸಿದ್ದಾರೆ.
ರಾಜ್ಯಾದ್ಯಂತ ಲಸಿಕೆ ಕೊರತೆಯಾಗಿರುವ ವರದಿಗಳು ಪ್ರತಿ ದಿನವೂ ಬರುತ್ತಿವೆ. ಆದರೂ ಆತ್ಮವಂಚನೆಯ ಸುಳ್ಳು ಹೇಳುವ @BJP4Karnataka ಗೆ ಕೊಂಚವೂ ಲಜ್ಜೆ ಇದ್ದಂತಿಲ್ಲ.
ರಾಜ್ಯ ಸರ್ಕಾರಗಳಿಗೆ ಲಸಿಕೆಗಳನ್ನು ನೇರವಾಗಿ ಖರೀದಿಸುವ ಅನುಮತಿಯನ್ನು ಕೇಂದ್ರ ಏಕೆ ನೀಡುತ್ತಿಲ್ಲ? ಈ ಬಗ್ಗೆ ಧ್ವನಿ ಎತ್ತುವ ಧೈರ್ಯ ಏಕೆ ತೋರುತ್ತಿಲ್ಲ ತಾವು? pic.twitter.com/kHkHRX8oMg
— Karnataka Congress (@INCKarnataka) April 16, 2021
ಮುಖ್ಯಮಂತ್ರಿ @BSYBJP ಅವರಿಗೆ ಕೊರೊನಾ ಸೋಂಕು ತಗುಲಿರುವ ಸುದ್ದಿ ತಿಳಿದು ಬೇಸರವಾಯಿತು. ಆದಷ್ಟು ಶೀಘ್ರ ಅವರು ಗುಣಮುಖರಾಗಲಿ ಎಂದು ಹಾರೈಸುತ್ತೇನೆ.
— Siddaramaiah (@siddaramaiah) April 16, 2021
ಕೊರೋನಾ ಸೋಂಕು ಹೆಚ್ಚುತ್ತಿರುವ ಈ ಕಠಿಣ ಪರಿಸ್ಥಿತಿಯಲ್ಲಿ ಜ್ವರವಿದ್ದರೂ ಚುನಾವಣಾ ಪ್ರಚಾರ ಮಾಡಿರುವುದು ಮುಖ್ಯಮಂತ್ರಿ @BSYBJP ಅವರ ಬೇಜವಾಬ್ದಾರಿತನಕ್ಕೆ ಸಾಕ್ಷಿ.
ಈ ಹಿಂದೆ ಕೊರೋನಾ ಸೋಂಕಿತರಾಗಿದ್ದ ರಮೇಶ್ ಜಾರಕಿಹೊಳಿ ಅವರನ್ನು ಚುನಾವಣಾ ಪ್ರಚಾರಕ್ಕೆ ಆಹ್ವಾನಿಸಿದ್ದರು.
ಇಂತರ ಸರ್ಕಾರದಿಂದ ಸೋಂಕು ನಿಯಂತ್ರಣ ಸಾಧ್ಯವೇ?
— Karnataka Congress (@INCKarnataka) April 16, 2021
ಅಲ್ಲಿ @narendramodi ಅವರು ಕರೋನಾದಿಂದ ಜನ ತತ್ತರಿಸುತ್ತಿದ್ದರೂ ಚುನಾವಣಾ ಪ್ರಚಾರದ ದೊಡ್ಡ ದೊಡ್ಡ ರ್ಯಾಲಿ ನಡೆಸಿದ್ದರು.
ಇಲ್ಲಿ @BSYBJP ಅವರು ರಾಜ್ಯ ಕರೋನಾಕ್ಕೆ ತತ್ತರಿಸುತ್ತಿದ್ದರೂ ಸ್ವತಃ ಜ್ವರದಿಂದ ಬಳಲುತ್ತಿದ್ದರೂ ಚುನಾವಣಾ ಪ್ರಚಾರ ನಡೆಸಿದ್ದರು.
ಆಡಳಿತಾರೂಢ ಬಿಜೆಪಿಗೆ ಕರೋನಾ ನಿಯಂತ್ರಣಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ.
— Karnataka Congress (@INCKarnataka) April 16, 2021
ಹಲವೆಡೆ ಲಸಿಕೆ ಕೊರತೆ ಯಾದಗಿರಿ ಜಿಲ್ಲೆಯಾದ್ಯಂತ ಕೊರೊನಾ ಲಸಿಕೆ ಕೊರತೆ ಉಂಟಾಗಿದೆ. ಕಳೆದ 4 ದಿನಗಳಿಂದ ಕೊರೊನಾ ಲಸಿಕೆ ಇಲ್ಲದೆ ಯಾದಗಿರಿ ಜಿಲ್ಲೆಯಲ್ಲಿ ಪರದಾಟ ಸೃಷ್ಟಿಯಾಗಿದೆ. ಜಿಲ್ಲೆಯ ಒಟ್ಟು 325 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಖಾಲಿಯಾಗಿದ್ದು, ನಾಳೆ ಅಥವಾ ನಾಡಿದ್ದು ಕೊರೊನಾ ಲಸಿಕೆ ಬರುವ ಸಾಧ್ಯತೆಯಿದೆ.
ಧಾರವಾಡದಲ್ಲೂ ಕೊರತೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲೂ ಕೊರೊನಾ ವ್ಯಾಕ್ಸಿನ್ ಕೊರತೆ ಉಂಟಾಗಿದೆ. ಲಸಿಕಾ ಕೇಂದ್ರ ಎರಡು ಮತ್ತು ಮೂರರಲ್ಲಿ ಲಸಿಕೆ ಕೊರತೆ ಕಾಣಿಸಿಕೊಂಡಿದ್ದು, 2ನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲು ಬಂದವರು ಲಸಿಕೆ ಕೊರತೆಯಿಂದಾಗಿ ಲಸಿಕೆ ಹಾಕಿಸಿಕೊಳ್ಳದೇ ಹಿಂದಿರುಗುತ್ತಿದ್ದಾರೆ. ಕೇವಲ 50 ಡೋಸ್ ಲಸಿಕೆಯಷ್ಟೇ ಲಸಿಕೆ ಲಭ್ಯವಿದೆ ಎಂದು ಆಸ್ಪತ್ರೆಯ ಸಿಬ್ಬಂದಿ ಲಸಿಕೆ ಪಡೆಯಲು ಬಂದವರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಯಡಿಯೂರಪ್ಪಗೆ ಕೊರೊನಾ ಪಾಸಿಟಿವ್; ಬೆಳಗಾವಿ ನಾಯಕರಿಗೂ ಶುರುವಾಯ್ತು ಢವಢವ!
ಇದನ್ನೂ ಓದಿ: India Corona Cases: ಕೊರೊನಾ 2ನೇ ಅಲೆ ಅಬ್ಬರಕ್ಕೆ ತತ್ತರಿಸಿದ ಭಾರತ.. ಇಂದು 2 ಲಕ್ಷ 17 ಸಾವಿರ ಕೇಸ್ ಪತ್ತೆ
(Congress Opposition leader Siddaramaiah and JDS HD Kumaraswamy was CM BS Yediyurappa health)